ಕಟಪಾಡಿ: ಬಹಳ ವರ್ಷಗಳ ಹಿಂದೆ ಕೃಷಿ ಪ್ರಧಾನವಾದ ತುಳುನಾಡಿನಲ್ಲಿ ಅಂದಿನ ಜೀವನ ಪದ್ಧತಿಯಂತೆ ನಡೆಯುತ್ತಿದ್ದ ಸಾಂಪ್ರದಾಯಿಕ ಮುಳ್ಳಮುಟ್ಟೆಯು ಇಂದು ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಧಾರ್ಮಿಕ ಸ್ಪರ್ಶದೊಂದಿಗೆ ತುಳುನಾಡಿನ ಸಾಂಪ್ರದಾಯಿಕ ಆಚರಣೆಯಾಗಿ ಮುಂದು ವರಿಯುತ್ತಾ ಬಂದಿದೆ. ಧಾರ್ಮಿಕ ಸ್ಪರ್ಶದೊಂದಿಗೆ ಇಂತಹ ಆಚರಣೆಗಳು ತುಳು ಸಂಸ್ಕೃತಿಯ ಗಟ್ಟಿತನವಾಗಿದೆ ಎಂದು ಜನಪದೀಯ ಚಿಂತಕ ಕಟಪಾಡಿ ಶಂಕರ ಪೂಜಾರಿ ಹೇಳಿದರು.
ಅವರು ನ. 4ರಂದು ಕಟಪಾಡಿ ಏಣಗುಡ್ಡೆ ನೀಚ ದೈವಸ್ಥಾನದ ಬಳಿ ದೀಪಾವಳಿಯ ಪ್ರಯುಕ್ತ ಆಚರಿಸಲಾದ ಮುಳ್ಳಮುಟ್ಟೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಊರಿಗೆ ಬರುವ ಅನಿಷ್ಠಗಳು ದೂರವಾಗುತ್ತವೆ. ಎಲ್ಲ ಕಷ್ಟ ಕಾಯಿಲೆ, ಕೋಟಲೆಗಳು ಊರಿನತ್ತ ಸುಳಿಯುವುದಿಲ್ಲ ಎಂಬ ನಂಬಿಕೆ ಮುಳ್ಳಮುಟ್ಟೆ ಸುಡುವುದರಲ್ಲಿ ಬೆಸೆದುಕೊಂಡಿದೆ. ಏನಿದ್ದರೂ ನಮ್ಮ
ಪೂರ್ವಜರು ತುಳುನಾಡಿನ ಸಂಪ್ರದಾಯ, ನಂಬಿಕೆ, ನಡವಳಿಕೆಯ ಆಧಾರದಲ್ಲಿ ನಡೆಸಿಕೊಂಡು ಬಂದಂತಹ ಆಚರಣೆಗಳಲ್ಲಿ ಮುಳ್ಳಮುಟ್ಟೆ ಸ್ಥಾನ ಪಡೆದಿದೆ.
ಈ ಆಚರಣೆ ಕಾರ್ಯಕ್ರಮದ ಪೂರ್ವಭಾವಿಯಾಗಿ ಏಣಗುಡ್ಡೆ ನೀಚ ದೈವಸ್ಥಾನದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನಡೆಸಲಾಯಿತು.
ದೈವಸ್ಥಾನದ ಮುಖ್ಯಸ್ಥ ಆನಂದ ಮಾಬ್ಯಾನ್, ಮದಿಪು ನಾರಾಯಣ ಪೂಜಾರಿ, ಕೂಡುಕಟ್ಟಿನ ಗುರಿಕಾರರಾದ ದಾಮೋದರ ಕೆ. ಪೂಜಾರಿ ನಡುಮನೆ, ಸೂರಪ್ಪ ಕುಂದರ್, ವಿನೋದರ ಪೂಜಾರಿ, ಅರ್ಚಕ ರಮೇಶ ಕೋಟ್ಯಾನ್, ಗಣೇಶ ಅಗ್ರಹಾರ, ರಾಜೇಂದ್ರ ಆಚಾರ್ಯ, ಕಿಶೋರ್ ಪೂಜಾರಿ, ಸಿದ್ದಾಂತ್ ಮಾಬಿಯಾನ್ ಮತ್ತಿತರರು ಉಪಸ್ಥಿತರಿದ್ದರು.