Advertisement

23.34 ಲಕ್ಷ ರೂ. ಮೌಲ್ಯದ ಮಿಗತೆ ಬಜೆಟ್ ಮಂಡನೆ

05:54 AM Jan 19, 2019 | |

ಮೂಲ್ಕಿ: ಕಳೆದ ಐದು ವರ್ಷಗಳ ಆಡಳಿತ ನಡೆಸಿ ಮುಂದಿನ ಚುನಾವಣೆಗೆ ಸನ್ನದ್ಧವಾಗಿ ನಿಂತಿರುವ ಬಿಜೆಪಿ ನೇತೃತ್ವದ ಮೂಲ್ಕಿ ನಗರ ಪಂಚಾಯತ್‌ನ ಅಧ್ಯಕ್ಷ ಸುನಿಲ್‌ ಆಳ್ವ ಅವರು, ಈ ಅವಧಿಯ ಕೊನೆಯ ಸಭೆ ಎನ್ನಲಾಗುತ್ತಿರುವ ಮಾಸಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ 2019- 20ನೇ ಸಾಲಿನ 10.68 ಕೋಟಿ ರೂ. ಮೌಲ್ಯದ ವಿವಿಧ ಯೋಜನೆಗಳ, 23.34 ಲಕ್ಷ ರೂ. ಮೌಲ್ಯದ ಮಿಗತೆ ಬಜೆಟನ್ನು ಮಂಡಿಸಿದರು.

Advertisement

ಬಜೆಟ್ ಗಾತ್ರದಲ್ಲಿ ದೊಡ್ಡ ಪ್ರಮಾಣ ಮೊತ್ತವೆಂದು ಗುರುತಿಸುವಲ್ಲಿ ಕಳೆದ ವರ್ಷದ ಆರಂಭಿಕ ಖಾತೆಯಲ್ಲಿ ತೋರಿಸಲಾಗಿರುವ 5.54 ಕೋಟಿ ರೂ. ಮೊತ್ತದಲ್ಲಿ ಕಳೆದ ಸಾಲಿನಲ್ಲಿ ಸರಕಾರ ಬಸ್‌ ನಿಲ್ದಾಣ ರಚನೆಗಾಗಿ 3 ಕೋಟಿ ರೂ. ಅನ್ನು ಈಗಾಗಲೇ ನಗರ ಪಂಚಾಯತ್‌ನ ಖಾತೆಗೆ ವರ್ಗಾವಣೆಗೊಳಿಸಲಾಗಿದೆ.

ಆದಾಯ ನಿರೀಕ್ಷೆ
ಮುಂದಿನ ಸಾಲಿಗೆ ಆಸ್ತಿ ತೆರಿಗೆ ಮತ್ತು ಇತರ ಸೆಸ್ಸುಗಳು ಸೇರಿ ಸುಮಾರು 75 ಲಕ್ಷ ರೂ., ಕಟ್ಟಡ ಮತ್ತು ಉದ್ಯಮ ಪರವಾನಿಗೆಯಿಂದ 12 ಲಕ್ಷ ರೂ., ವಾಣಿಜ್ಯ ಸಂಕಿರ್ಣ, ಬಾಡಿಗೆ ಮಾರುಕಟ್ಟೆ, ಸುಂಕ ವಸೂಲಿ ಮತ್ತು ನೆಲ ಬಾಡಿಗೆಗಳಿಂದ ಸುಮಾರು 11 ಲಕ್ಷ ರೂ. ಹಾಗೂ ಖಾತೆ ಬದಲಾವಣೆ ಮತ್ತು ದಾಖಲೆ ಪ್ರತಿಗಳನ್ನು ಒದಗಿಸುವ ಮೂಲಕ 16 ಲಕ್ಷ ರೂ. ಮೊತ್ತದ ಆದಾಯವನ್ನು ನಿರೀಕ್ಷಿಸಲಾಗಿದೆ.

ಮುಂದಿನ ಅವಧಿಯಲ್ಲಿ ನಿರೀಕ್ಷೆ ಇಟ್ಟು ಕೊಂಡಿರುವ ಆದಾಯದಲ್ಲಿ ಮೂಲ ಸೌಕರ್ಯ, ದಾರಿ ದೀಪ, ರಸ್ತೆ, ಕುಡಿಯುವ ನೀರು ಕಲ್ಪಿಸುವ ವ್ಯವಸ್ಥೆ ಮತ್ತು ಕಚೇರಿ ವೆಚ್ಚಗಳಿಗಾಗಿ 11 ಕೋಟಿ ರೂ. ಮೊತ್ತವನ್ನು ವೆಚ್ಚ ಮಾಡುವ ಯೋಜನೆಯನ್ನು ಬಜೆಟ್‌ನಲ್ಲಿ ತೋರಿಸಲಾಗಿದೆ.

