ಮೂಲ್ಕಿ: ಕೃಷಿ ಬದುಕನ್ನು ಸಮೃದ್ಧಗೊಳಿಸುವುದರ ಜತೆಗೆ ದೇವರ ಮೇಲಿನ ವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯುವ ಸಮಾಜಕ್ಕೆ ಉತ್ತಮ ಸಂದೇಶವಾಗಬಲ್ಲ ಕಂಬಳವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ನಿವೃತ್ತ ಲೋಕಾಯಕ್ತ ನ್ಯಾ| ಎನ್. ಸಂತೋಷ್ ಹೆಗ್ಡೆ ಹೇಳಿದರು.
ಇತಿಹಾಸ ಪ್ರಸಿದ್ಧ ಮೂಲ್ಕಿ ಅರಸು ಕಂಬಳವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಅರಸರು ಕಂಬಳ ನೋಡದೆ ಉಪವಾಸ ವ್ರತ
ಜನರ ಸುಖ ಮತ್ತು ಸಂತೋಷಕ್ಕಾಗಿ ಮತ್ತು ಊರಿನ ಹಿತಕ್ಕಾಗಿ ಕಂಬಳ ನಡೆಸುವ ಅರಸರು ಸಂಪ್ರದಾಯದಂತೆ ಈಗಲೂ ಈ ಕಂಬಳವನ್ನು ಕಣ್ಣಾರೆ ನೋಡುವಂತಿಲ್ಲ ಕಂಬಳದ ಎಲ್ಲ ಪ್ರಕ್ರಿಯೆಗಳು ಮುಗಿಯುವ ತನಕ ಉಪವಾಸ ಇರಬೇಕು. ಈ ಕಂಬಳದಲ್ಲಿ ಅರಸು ಮನೆತನದ ತ್ಯಾಗವೂ ಇದೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಪಂಜ ಭಾಸ್ಕರ್ ಭಟ್ ಹೇಳಿದರು.
ಬಪ್ಪನಾಡು ದೇವಸ್ಥಾನದ ಆಡಳಿತ ಮೊಕ್ತೇಸರ ಎನ್.ಎಸ್. ಮನೋಹರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಉಮಾನಾಥ ಕೋಟ್ಯಾನ್, ಏಳಿಂಜೆ ದೇವಸ್ಥಾನದ ಆನುವಂಶಿಕ ಮೊಕ್ತೇಸರ ವೈ.ವಿ. ಗಣೇಶ್ ಭಟ್, ಹಳೆಯಂಗಡಿ ಸಿಎಸ್‌ಐ ಚರ್ಚ್‌ನ ಸಭಾಪಾಲಕ ಫಾ| ಅಮೃತ್ ಖೋಡೆ, ಹಳೆಯಂಗಡಿ ಕದಿಕೆ ಮಸೀದಿಯ ಖತೀಬರಾದ ಪಿ.ಎ. ಅಬ್ದುಲ್ ಜೈನಿ ಬಡಗೂರು, ಐಕಳ ಕಿರೆಂ ಚರ್ಚ್‌ನ ಧರ್ಮಗುರು ಫಾ| ಓಸ್ವಾಲ್ಡ್ ಮೊಂತೆರೋ, ರೋನಾಲ್ಡ್ ಸಿಲ್ವನ್ ಡಿ’ ಸೋಜಾ, ಅರಮನೆ ಟ್ರಸ್ಟಿನ ಗೌತಮ್ ಜೈನ್, ವಿಜಯ ರೈತರ ಸಹಕಾರಿ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಪ್ರಮುಖರಾದ ಮೋಹನ್‌ದಾಸ್ ಸುರತ್ಕಲ್, ಶ್ವೇತಾ ಆಚಾರ್ಯ, ನಿನಾಸಂ ಅಶ್ವತ್‌ಎಚ್., ನ್ಯಾಯವಾದಿ ಕಾಶಪಯ್ಯರ ಮನೆ ಚಂದ್ರಶೇಖರ್ ಚಿತ್ರಾಪು, ಎಚ್. ವಸಂತ್ ಬೆರ್ನಾಡ್, ಶ್ಯಾಮ್ ಪ್ರಸಾದ್ ಮುಂತಾದವರಿದ್ದರು. ಕಂಬಳ ಸಮಿತಿ ಅಧ್ಯಕ್ಷ ಕೊಲ್ನಾಡು ಗುತ್ತು ಕಿರಣ್ ಕುಮಾರ್ ಶೆಟ್ಟಿ ಸ್ವಾಗತಿಸಿ ದರು. ನವೀನ್ ಶೆಟ್ಟಿ ಎಡೆಮಾರ್ ನಿರೂಪಿಸಿದರು. ವಿನೋದ್ ಸಾಲ್ಯಾನ್ ವಂದಿಸಿದರು.
ಸಾಂಪ್ರದಾಯಿಕ ವಿಧಿಗಳು
ಅರಸು ಪರಂಪರೆಯ ಮೂಲ್ಕಿ ಕಂಬಳ ಅರಮನೆಯ ಶ್ರೀ ಚಂದ್ರನಾಥ ಬಸದಿ ಮತ್ತು ಶ್ರೀ ಪದ್ಮಾವತಿ ಅಮ್ಮನವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ನಾಗದೇವರ ಸನ್ನಿಧಿಯಲ್ಲಿ ಬೈಲು ಉಡುಪರಿಂದ ಪ್ರಾರ್ಥನೆ ಹಾಗೂ ಜಾಗದ ದೈವಗಳ ಸಾನಿಧ್ಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಸಂಪ್ರದಾಯದಂತೆ ಏರು ಬಂಟ ದೈವದ ಜತೆಗೆ ಕರೆಗೆ ಆಗಮಿಸಿ ಬಪ್ಪನಾಡು ಬಗಡುಹಿತ್ತಿಲು ಪಡ್ಯಮನೆ ಕಾಂತು ಶೆವೆಗಾರ್ ಮನೆತನದ ಕೋಣಗಳನ್ನು ಮೊದಲಿಗೆ ಓಡಿಸುವ ಮೂಲಕ ಕಂಬಳ ಆರಂಭಗೊಂಡಿತು.