Advertisement
ಸೋಮವಾರ ಇಡೀ ದಿನ ಪ್ರತಿಯೊಬ್ಬರ ಬಾಯಿಯಲ್ಲೂ “ಮಣ್ಣಿನ ಮಗ'(ಧರ್ತಿ ಪುತ್ರ) ನದ್ದೇ ಮಾತು. ಎಲ್ಲಿ ನೋಡಿದರೂ ನೇತಾಜಿಯನ್ನು ನೆನಪಿಸಿಕೊಂಡು ಕಣ್ಣೀರಿಡುವವರೇ. 1967ರಲ್ಲಿ ಮುಲಾಯಂ ಅವರು ಮೊದಲ ಬಾರಿಗೆ ಚುನಾವ ಣೆಯಲ್ಲಿ ಸ್ಪರ್ಧಿಸಿದಾಗ ಅವರು ಶಾಸಕರಾಗ ಬೇಕೆಂದು ಪೂರ್ತಿ ಗ್ರಾಮವೇ ಪ್ರತಿದಿನ ಒಂದು ಹೊತ್ತು ಊಟ ಬಿಟ್ಟಿದ್ದನ್ನು ಗ್ರಾಮದ ಹಿರಿಯರು ನೆನಪಿಸಿಕೊಂಡಿದ್ದಾರೆ.
Related Articles
Advertisement
ಇಂದು ಅಂತ್ಯಕ್ರಿಯೆ: ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಹುಟ್ಟೂರು ಸೈಫಾಯಿಯಲ್ಲೇ ಅವರ ಅಂತ್ಯಕ್ರಿಯೆ ನೆರವೇರಲಿದೆ. ಜಿಲ್ಲೆಯ ಎಲ್ಲ ವ್ಯಾಪಾರಿ ಗಳೂ ಮುಲಾಯಂಗೆ ಗೌರವಸೂಚಕ ವಾಗಿ ಅಂಗಡಿ-ಮುಂಗಟ್ಟು, ಮಾರುಕಟ್ಟೆಗಳನ್ನು ಬಂದ್ ಮಾಡಿದ್ದಾರೆ. ಮಂಗಳವಾರವೂ ಸ್ವಯಂಪ್ರೇರಿತವಾಗಿ ಮಾರುಕಟ್ಟೆ ಬಂದ್ ಮಾಡುವುದಾಗಿ ಹೇಳಿದ್ದಾರೆ. ಸೋಮವಾರ ಸಂಜೆಯೇ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ತಂದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕಣ್ಣೀರಿಡುತ್ತಿದ್ದ ಪುತ್ರ ಅಖೀಲೇಶ್ ಯಾದವ್‌ರನ್ನು ಚಿಕ್ಕಪ್ಪ ಶಿವಪಾಲ್ ಯಾದವ್ ಸಂತೈಸುತ್ತಿದ್ದುದನ್ನು ಕಂಡು, ಅಲ್ಲಿದ್ದವರ ಕಣ್ಣಾಲಿಗಳೂ ತುಂಬಿ ಬಂದಿವೆ. ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಜಲಶಕ್ತಿ ಸಚಿವ ಸ್ವತಂತ್ರದೇವ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ಭೂಪೇಂದ್ರ ಸಿಂಗ್ ಚೌಧರಿ ಆಗಮಿಸಿ, ಮೃತರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.
