Advertisement

ಮೂಲ್ಕಿ: ಸುತ್ತಲೂ ನೀರು ಇದ್ದರೂ ಬಳಕೆಗೆ ಯೋಗ್ಯವಲ್ಲ!

05:59 PM Apr 03, 2023 | Team Udayavani |

ಮೂಲ್ಕಿ: ನಗರ ಪಂಚಾಯತ್‌ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾರೀ ಪ್ರಮಾಣದಲ್ಲಿ ಉಲ್ಬಣಗೊಳ್ಳುವ ಹಂತಕ್ಕೆ ಸಾಗುತ್ತಿದೆ. ಸುತ್ತಲೂ ನದಿ ಪ್ರದೇಶ
ಆವರಿಸಿಕೊಂಡ್ಡಿದ್ದರೂ ಉಪ್ಪು ನೀರು ಸಿಗುತ್ತಿರುವ ಕಾರಣ ಜನರು ನೀರಿಗಾಗಿ ಪರದಾಡಬೇಕಾಗಿದೆ. ಜನರು ನೀರನ್ನು ಎಚ್ಚರದಿಂದ ಬಳಸಬೇಕಾದ ಅಗತ್ಯ
ಕೂಡ ಇದೆ ಎಂದು ಸದ್ಯದ ಪರಿಸ್ಥಿತಿ ಎಚ್ಚರಿಕೆಯನ್ನು ನೀಡುವಂತಿದೆ.

Advertisement

ಕೆಲವೆಡೆ ಬೋರ್‌ವೆಲ್‌ಗ‌ಳು ಹಾಗೂ ಕೆಲವೆಡೆ ಕೆರೆ ಮತ್ತು ಬಾವಿಯ ನೀರನ್ನು ಪಂಪ್‌ ಮಾಡಿ ಕೊಡುವ ಕಾರ್ಯ ನಡೆಯುತ್ತಿದೆಯಾದರೆ, ಕಾರ್ನಾಡು ಸದಾಶಿವ ರಾವ್‌ ಪ್ರದೇಶದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಕುಳಾಯಿ ವಿತರಣಾ ಕೇಂದ್ರದಿಂದ ಬರುವ ಕುಡಿಯುವ ನೀರನ್ನೇ ಅವಲಂಬಿಸಿ ಕೊಂಡಿದ್ದು, ಈ ನೀರು ಎರಡು ದಿನಕ್ಕೊಮ್ಮೆ ಬರುತ್ತಿರುವುದರಲ್ಲಿ ಕೊಂಚ ವ್ಯತ್ಯಾಸ ಉಂಟಾದರೆ ನೀರಿನ ಸಮಸ್ಯೆ ಬಹಳವಾಗಿ ಇಲ್ಲಿಯ ಜನರನ್ನು ಕಾಡುತ್ತದೆ.

ನೀರು ಪೋಲು ಮಾಡದಂತೆ ಕ್ರಮ
ನ. ಪಂ. ಕುಡಿಯುವ ನೀರನ್ನು ಪೋಲುಮಾಡದಂತೆ ಎಚ್ಚರಿಕೆಯನ್ನು ಕೊಡುವ ಜತೆಗೆ ಗಂಭೀರ ಕ್ರಮ ಜರಗಿಸುವ ಚಿಂತನೆ ಮಾಡಿದೆ. ಟ್ಯಾಂಕರ್‌ಗಳ ಮೂಲಕ ಅಗತ್ಯ ಇರುವ ಸ್ಥಳಕ್ಕೆ ಬೇಡಿಕೆಗೆ ಅನುಗುಣವಾಗಿ ನೀರು ಒದಗಿಸುವ ಕೆಲಸವನ್ನು ಕೂಡ ಜತೆಯಾಗಿ ಮಾಡಲಾಗುತ್ತಿದೆ.

