Advertisement

ಕಾಲು ಸಂಕದ ಸಂಕಷ್ಟದ ನಡಿಗೆಗೆ ಇನ್ನೂ ಸಿಕ್ಕಿಲ್ಲ ಮುಕ್ತಿ !

11:05 PM Feb 15, 2020 | Sriram |

ಆಜ್ರಿ: ಮಳೆಗಾಲ ಬಂತೆಂದರೆ ಸಾಕು ಈ ಊರಿಗೆ ರಸ್ತೆ ಸಂಪರ್ಕವೇ ಕಡಿತಗೊಳ್ಳುತ್ತದೆ. ಕಾಲುಸಂಕದಲ್ಲಿನ ಸಂಕಷ್ಟದ ನಡಿಗೆಯಲ್ಲಿಯೇ ಜನ ನದಿ ದಾಟುತ್ತಾರೆ. ಸೇತುವೆಯೊಂದು ಇಲ್ಲದ ಕಾರಣ ಈ ಊರಿನವರಿಗೆ ಪ್ರಮುಖ ಊರುಗಳಿಗೆ ತೆರಳಲು ಕೇವಲ 1 ಕಿ.ಮೀ. ದೂರಕ್ಕೆ 5 ಕಿ.ಮೀ. ಹೆಚ್ಚುವರಿ ಸಂಚರಿಸಬೇಕಾದ ಅನಿವಾರ್ಯ. ಇದು ಆಜ್ರಿ ಗ್ರಾಮದ ಬಡಬಾಳು, ಜಡ್ಡಿನಮೂಲೆ, ಯಡೂರು, ಕೇವರ್ಜಿ, ಕ್ಯಾಕೋಡು ಭಾಗದ ಜನರು ಸೇತುವೆಯಿಲ್ಲದೆ ಅನುಭವಿಸುತ್ತಿರುವ ಪಡಿಪಾಟಲು..

Advertisement

ಮಳೆಗಾಲದಲ್ಲಿ ಸಂಚಾರವಿಲ್ಲ
ಬೇಸಗೆಯಲ್ಲಿ ನದಿಯಲ್ಲಿ ನೀರು ಕಡಿಮೆ ಇದ್ದು, ನದಿಯಲ್ಲಿಯೇ ವಾಹನ ದಾಟಿಸಿ ಇನ್ನೊಂದು ಬದಿ ಸೇರುತ್ತಾರೆ. ಆದರೆ ಮಳೆಗಾಲದಲ್ಲಿ ಆಜ್ರಿಯಿಂದ ಬಡಬಾಳುವಿಗೆ ಈ ಮಾರ್ಗವಾಗಿ ವಾಹನದಲ್ಲಿ ಸಂಚರಿಸುವುದು ಕಷ್ಟ. ಊರವರೇ ಪ್ರತಿ ವರ್ಷ ನಿರ್ಮಿಸುವ ತಾತ್ಕಾಲಿಕ ಕಾಲುಸಂಕವೇ ನದಿ ದಾಟಲು ಆಸರೆಯಾಗಿದೆ. ಬೇಸಗೆಯಲ್ಲಿ ಕುಬಾj ನದಿಯಲ್ಲಿ ನೀರು ಕಡಿಮೆಯಾದ ಅನಂತರ ನದಿಯಲ್ಲೇ ತಾತ್ಕಾಲಿಕ ರಸ್ತೆ ನಿರ್ಮಿಸಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಳ್ಳುತ್ತಾರೆ.

3 ವರ್ಷಗಳ ಹಿಂದೊಮ್ಮೆ ಇದೇ ಜಡ್ಡಿನಮೂಲೆಯಲ್ಲಿ ಊರವರೆಲ್ಲ ಸೇರಿ ನಿರ್ಮಿಸಿದ್ದ ತಾತ್ಕಾಲಿಕ ಕಾಲುಸಂಕ ಭಾರೀ ಮಳೆಯಿಂದಾಗಿ ನೆರೆಗೆ ಕೊಚ್ಚಿಕೊಂಡು ಹೋಗಿತ್ತು. ಆ ಬಳಿಕ ಮಳೆಗಾಲ ಮುಗಿಯುವವರೆಗೆ ಈ ದಾರಿಯಲ್ಲಿನ ಸಂಪರ್ಕವೇ ಕಡಿತಗೊಂಡಿತ್ತು. ಕಳೆದ ಮಳೆಗಾಲದಲ್ಲೂ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿ, ಕಾಲುಸಂಕ ಮುಳುಗುವ ಭೀತಿ ಎದುರಾಗಿತ್ತು.

