Advertisement

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

08:26 PM Dec 18, 2024 | Team Udayavani |

ಮುಳಬಾಗಿಲು: ಎರಡು ದ್ವಿಚಕ್ರ ವಾಹನಗಳಿಗೆ ಬೊಲೆರೋ ವಾಹನ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟು ಮತ್ತೊಬ್ಬರು ಗಂಭೀರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿರುವ ಘಟನೆ ನಂಗಲಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಮುಳಬಾಗಿಲು ತಾಲೂಕು ಬೈರಕೂರು ಹೋಬಳಿ ಕೋಣಂಗುಂಟಿ ಗ್ರಾಮದ ರಾದಪ್ಪ (52), ವೆಂಕಟರಾಮಪ್ಪ (52) ಮತ್ತು ಆತನ ಪತ್ನಿ ಅಲುವೇಲಮ್ಮ (42), ಮತ್ತು ನಾಗೇನಹಳ್ಳಿ ಗ್ರಾಮದ ಚಿಕ್ಕವೆಂಕಟರವಣಪ್ಪ (50), ಮೃತಪಟ್ಟಿರುವ ದುರ್ದೈವಿಗಳಾಗಿದ್ದಾರೆ. ನಾಗೇನಹಳ್ಳಿ ಗ್ರಾಮದ ಚಿಕ್ಕವೆಂಕಟರವಣಪ್ಪ ಪತ್ನಿ ಗಾಯತ್ರಿಯಮ್ಮ (43) ಗಂಭೀರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.

ಘಟನೆ ವಿವರ:

ಬುಧವಾರ ಸಂಜೆ ಕೆಲಸದ ನಿಮಿತ್ತ ಕೋಣಂಗುಂಟೆ ಗ್ರಾಮದ ರಾದಪ್ಪ, ವೆಂಕಟರಾಮಪ್ಪ ಮತ್ತು ಆತನ ಪತ್ನಿ ಅಲುವೇಲಮ್ಮ ಈ ಮೂವರು ಒಂದೇ ದ್ವಿಚಕ್ರ ವಾಹನದಲ್ಲಿ ಕುಳಿತು ಎನ್.ವಡ್ಡಹಳ್ಳಿ ಗ್ರಾಮಕ್ಕೆ ಹೋಗುತ್ತಿದ್ದರು, ಅದೇ ಸಂದರ್ಭದಲ್ಲಿ ನಾಗೇನಹಳ್ಳಿ ಗ್ರಾಮದ ಚಿಕ್ಕವೆಂಕಟರವಣಪ್ಪ ಮತ್ತು ಆತನ ಪತ್ನಿ ಗಾಯತ್ರಿಯಮ್ಮ ಇಬ್ಬರೂ ಸ್ವಗ್ರಾಮದಿಂದ ದ್ವಿಚಕ್ರ ವಾಹನದಲ್ಲಿ ಮುಳಬಾಗಿಲಿಗೆ ತೆರಳುತ್ತಿದ್ದರು.

ಕೋಣಂಗುಂಟೆ ಗ್ರಾಮದ ರಾದಪ್ಪ ದ್ವಿಚಕ್ರ ವಾಹನದಲ್ಲಿ ಮೂವರಿದ್ದರು ಮತ್ತು ನಾಗೇನಹಳ್ಳಿ ಗ್ರಾಮದ ಚಿಕ್ಕವೆಂಕಟರವಣಪ್ಪ ದ್ವಿಚಕ್ರ ವಾಹನದಲ್ಲಿ ಇಬ್ಬರಿದ್ದರು. ಈ ಎರಡೂ ದ್ವಿಚಕ್ರ ವಾಹನಗಳು ಎನ್.ವಡ್ಡಹಳ್ಳಿ ಕಡೆಗೆ ಹೋಗುತ್ತಿದ್ದಾಗ ಗುಡಿಪಲ್ಲಿ-ಬೈರಕೂರು ಕ್ರಾಸ್‌ನಲ್ಲಿ ಸಮಾಜಸೇವಕ ಅಂಜುಬಾಸ್ ಮನೆಯ ಮುಂಭಾಗದಲ್ಲಿ ಎನ್.ವಡ್ಡಹಳ್ಳಿ ಟೊಮ್ಯಾಟೋ ಮಾರುಕಟ್ಟೆಯಿಂದ ಖಾಲಿ ಬಾಕ್ಸ್ ಗಳ ತುಂಬಿಕೊಂಡು ಆಂಧ್ರದ ರಾಮಸಮುದ್ರಂ ಭಾಗದ ಕುರಿಜಲ್ಲು ಗ್ರಾಮಕ್ಕೆ ತೆರಳುತ್ತಿದ್ದ ಬೊಲೆರೋ ಏಕಕಾಲದಲ್ಲಿ ಎರಡೂ ದ್ವಿಚಕ್ರ ವಾಹನಗಳಿಗೆ ಢಿಕ್ಕಿ ಹೊಡೆದಿದೆ.

ಇದರಿಂದ ಒಂದು ದ್ವಿಚಕ್ರ ವಾಹನದಲ್ಲಿದ್ದ ಕೋಣಂಗುಂಟೆ ಗ್ರಾಮದ ಮೂವರು ಮತ್ತು ಮತ್ತೊಂದು ದ್ವಿಚಕ್ರ ವಾಹನದಲ್ಲಿದ್ದ ನಾಗೇನಹಳ್ಳಿ ಗ್ರಾಮದ ಇಬ್ಬರ ಪೈಕಿ ಒಬ್ಬ ವ್ಯಕ್ತಿ ಸೇರಿದಂತೆ ನಾಲ್ವರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿ ಮೃತಪಟ್ಟಿದ್ದು ಮತ್ತೊಬ್ಬ ಮಹಿಳೆ ತೀವ್ರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದು ಆಕೆಯನ್ನು ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮುಳಬಾಗಿಲು ಗ್ರಾಮಾಂತರ ಠಾಣೆಯ ಸಿಪಿಐ ಸತೀಶ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ನಂಗಲಿ ಪ್ರಭಾರಿ ಪಿಎಸ್‌ಐ ಮಮತಾ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮೃತದೇಹಗಳ ಮುಳಬಾಗಿಲು ಸಾರ್ವಜನಿಕ ಆಸ್ಪತ್ರೆ ಶವಾಗಾರದಲ್ಲಿರಿಸಿದ್ದಾರೆ. ಜಖಂಗೊಂಡ ವಾಹನಗಳ ನಂಗಲಿ ಠಾಣೆ ಆವರಣಕ್ಕೆ ಸಾಗಿಸಿದ್ದಾರೆ. ಕೋಲಾರ ಎಸ್‌ಪಿ ಬಿ.ನಿಖಿಲ್, ಎಎಸ್‌ಪಿ ರವಿಶಂಕರ್, ಮುಳಬಾಗಿಲು ಡಿವೈಎಸ್‌ಪಿ ನಂದಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next