ಸ್ನೇಹವನ್ನು ಬಿಚ್ಚಿಟ್ಟ ಪ್ರಧಾನಿ ಮೋದಿಕೆಲವೊಮ್ಮೆ ಪರಸ್ಪರ ವಾಗ್ಧಾಳಿ, ಅನಂತರ ಕೈ-ಕೈ ಹಿಡಿದು ಸವಾರಿ… ಇದು ಮುಲಾಯಂ ಸಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ ಇದ್ದ ಸ್ನೇಹಕ್ಕೆ ಸಾಕ್ಷಿ. ಮುಲಾಯಂ ನಿಧನದ ಬೆನ್ನಲ್ಲೇ ಪ್ರಧಾನಿ ಮೋದಿ ಅವರೇ ಈ ವಿಚಾರವನ್ನು ಪ್ರಸ್ತಾಪಿಸಿ, ತಮ್ಮ ನಡುವಿನ ವಿಶೇಷ ಸಂಬಂಧವನ್ನು ಬಿಚ್ಚಿಟ್ಟಿದ್ದಾರೆ. 2019ರ ಲೋಕಸಭೆ ಚುನಾವಣೆಗೂ ಮುನ್ನ, ಲೋಕಸಭೆಯಲ್ಲಿ ವಿಪಕ್ಷಗಳ ಬೆಂಚಿನಲ್ಲಿ ಕುಳಿತಿದ್ದ ಮುಲಾಯಂ, “ಮೋದಿ ಮತ್ತೆ ಪ್ರಧಾನಿಯಾಗಿ ಬರುತ್ತಾರೆಂಬ ವಿಶ್ವಾಸವಿದೆ’ ಎಂದು ಹೇಳಿದ್ದರು. ಅವರ ಹೇಳಿಕೆಗೆ ಇಡೀ ವಿಪಕ್ಷವೇ ನಿಬ್ಬೆರಗಾಗಿತ್ತು. ಅದನ್ನು ಈಗ ನೆನಪಿಸಿಕೊಂಡಿರುವ ಮೋದಿ, “ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ, ಮುಲಾಯಂರಂಥ ಹಿರಿಯರು ಅಂದು ನೀಡಿದ್ದ ಹೇಳಿಕೆಯು ನನಗೆ ಹಾರೈಕೆಯಾಗಿ ಬದಲಾಯಿತು’ ಎಂದಿದ್ದಾರೆ. ಅಗಲಿದ ನಾಯಕನಿಗೆ ಗಣ್ಯರ ಕಂಬನಿ
ಮುಲಾಯಂ ಅವರ ನಿಧನಕ್ಕೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಎಲ್ಲ ರಾಜಕೀಯ ಪಕ್ಷಗಳ ನಾಯಕರೂ ಕಂಬನಿ ಮಿಡಿದಿದ್ದಾರೆ. ಮುಲಾಯಂ ಅವರ ನಿಧನವು ದೇಶದ ರಾಜಕಾರಣಕ್ಕೆ ತುಂಬಲಾರದ ನಷ್ಟ ಎಂದೂ ಬಣ್ಣಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ, ಮಾಜಿ ಪ್ರಧಾನಿಗಳಾದ ಡಾ| ಮನಮೋಹನ್ ಸಿಂಗ್, ಎಚ್.ಡಿ.ದೇವೇಗೌಡ, ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿಎಂಗಳಾದ ಬಸವರಾಜ ಬೊಮ್ಮಾಯಿ, ನಿತೀಶ್‌ಕುಮಾರ್, ಕೇಜ್ರಿವಾಲ್, ಕೆ.ಸಿ.ಆರ್, ಸ್ಟಾಲಿನ್, ಪಿಣರಾಯಿ ವಿಜಯನ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಭೂಮಿ ಪುತ್ರ ಮುಲಾಯಂ ಅವರನ್ನು ಎಲ್ಲ ಪಕ್ಷಗಳ ನಾಯಕರೂ ಗೌರವಿಸುತ್ತಿದ್ದರು. ಅವರ ನಿಧನ ನೋವು ತಂದಿದೆ. ಅವರ ಕುಟುಂಬಕ್ಕೆ ಸಾಂತ್ವನ ಹೇಳಬಯಸುತ್ತೇನೆ.
-ದ್ರೌಪದಿ ಮುರ್ಮು, ರಾಷ್ಟ್ರಪತಿ ಮುಲಾಯಂ ಸಿಂಗ್‌ರ ನಿಧನದ ಮೂಲಕ ಸಮಾಜವಾದಿ ಚಿಂತನೆಗಳ ಧ್ವನಿಯೊಂದು ಮೌನವಾಯಿತು.
-ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ ತುರ್ತು ಪರಿಸ್ಥಿತಿ ಕಾಲದಲ್ಲಿ ಪ್ರಜಾಸತ್ತೆಯ ಪುನಸ್ಥಾಪನೆಗಾಗಿ ಅವರು ಧ್ವನಿಯೆತ್ತಿದ್ದರು. ಅವರ ನಿಧನದಿಂದ ಭಾರತೀಯ ರಾಜಕಾರಣದ ಯುಗವೊಂದು ಅಂತ್ಯವಾಗಿದೆ.
-ಅಮಿತ್ ಶಾ, ಕೇಂದ್ರ ಗೃಹ ಸಚಿವ ಮುಲಾಯಂ ಸಿಂಗ್ ಅವರು ಸಮಾಜವಾದಿ ಚಳವಳಿಯ ನೇತಾರ, ಶ್ರೇಷ್ಠ ಸಂಸದೀಯ ಪಟು, ವಿಶಿಷ್ಟ ಆಡಳಿತಗಾರ. ತಮ್ಮ ಇಡೀ ಬದುಕನ್ನು ಬಡವರು ಹಾಗೂ ಇತರೆ ಹಿಂದುಳಿದ ಸಮುದಾಯದ ಸೇವೆಗಾಗಿ ಮುಡುಪಾಗಿಟ್ಟವರು.
-ಡಾ| ಮನಮೋಹನ್ ಸಿಂಗ್, ಮಾಜಿ ಪ್ರಧಾನಿ