ಪಂಚಾಯತ್‌ನ ಸ್ವಂತ ಆದಾಯದಲ್ಲಿ ಶೇ. 24.10ರ ನಿಧಿಯಡಿ 5.54 ಲಕ್ಷ ರೂ. ಮೊತ್ತವನ್ನು ಪರಿಶಿಷ್ಟ ಪಂಗಡದವರಿಗೆ ಸಹಾಯಧನವಾಗಿ ಕಾದಿರಿಸಲಾಗಿದೆ. ಬಡತನ ರೇಖೆಗಳಿಗಿಂತ ಕೆಳಗಿರುವ ಬಿ.ಪಿ.ಎಲ್‌. ಕುಟುಂಬಗಳಿಗಾಗಿ ಶೇ. 7.25 ಮತ್ತು ಭಿನ್ನ ಸಾಮರ್ಥ್ಯದವರಿಗಾಗಿ ಶೇ. 3ರ ನಿಧಿಯಡಿ ಒಟ್ಟು 2 ಲಕ್ಷ ರೂ. ಮೊತ್ತವನ್ನು ಬಜೆಟ್‌ನಲ್ಲಿ ಕಾದಿರಿಸಲಾಗಿದೆ.

Advertisement

ಮುಂದಿನ ಸಾಲಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಮೂಲಕ ಪಂಚಾಯತ್‌ಗೆ ಬಿಡುಗಡೆಯಾಗುವ ಅನುದಾನದ ಜತೆಗೆ ಪಂಚಾಯತ್‌ ನಿಧಿಯಲ್ಲಿ ಕಾದಿರಿಸಿದ ಮೊತ್ತವನ್ನು ಸಂಪೂರ್ಣವಾಗಿ ನಗರದ ಮೂಲ ಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳಗೆ ವಿನಿಯೋಗಿಸಲು ಹಂಚಿಕೆ ಮಾಡಲಾಗಿದೆ.

ಹೊಸ ಆವಿಷ್ಕಾರಕ್ಕೆ ಆದ್ಯತೆ
ವಾಹನ ದಟ್ಟಣೆ ನಗರದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಅಗಲೀಕರಣ, ಹೊಸ ರಸ್ತೆ ನಿರ್ಮಾಣ, ಪಾರ್ಕಿಂಗ್‌ ವ್ಯವಸ್ಥೆಗೆ ಹೊಸ ವ್ಯವಸ್ಥೆ ಮತ್ತು ಪಾರ್ಕ್‌ ನಿರ್ಮಾಣದಂತಹ ಹೊಸ ಅವಿಷ್ಕಾರದ ಯೋಜನೆಗಳಿಗೆ ಈ ಬಾರಿ ಹೆಚ್ಚಿನ ಆದ್ಯತೆಯನ್ನು ಬಜೆಟ್‌ನಲ್ಲಿ ಕಲ್ಪಿಸಲಾಗಿದೆ ಎಂದು ಅಧ್ಯಕ್ಷ ಸುನಿಲ್‌ ಆಳ್ವ ತಿಳಿಸಿದರು. ಬಜೆಟ್ ಮಂಡನೆ ವೇಳೆ ಯಾವುದೇ ಸದಸ್ಯರು ಪರ ವಿರೋಧಗಳ ಬಗ್ಗೆ ಚರ್ಚಿಸದೇ ಸರ್ವಾನುಮತದಿಂದ ಬಜೆಟ್ ಅನುಮೋದನೆಗೊಂಡಿತು.

ಹಿಂದಿನ ಸಭೆಯಲ್ಲಿ ಸೂಚಿಸಿದಂತೆ ನಗರಕ್ಕೆ ಬರುತ್ತಿದ್ದ ಕುಡಿಯುವ ನೀರಿನ ಸೋರಿಕೆಯಲ್ಲಿ ಸೂಕ್ತ ಕ್ರಮ ಜರಗಿಸಿ ಈ ಬಾರಿ ಬಿಡುಗಡೆ ಆಗಿರುವ 3.50 ಲಕ್ಷ ರೂ. ಲೀಟರ್‌ ನೀರು ನಗರದ ಟ್ಯಾಂಕ್‌ಗಳಲ್ಲಿ ಸಂಗ್ರಹವಾಗುವಂತಾಗಿ ಜನರಿಗೆ ತಲುಪಿಸುವಲ್ಲಿ ಶ್ರಮವಹಿಸಿದ ಮುಖ್ಯಾಧಿಕಾರಿ ಮತ್ತು ತಂಡದವರಿಗೆ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಈ ಬಾರಿಯ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕೆಲವೊಂದು ಕಾರ್ಯಕ್ರಮಗಳನ್ನು ನಡೆಸುವಲ್ಲಿ ಚರ್ಚೆ ನಡಸುವುದಾಗಿ ಅಧ್ಯಕ್ಷರು ತಿಳಿಸಿದರು.