ಜನರ ಆಕ್ರೋಶ
ಜಡ್ಡಿನಮೂಲೆಯಲ್ಲಿ ಕಳೆದ 20 ವರ್ಷಗಳಿಗೂ ಹೆಚ್ಚು ಕಾಲದಿಂದ ಸೇತುವೆ ಬೇಡಿಕೆಯನ್ನು ಇಲ್ಲಿನ ಜನ ಇಡುತ್ತಲೇ ಬಂದಿದ್ದಾರೆ. ಸೇತುವೆ ಬೇಡಿಕೆ ಕುರಿತಂತೆ ಎಲ್ಲ ಜನಪ್ರತಿನಿಧಿಗಳಿಗೂ ಮನವಿ ಕೊಟ್ಟಿದ್ದೇವೆ. ಚುನಾವಣೆ ಬಂದಾಗ ಸೇತುವೆ ಬೇಡಿಕೆ ಈಡೇರಿಸುವ ಭರವಸೆ ನೀಡುತ್ತಾರೆ. ಆ ಬಳಿಕ ಮಾತ್ರ ಈ ಬಗ್ಗೆ ಗಮನವೇ ಕೊಡುವುದಿಲ್ಲ. ಪ್ರತಿ ಸಲವೂ ಇದೇ ಪುನರಾವರ್ತನೆಯಾಗುತ್ತಿದೆ ಎನ್ನುವುದು ಗ್ರಾಮಸ್ಥರ ಆಕ್ರೋಶ.

ಸೇತುವೆಯಾದರೆ ಯಾವ ಊರಿಗೆ ಪ್ರಯೋಜನ?
ಜಡ್ಡಿನಮೂಲೆಯಲ್ಲಿ ಸೇತುವೆಯಾದರೆ ಬಡಬಾಳು, ಯಡೂರು, ಯಡ್ನಾಡಿ, ತೆಂಕಬೈಲು, ಜಡ್ಡಿನಮೂಲೆ, ಜಿಗಿನ್‌ಗುಂಡಿ, ಕಂಪದಕೆರೆ, ಕೇವರ್ಜಿ, ಕ್ಯಾಕೋಡು, ತೆಂಕಬೈಲು ಈ ಎಲ್ಲ ಊರಿಗೆ ಒಂದು ಕಡೆಯಿಂದ ಆಜ್ರಿ, ಸಿದ್ದಾಪುರ ಕಡೆಗೆ, ಮತ್ತೂಂದು ಕಡೆಯಿಂದ ಶಂಕರನಾರಾಯಣ, ಸಿದ್ದಾಪುರ, ಕುಂದಾಪುರಕ್ಕೆ ಸಂಚರಿಸಲು ಪ್ರಯೋಜನವಾಗಲಿದೆ. ಈ ಭಾಗದಿಂದ ಶಂಕರನಾರಾಯಣ, ಕುಂದಾಪುರದ ಕಾಲೇಜುಗಳಿಗೆ, ಅಂಪಾರು, ಸಿದ್ದಾಪುರ ಪ್ರೌಢಶಾಲೆಗೆ ಹೋಗುವ ಸುಮಾರು 25 – 30 ಮಕ್ಕಳಿದ್ದಾರೆ. ಇವರೆಲ್ಲ ಇದೇ ಕಾಲುಸಂಕ ದಾಟಿ ಮುನ್ನಡೆಯಬೇಕಾಗಿದೆ.