ಕಿಲ್ಪಾಡಿ-ಅತಿಕಾರಿ ಬೆಟ್ಟು ಸಮಸ್ಯೆ ಸದ್ಯಕ್ಕಿಲ್ಲ
ನಗರ ಪಂಚಾಯತ್‌ ಸಮೀಪದಲ್ಲೆ ಇರುವ ಕಿಲ್ಪಾಡಿ ಗ್ರಾ. ಪಂ. ಹಾಗೂ ಅತಿಕಾರಿ ಬೆಟ್ಟು ಗ್ರಾ. ಪಂ. ವ್ಯಾಪ್ತಿಯೊಳಗೆ ಕುಡಿಯುವ ನೀರಿನ ಸಮಸ್ಯೆ ಈ ವರೆಗೆ ಉಂಟಾಗಿಲ್ಲ. ಕೊಲ್ಲೂರು ಗ್ರಾಮದಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಎರಡು ದಿನಗಳಿಗೊಮ್ಮೆ ನೀರು ಸರಬರಾಜು ಆಗುತ್ತಿದ್ದು ಹಾಗೂ ಹೆಚ್ಚಿನ ಮನೆಗಳಲ್ಲಿ ಬಾವಿಯಲ್ಲೂ ಉತ್ತಮ ನೀರು ಸಿಗುತ್ತಿರುವುದರಿಂದ ನೀರಿನ ಸಮಸ್ಯೆ ಈ ವರೆಗೆ ಉಂಟಾಗಿಲ್ಲ.

ಕೊಳವೆ ತುಕ್ಕು ಹಿಡಿಯುವ ಭಯ
ನ.ಪಂ. ವ್ಯಾಪ್ತಿಯೊಳಗೆ 16 ಕೋಟಿ ರೂ.ವೆಚ್ಚದ ಕುಡಿಯುವ ನೀರಿನ ಯೋಜನೆ ಪೂರ್ಣಗೊಂಡಿದ್ದರೂ ನೀರು ಸರಬರಾಜು ಆಗುತ್ತಿಲ್ಲ. ನೆಲದೊಳಗೆ ಇರುವ ಪೈಪ್‌ಲೈನ್‌ ತುಕ್ಕು ಹಿಡಿಯಬಹುದೇ ಎಂಬ ಭಯ ಸ್ಥಳೀಯರದ್ದು. ಇದಕ್ಕೆ ಪೂರಕವಾಗಿ ಸುಮಾರು 40 ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಯೋಜನೆಗೆ ರೂಪುರೇಷೆಗಳ ಬಗ್ಗೆ ಇಲಾಖೆಗಳ ಮೂಲಕ ಮಾಹಿತಿಯೂ ಇದೆ. ಆದಷ್ಟು ಬೇಗ ಈ ಯೋಜನೆಗಳು ಪೂರ್ಣಗೊಂಡು ಮೂಲ್ಕಿಯನ್ನು ಸದಾ ಕಾಡುತ್ತಿರುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪಯತ್ನ ನಡೆಯಬೇಕೆಂಬುದು ಜನರ ಆಗ್ರಹ.

Advertisement

ಉಪ್ಪು ನೀರು
ಬಪ್ಪನಾಡು ಗ್ರಾಮದ ಬಡಗಿತ್ಲು, ಕೊಳಚಿಕಂಬಳ, ಚಂದ್ರಶ್ಯಾನುಬಾಗರ ಕುದ್ರು, ಕಾರ್ನಾಡಿನ ಪಡುಬೈಲ್‌, ಚಿತ್ರಾಪು ಗಜನಿ, ಕಸ್ಟಮ್‌ ಹೌಸ್‌ ಮತ್ತು ಮಾನಂಪಾಡಿಯ ಗಜನಿ, ಕರಿತೋಟ ಮುಂತಾದೆಡೆ ಬಾವಿ ಇದ್ದರೂ ಇಲ್ಲಿ ನದಿಯ ಉಪ್ಪು ನೀರಿನ ಒರತೆ ಇರುವುದರಿಂದಾಗಿ ನೀರಿನ ಸಮಸ್ಯೆ ಸಹಜವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next