ಮುಳಬಾಗಿಲು: ನಗರದಲ್ಲಿ ಮೇ 10ರಂದು ತಾಲೂಕು ಜೆಡಿಎಸ್‌ನಿಂದ ಜನತಾ ಜಲಧಾರೆ ಕಾರ್ಯಕ್ರಮ ನಡೆಯುತ್ತಿದೆ. ಇದರಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಪಾಲ್ಗೊಳ್ಳಲಿದ್ದಾರೆ. ಆದರೆ, ತಾಲೂಕು ಅಧ್ಯಕ್ಷ ಸ್ಥಾನದಿಂದ ವಂಚಿತರಾಗಿ ಪಕ್ಷ ದಲ್ಲಿಯೇ ಇದ್ದರೂ ಕಳೆದ ಬಾರಿ ಎಚ್‌ಡಿಕೆ ನಗರಕ್ಕೆ ಆಗಮಿಸಿದ್ದಾಗ ದೂರವೇ ಉಳಿದಿದ್ದ ಆಲಂಗೂರು ಶಿವಣ್ಣ, ಈ ಬಾರಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುರೇ? ಎಂಬ ವಿಚಾರ ಸದ್ಯದ ಕುತೂಹಲವಾಗಿದೆ.
2023ರಲ್ಲಿ ವಿಧಾನಸಭೆ ಚುನಾವಣೆ ಇರುವುದರಿಂದ ಅವಳಿ ಜಿಲ್ಲೆಗಳಲ್ಲಿ ಜೆಡಿಎಸ್‌ನಿಂದ ಅತೀ ಹೆಚ್ಚು ಸ್ಥಾನಗಳನ್ನು ಗಳಿಸಬೇಕೆಂಬ ಹಿನ್ನೆಲೆಯಲ್ಲಿ ಮೇ 10ರಂದು ನಗರದ ಹೊರವಲಯದ ಬಾಲಾಜಿ ಭವನದ ಪಕ್ಕದಲ್ಲಿ ಜೆಡಿಎಸ್‌ನಿಂದ ಜನತಾ ಜಲಧಾರೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕಾರ್ಯಕ್ರಮಕ್ಕೆ ಜೆಡಿಎಸ್ ವರಿಷ್ಠರಾದ ಎಚ್.ಡಿ. ದೇವೇಗೌಡ, ಎಚ್.ಡಿ.ಕುಮಾರ ಸ್ವಾಮಿ, ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಜೆಡಿಎಸ್ ರಾಜ್ಯ ಯುವ ಅಧ್ಯಕ್ಷ ನಿಖೀಲ್ ಕುಮಾರಸ್ವಾಮಿ ಸೇರಿ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ.
ಹಳ್ಳಿಗಳಲ್ಲಿ ಪೂರ್ವಭಾವಿ ಸಭೆ: ಈ ಕಾರ್ಯಕ್ರಮಕ್ಕೆ 20-30 ಸಾವಿರ ಜನರನ್ನು ಸೇರಿಸಲು ಜೆಡಿಎಸ್ ಕೋರ್ ಕಮಿಟಿ ಸದಸ್ಯ ಮತ್ತು ಕ್ಷೇತ್ರದ ಜೆಡಿಎಸ್‌ನ ಟಿಕೆಟ್ ಆಕಾಂಕ್ಷಿ ಸಮೃದ್ಧಿ ವಿ. ಮಂಜು ನಾಥ್, ತಾಲೂಕು ಜೆಡಿಎಸ್ ಅಧ್ಯಕ್ಷ ಕಾಡೇನ ಹಳ್ಳಿ ನಾಗರಾಜ್, ನಗರ ಘಟಕ ಅಧ್ಯಕ್ಷ ತೇಜೋ ರಮಣ, ಮುಖಂಡರು ನಗರ ಮತ್ತು ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಹಲವು ಪೂರ್ವಭಾವಿ ಸಭೆಗಳನ್ನು ನಡೆಸಿ, ಸಾಕಷ್ಟು ಶ್ರಮಿಸುತ್ತಿದ್ದಾರೆ. ಈ ನಡುವೆ ಕೆಲವು ವರ್ಷಗಳ ಹಿಂದೆ ತಾಲೂಕು ಅಧ್ಯಕ್ಷ ಸ್ಥಾನದಿಂದ ವಂಚಿತ ರಾಗಿರುವ ಆಲಂಗೂರು ಶಿವಣ್ಣ ಪಕ್ಷದಲ್ಲಿಯೇ ಇದ್ದರೂ ಉಂಟಾಗಿರುವ ಭಿನ್ನಾಭಿಪ್ರಾಯಗಳಿಂದ ಕಳೆದ ಬಾರಿ ವಿಧಾನಪರಿಷತ್ ಚುನಾವಣೆ ವೇಳೆಯಲ್ಲಿ ಪ್ರಚಾರಕ್ಕಾಗಿ ತಾಲೂಕಿಗೆ ಮಾಜಿ ಸಿಎಂ ಎಚ್.ಡಿ.ಕೆ ಆಗಮಿಸಿದಾಗ ಪ್ರಚಾರ ಕಾರ್ಯದಿಂದ ದೂರವೇ ಉಳಿದಿದ್ದರು. ಕಾರ್ಯಕ್ರಮಕ್ಕೂ ಮುನ್ನಾ ನಮ್ಮ ಎಸ್ಟೇಟ್‌ಗೆ ಬನ್ನಿ ಮಾತುಕತೆ ನಂತರ ಸಭೆಗೆ ಹೋಗೋಣ ಎಂದು ಪಕ್ಷದ ನಾಯಕ ಕುಮಾರಸ್ವಾಮಿಗೆ ಆಲಂಗೂರು ಶಿವಣ್ಣ ದೂರವಾಣಿಯಲ್ಲಿ ತಿಳಿಸಿದ್ದರು.
Related Articles
ಇದಕ್ಕೆ ಒಪ್ಪದ ಕುಮಾರಸ್ವಾಮಿ, ಸಭೆಯಲ್ಲಿ ಪಾಲ್ಗೊಂಡು ನಿಮ್ಮ ಅಹವಾಲುಗಳನ್ನು ತಿಳಿಸಿ ಇತ್ಯರ್ಥ ಪಡಿಸೋಣ ಎಂದು ತಿಳಿಸಿದ್ದರು. ಅದಕ್ಕೆ ಒಪ್ಪದ ಶಿವಣ್ಣ ಕಾರ್ಯಕ್ರಮದಿಂದ ದೂರವೇ ಉಳಿದಿದ್ದರು. ಆದ್ದರಿಂದ ಆಲಂಗೂರು ಶಿವಣ್ಣ ಹಾಗೂ ಪಕ್ಷದ ಮುಖಂಡರ ನಡುವೆ ಉಂಟಾಗಿರುವ ಬಿನ್ನಾಭಿಪ್ರಾಯವು ಬಗೆಹರಿಯದೇ ಇರು ವುದರಿಂದ ಆಲಂಗೂರು ಶಿವಣ್ಣ ಜಲಧಾರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುರೇ? ಈಗಲಾದರೂ ಮುಖಂಡರ ನಡುವೆ ಉಂಟಾ ಗಿರುವ ಭಿನ್ನಾಭಿಪ್ರಾಯಗಳನ್ನು ಎಚ್.ಡಿ.ಕೆ ಬಗೆಹರಿಸುವರೇ? ಅಥವಾ ಭಿನ್ನಾಭಿ ಪ್ರಾಯಗಳು ಮುಂದುವರಿಯಲಿದೆಯೇ? ಎಂಬ ವಿಚಾರ ಜನಸಾಮಾನ್ಯರಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
-ಎಂ.ನಾಗರಾಜಯ್ಯ