ಗುರುಗ್ರಾಮ್ : ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರನ್ನು ಇಲ್ಲಿನ ಮೇದಾಂತ ಆಸ್ಪತ್ರೆಯ “ಕ್ರಿಟಿಕಲ್ ಕೇರ್ ಯೂನಿಟ್” ಗೆ ದಾಖಲಿಸಲಾಗಿದ್ದು, “ಸಮಗ್ರ ತಜ್ಞರ ತಂಡ”ದಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ಸೋಮವಾರ ತಿಳಿಸಿದೆ.
ಸಮಾಜವಾದಿ ಪಕ್ಷ, 82 ವರ್ಷದ ನಾಯಕರ ಆರೋಗ್ಯ ಹದಗೆಟ್ಟಿದೆ ಎಂದು ಭಾನುವಾರ ಹೇಳಿದ ಒಂದು ದಿನದ ನಂತರ ಆಸ್ಪತ್ರೆಯಿಂದ ಈ ಪ್ರಕಟಣೆ ಬಂದಿದೆ.
ಇದನ್ನೂ ಓದಿ: ಅಲ್ಪಸಂಖ್ಯಾತ ಸಚಿವಾಲಯ ರದ್ದು ವರದಿ : ಕೇಂದ್ರ ಸರಕಾರ ಸ್ಪಷ್ಟನೆ
ಮುಲಾಯಂ ಸಿಂಗ್ ಯಾದವ್ ಅವರು ಆಗಸ್ಟ್ 22 ರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜುಲೈನಲ್ಲಿಯೂ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಪುತ್ರ ಅಖಿಲೇಶ್ ಯಾದವ್, ಸೊಸೆ ಡಿಂಪಲ್ ಯಾದವ್ ಮತ್ತು ಸಹೋದರ ಶಿವಪಾಲ್ ಸಿಂಗ್ ಯಾದವ್ ಭಾನುವಾರ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಕೆಲವು ಪಕ್ಷದ ಕಾರ್ಯಕರ್ತರು ಕೂಡ ಅವರ ಆರೋಗ್ಯದ ಬಗ್ಗೆ ವಿಚಾರಿಸಲು ಆಸ್ಪತ್ರೆ ಆವರಣಕ್ಕೆ ಬಂದರಾದರೂ ಭೇಟಿ ನೀಡದಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗೆ ಮಾತನಾಡಿ, ಮುಲಾಯಂ ಸಿಂಗ್ ಯಾದವ್ ಅವರ ಆರೋಗ್ಯವನ್ನು ವಿಚಾರಿಸಿದ್ದರು. ಸಾಧ್ಯವಿರುವ ಯಾವುದೇ ನೆರವು ಬೇಕಾದರೂ ನೀಡುತ್ತೇವೆ ಎಂದು ಅವರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.