Advertisement

ಗ್ರಾಮೀಣ ಭಾಗದ ವಿದ್ಯುತ್‌ ಸಮಸ್ಯೆಗೆ ಇನ್ನೂ ಸಿಕ್ಕಿಲ್ಲ ಮುಕ್ತಿ

10:23 PM Feb 19, 2020 | mahesh |

ಸುಬ್ರಹ್ಮಣ್ಯ: ಬೇಸಗೆ ಪ್ರಾರಂಭವಾದೊಡನೆ ಗ್ರಾಮೀಣ ಭಾಗದಲ್ಲಿ ಉದ್ಭವ ಆಗುವ ವಿದ್ಯುತ್‌ ಸಮಸ್ಯೆಗೆ ಮುಕ್ತಿ ಕಾಣುವ ಲಕ್ಷಣಗಳು ಸದ್ಯದ ಪರಿಸ್ಥಿತಿಯಲ್ಲಿ ಕಾಣುತ್ತಿಲ್ಲ. ಅನಿಯಮಿತ, ಮಿತಿಮೀರಿದ ವಿದ್ಯುತ್‌ ಸಮಸ್ಯೆಯಿಂದ ವಿದ್ಯಾರ್ಥಿಗಳು, ರೈತರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

Advertisement

ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ವ್ಯಾಪ್ತಿಯಲ್ಲಿ ವಿದ್ಯುತ್‌ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಹಗಲಿನಲ್ಲಿ ವಿದ್ಯುತ್‌ ಕಡಿತಗೊಳ್ಳುವುದರ ಜತೆಗೆ ರಾತ್ರಿಯೂ ಈ ರೀತಿಯ ಪರಿಸ್ಥಿತಿ ಮುಂದುವರಿಯುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇದೀಗ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಹತ್ತಿರವಾಗುತ್ತಿವೆ. ರಾತ್ರಿ ಸಮಯದಲ್ಲಿಯೂ ವಿದ್ಯುತ್‌ ಕಡಿತ ಮಾಡುವುದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಬೆಳಗ್ಗಿನ ಜಾವದಲ್ಲಿಯೂ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ. ಬಿಸಿಲಿನ ಬೇಗೆಗೆ ಕೃಷಿಗೆ ನೀರು ಪೂರೈಸಲು ಕರೆಂಟ್‌ ಸಮಸ್ಯೆಯಿಂದ ರೈತರೂ ವ್ಯಥೆಪಡುವಂತಾಗಿದೆ. ತಮ್ಮ ಕೃಷಿ ಭೂಮಿ ಬಿಸಿಲಿನ ತಾಪಕ್ಕೆ ಸೊರಗುವ ಸ್ಥಿತಿಗತಿ ಉಂಟಾಗಿದೆ.

ಸೀಮೆಎಣ್ಣೆಯೂ ಇಲ್ಲ
ವಿದ್ಯುತ್‌ ಸಮಸ್ಯೆಯಿಂದ ಚಿಮಣಿ ದೀಪ ಉರಿಸೋಣ ಎಂದರೆ ಇತ್ತೀಚಿನ ದಿನಗಳಲ್ಲಿ ಸೀಮೆಎಣ್ಣೆಯೂ ಪೂರೈಕೆಯಾಗುತ್ತಿಲ್ಲ. ಜನರಿಗೆ ಕತ್ತಲೆಮಯ ಬದುಕು ನಡೆಸುವ ಪರಿಸ್ಥಿತಿ ಎದುರಾಗಿದೆ. ಸೀಮೆಎಣ್ಣೆ ವಿತರಿಸಲು ಸಾರ್ವಜನಿಕರು ಒತ್ತಡ ಹೇರಿದರೂ ಈ ಬಗ್ಗೆ ಸರಕಾರ ಯಾವುದೇ ತೀರ್ಮಾಣ ಕೈಗೊಳ್ಳದೆ ಇರುವುದು ದುರಂತ ಎನ್ನುತ್ತಾರೆ ಗ್ರಾಮೀಣರು.