Advertisement

ಮುಖ್ಯಮಂತ್ರಿಗೂ ಮನವಿ
ಜಡ್ಡಿನಮೂಲೆಯಲ್ಲಿ ಸೇತುವೆ ನಿರ್ಮಿಸಬೇಕು ಎನ್ನುವ ಬೇಡಿಕೆ ಕುರಿತಂತೆ ಇಲ್ಲಿನ ಗ್ರಾಮಸ್ಥರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದರು. ಇದಲ್ಲದೆ ಶಾಸಕರಾಗಿದ್ದ ಲಕ್ಷ್ಮೀನಾರಾಯಣ ಶೇರಿಗಾರ್‌, ಕೆ. ಗೋಪಾಲ ಪೂಜಾರಿ ಯವರಿಗೂ ಮನವಿ ಸಲ್ಲಿಸ ಲಾಗಿತ್ತು. ಪ್ರಸ್ತುತ ಶಾಸಕ ರಾಗಿರುವ ಬಿ.ಎಂ. ಸುಕುಮಾರ್‌ ಶೆಟ್ಟರಿಗೂ ಬೇಡಿಕೆ ಇಡಲಾಗಿತ್ತು ಎನ್ನುವು ದಾಗಿ ಇಲ್ಲಿನ ಊರವರು ನೆನಪಿಸುತ್ತಾರೆ.

ಹೋರಾಟ ಮಾಡಿ ಸಾಕಾಗಿದೆ
ಈ ಸೇತುವೆಗಾಗಿ ನಾವು ಕಳೆದ ಹಲವು ವರ್ಷಗಳಿಂದ ಹೋರಾಟ ಮಾಡಿ ಮಾಡಿ ಸಾಕಾಗಿದೆ. ಈ ಹೋರಾಟವನ್ನೇ ಕೈಬಿಟ್ಟಿದ್ದೇವೆ. ಇಲ್ಲಿ ವೆಂಟೆಡ್‌ ಡ್ಯಾಂ ಹಾಗೂ ಸೇತುವೆ ನಿರ್ಮಿಸಲಿದ್ದಾರೆ ಎನ್ನುವ ಮಾಹಿತಿಯಿದೆ. ಈಗಿನ ಶಾಸಕರು ಕೂಡ ಸೇತುವೆ ಮಾಡಿಕೊಡುವ ಭರವಸೆ ನೀಡಿದ್ದಾರೆ. ಸೇತುವೆಯಾದರೆ ಈ ಭಾಗದ ಜನರು, ವಿದ್ಯಾರ್ಥಿಗಳಿಗೆ ತುಂಬಾ ಪ್ರಯೋಜನವಾಗಲಿದೆ.
– ವೇಣುಗೋಪಾಲ್‌ ಜಡ್ಡಿನಮೂಲೆ, ಸ್ಥಳೀಯರು

ಪ್ರಸ್ತಾವನೆ ಸಲ್ಲಿಕೆ
ಜಡ್ಡಿನಮೂಲೆಯಲ್ಲಿ ಸೇತುವೆ ಬೇಡಿಕೆ ಗಮನದಲ್ಲಿದ್ದು, ಈ ಬಗ್ಗೆ ಇತ್ತೀಚೆಗೆ ಇಲ್ಲಿಗೆ ಭೇಟಿ ನೀಡಿದ ರಾಜ್ಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ| ರಜನೀಶ್‌ ಗೋಯಲ್‌ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬಗ್ಗೆ ನಿರಂತರ ಪ್ರಯತ್ನ ಮಾಡಲಾಗುತ್ತಿದೆ.
– ಬಿ.ಎಂ. ಸುಕುಮಾರ್‌ ಶೆಟ್ಟಿ, ಬೈಂದೂರು ಶಾಸಕರು

ಶಾಸಕರಿಂದ ಪ್ರಸ್ತಾವನೆ
ಬಡಬಾಳು, ಜಡ್ಡಿನಮೂಲೆ ಸೇತುವೆ ನಿರ್ಮಾಣ ಕುರಿತಂತೆ ಈಗಾಗಲೇ ಶಾಸಕರಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸೇತುವೆ ಮಂಜೂರಾಗಿ ಅನುದಾನ ಬಿಡುಗಡೆಯಾದ ತತ್‌ಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
– ದುರ್ಗಾದಾಸ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ ಕುಂದಾಪುರ

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next