Advertisement

Mulki: ಮನೆಗೆ ನುಗ್ಗಿ ಸೆರೆ ಸಿಕ್ಕ ಚಿರತೆ ; ಜನರಲ್ಲಿ ಹೆಚ್ಚಾದ ಭೀತಿ

12:25 AM Oct 21, 2024 | Team Udayavani |

ಮೂಲ್ಕಿ: ಇಲ್ಲಿನ ವೆಂಕಟರಮಣ ದೇಗುಲ ರಸ್ತೆಯಲ್ಲಿರುವ ಮನೆಯೊಂದಕ್ಕೆ ನುಗ್ಗಿದ ಚಿರತೆ ಮರಿಯನ್ನು ಶನಿವಾರ ರಾತ್ರಿ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿಡಿದ್ದು, ಪ್ರದೇಶದಲ್ಲಿ ಇನ್ನಷ್ಟು ಚಿರತೆಗಳಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಜನರಲ್ಲಿ ಭೀತಿ ಹೆಚ್ಚಾಗಿದೆ.
ಕಳೆದ ಕೆಲವು ದಿನಗಳಿಂದ ಮೂಲ್ಕಿ ಪರಿಸರದಲ್ಲಿ ಚಿರತೆ ಓಡಾಟದ ಸುದ್ದಿ ಹರಡಿದ್ದು, ಈಗ ಚಿರತೆ ಸೆರೆ ಸಿಗುವ ಮೂಲಕ ಅದು ನಿಜವಾಗಿದೆ.

Advertisement

ವೆಂಕಟರಮಣ ದೇಗುಲ ರಸ್ತೆಯ ಅಕ್ಕಸಾಲಿಗರ ಕೇರಿಯ ರೇಂಜರ್ ಪ್ಲೋಟ್‌ ಬಳಿಯ ಸದಾನಂದ ಕೋಟ್ಯಾನ್‌ ಹಾಗೂ ಶೀಲಾ ದಂಪತಿಯ ಮನೆಯ ಅಡುಗೆ ಕೋಣೆಯಲ್ಲಿ ಚಿರತೆ ಪತ್ತೆಯಾಗಿದ್ದು, ಅದನ್ನು ಮೂಡುಬಿದಿರೆ ಅರಣ್ಯ ಇಲಾಖೆಯ ಆಧಿಕಾರಿಗಳು ಹಾಗೂ ಸಿಬಂದಿ ಸೆರೆ ಹಿಡಿಯುವಲ್ಲಿ ಸಫ‌ಲರಾಗಿದ್ದಾರೆ.

ಕಾರ್ಯ ನಿಮಿತ್ತ ಮನೆಯಿಂದ ಹೊರ ಹೋಗಿದ್ದ ಸದಾನಂದ ದಂಪತಿ ಶನಿವಾರ ರಾತ್ರಿ 9.30ರ ಸುಮಾರಿಗೆ ಮನೆಗೆ ಬಂದು ಕೈಕಾಲು ತೊಳೆದು ಬಚ್ಚಲು ಮನೆಯಿಂದ ಅಡುಗೆ ಮನೆಗೆ ಬರುವ ಮನೆಯ ಬಾಗಿಲನ್ನು ತೆರೆದಿದ್ದರು. ಸ್ವಲ್ಪ ಹೊತ್ತಿನಲ್ಲಿ ಬಚ್ಚಲು ಮನೆಯಲ್ಲಿ ಹಾಗೂ ಬಳಿಕ ಅಡುಗೆ ಮನೆಯಲ್ಲಿ ಸದ್ದು ಉಂಟಾಯಿತು. ಲೈಟ್‌ ಹಾಕಿ ನೋಡಿದಾಗ ಯಾವುದೋ ಪ್ರಾಣಿ ಒಳಗೆ ಸೇರಿರುವುದು ದೃಢವಾಯಿತು. ಕೂಡಲೇ ಅವರು ಪಕ್ಕದ ಮನೆಯರಿಗೆ ತಿಳಿಸಿದ್ದು, ಬಳಿಕ ಪೊಲೀಸರಿಗೂ ಮಾಹಿತಿ ನೀಡಲಾ ಯಿತು. ಮೂಲ್ಕಿ ಪೊಲೀಸರು ಆಗಮಿಸಿ ಚಿರತೆ ಇರುವುದನ್ನು ದೃಢಪಡಿಸಿದರು. ಅನಂತರ ಮೂಡುಬಿದಿರೆಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಯಿತು. ಕೂಡಲೇ ಆಗಮಿಸಿದ ಅರಣ್ಯ ಅಧಿಕಾರಿ ಸಿಬಂದಿ ತಡರಾತ್ರಿ ಚಿರತೆ ಯನ್ನು ಗೂಡಿನಲ್ಲಿ ಬಂಧಿಸುವಲ್ಲಿ ಸಫ‌ಲರಾದರು. ಚಿರತೆಯನ್ನು ನೋಡಲು ಜನರ ದಂಡೇ ನೆರೆದಿದ್ದು, ಅವರನ್ನು ನಿಯಂತ್ರಿಸುವುದೇ ಪೊಲೀಸರಿಗೆ ಸವಾಲಾಯಿತು.

ಮರಿ ಚಿರತೆ
ಚಿರತೆಗೆ ಸುಮಾರು ಒಂದೂವರೆ ವರ್ಷ ಪ್ರಾಯವಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಮರಿಯಾಗಿರುವ ಕಾರಣ ಉಳಿದ ಹೆಣ್ಣು ಮತ್ತು ಗಂಡು ಚಿರತೆ ಪರಿಸರದಲ್ಲಿ ಇರುವ ಸಾಧ್ಯತೆ ಇದ್ದು, ಸಾರ್ವಜನಿಕರು ಎಚ್ಚರದಿಂದ ಇರುವಂತೆ ತಿಳಿಸಲಾಗಿದೆ. ಇದು ಸಹಜವಾಗಿಯೇ ಜನರಲ್ಲಿ ಆತಂಕ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next