ಇತ್ತೀಚೆಗೆ ಕೆಲವು ಘಟನೆಗಳು ನಡೆಯುತ್ತಿರುವ ವರದಿಯನ್ನು ಪ್ರಸ್ತಾಪಿಸಿ ಕುಡಿಯುವ ನೀರಿನ ಸಂಗ್ರಹಣಾ ಕೇಂದ್ರದಲ್ಲಿ ಸುರಕ್ಷೆ ಕ್ರಮವನ್ನು ತೆಗೆದುಕೊಳ್ಳುವಂತೆ ಸದಸ್ಯ ಪುತ್ತು ಬಾವ ಸಲಹೆ ನೀಡಿದರು. ಉಪಾಧ್ಯಕ್ಷೆ ರಾಧಿಕಾ ಯಾದವ ಕೋಟ್ಯಾನ್‌, ಮುಖ್ಯಾಧಿಕಾರಿ ಇಂದು ಎಂ., ಸ್ಥಾಯೀ ಸಮಿತಿ ಅಧ್ಯಕ್ಷ ಶೈಲೇಶ್‌ ಕುಮಾರ್‌ ಸದಸ್ಯರಾದ ವಿಮಲಾ ಪೂಜಾರಿ, ಬಶೀರ್‌ ಕುಳಾಯಿ , ಉಮೇಶ್‌ ಮಾನಂಪಾಡಿ, ವಸಂತಿ ಭಂಡಾರಿ, ಮೀನಾಕ್ಷಿ ಬಂಗೇರ, ಪುರುಷೋತ್ತಮ ರಾವ್‌ ಮತ್ತಿತರರು ಪಾಲ್ಗೊಂಡರು.

ವಿವಿಧ ಯೋಜನೆಗಾಗಿ ತೆಗೆದಿರಿಸಿರುವ ಮೊತ್ತ
ನೀರು ಸರಬರಾಜು ಹೊರ ಗುತ್ತಿಗೆ ಕಾರ್ಯನಿರ್ವಹಣೆಗಾಗಿ 10.50 ಲಕ್ಷ ರೂ., ಸರಕಾರದ ಸೆಸ್ಸು ಪಾವತಿಗಾಗಿ 37.15 ಲಕ್ಷ ರೂ., ದಾರಿ ದೀಪ ನಿರ್ವಹಣೆಗೆ 6 ಲಕ್ಷ ರೂ., ಪಂಚಾಯತ್‌ ಕಚೇರಿಗೆ ಗುತ್ತಿಗೆ ಆಧಾರದಲ್ಲಿ ವಾಹನ ವ್ಯವಸ್ಥೆಗಾಗಿ 3.60 ಲಕ್ಷ ರೂ., ವಾಣಿಜ್ಯ ಸಂಕೀರ್ಣ ಮತ್ತು ಇತರ ಕಟ್ಟಡ ನಿರ್ಮಾಣಕ್ಕಾಗಿ 5 ಲಕ್ಷ ರೂ., ನಲ್ಮ್ ಯೋಜನೆಯಡಿ ಸಹಾಯ ಧನ ಮತ್ತು ಕಟ್ಟಡ ನಿರ್ಮಾಣಕ್ಕಾಗಿ 15 ಲಕ್ಷ ರೂ. ಮೊತ್ತವನ್ನು ಕಾಯ್ದಿರಿಸಲಾಗಿದೆ. ಕಚೇರಿ ಆಡಳಿತ ವ್ಯವಸ್ಥೆಯಲ್ಲಿ ಸಾರ್ವಜನಿಕರಿಗೆ ಮತ್ತಷ್ಟು ತ್ವರಿತ ಗತಿಯಲ್ಲಿ ನಡೆಸಲು ತಂತ್ರಾಂಶ ಅಭಿವೃದ್ಧಿಗಾಗಿ 2 ಲಕ್ಷ ರೂ., ಹೊಸ ದಾರಿ ದೀಪ ಖರೀದಿಗಾಗಿ 5 ಲಕ್ಷ ರೂ. ನೀರು ಸರಬರಾಜು ವ್ಯವಸ್ಥೆಯ ಪರಿಕರ ಖರೀದಿಗಾಗಿ ಮೊತ್ತವನ್ನು ತೆಗೆದಿರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next