ಒಂದು ಗಂಟೆಯೂ ಇಲ್ಲ
ಗ್ರಾಮೀಣ ಭಾಗದಲ್ಲಿ ದಿನದಲ್ಲಿ ಸರಿಯಾಗಿ ಒಂದು ಗಂಟೆಯೂ ಸರಿಯಾದ ಪ್ರಮಾಣದಲ್ಲಿ ವಿದ್ಯುತ್‌ ಪೂರೈಕೆಯಾಗುತ್ತಿಲ್ಲ. ಸರಕಾರ ಈ ಬಗ್ಗೆ ಗಂಭಿರ ಚಿಂತನೆ ನಡೆಸಿ, ಇದಕ್ಕೆ ಸೂಕ್ತವಾದ ಶೀಘ್ರ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕಿದೆ.

Advertisement

ನೆಕ್‌ವರ್ಕ್‌ನಲ್ಲೂ ವ್ಯತ್ಯಯ
ವಿದ್ಯುತ್‌ ಕಣ್ಣಾಮುಚ್ಚಾಲೆಯಿಂದ ಹಲವು ಸಮಸ್ಯೆಗಳು ಎದುರಾಗುವುದರೊಂದಿಗೆ ಮೊಬೈಲ್‌ ನೆಟ್‌ವರ್ಕ್‌ಗಳಿಗೂ ಇದರ ಬಿಸಿ ತಟ್ಟುತ್ತಿದೆ. ಕಳೆದ ಹಲವು ದಿನಗಳಿಂದ ವಿವಿಧೆಡೆ, ನಗರಗಳೂ ಸೇರಿದಂತೆ ಮೊಬೈಲ್‌ ನೆಟ್‌ವರ್ಕ್‌ ಸೇವೆಯಲ್ಲಿ ವ್ಯತ್ಯಯ ಉಂಟಾಗಲು ಪ್ರಾರಂಭಿಸಿದ್ದು, ಇದು ಸರಕಾರಿ ಕೆಲಸ ಕಾರ್ಯ ಹಾಗೂ ಎಲ್ಲರಿಗೂ ಸಮಸ್ಯೆ ತಂದೊಡ್ಡಿದೆ. ಗ್ರಾಮೀಣ ಭಾಗಗಳಲ್ಲಿ ಕೇವಲ ಪೋನ್‌ ಕರೆ ಮಾಡಲು ನಗರಗಳತ್ತ ತೆರಳಬೇಕಾದ ಸ್ಥಿತಿ ಉಂಟಾಗಿದೆ.

ಪ್ರತಿಭಟನೆ ಬಿಸಿ
ತೀವ್ರ ಪ್ರಮಾಣದಲ್ಲಿ ವಿದ್ಯುತ್‌ ಕಡಿತ ಮಾಡುತ್ತಿರುವುದನ್ನು ವಿರೋಧಿಸಿ ಈಗಾಗಲೇ ಹಲವೆಡೆ ಸಂಘ ಸಂಸ್ಥೆ, ರಾಜಕೀಯ ಪಕ್ಷಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿಭಟನೆಗೆ ದಿನಗಳನ್ನು ನಿಗದಿಗೊಳಿಸಲಾಗಿದೆ. ಇದು ವರ್ಷಂಪ್ರತಿ ನಡೆಯುವ ಘಟನೆಗಳಾಗಿ ಹೋಗಿದೆ.
ಆದರೆ ಈವರೆಗೆ ಇದಕ್ಕೆ ಪೂರ್ಣ ಸಮಸ್ಯೆ ನಿವಾರಣಾ ನೆಲೆ ಕಂಡುಕೊಳ್ಳುವಂತೆ ಸಾರ್ವಜನಿಕರೂ ಆಗ್ರಹಿಸಿದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಕೆಲವೊಂದು ಹೇಳಿಕೆಗಳನ್ನು ನೀಡಿ ಕೈತೊಳೆದುಕೊಂಡು ಸುಮ್ಮನಾಗುತ್ತಾರೆಯೇ ವಿನಾ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನಕ್ಕೆ ಮುಂದಾಗುತ್ತಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ಲೋಡ್‌ಶೆಡ್ಡಿಂಗ್‌ ಸಮಸ್ಯೆ
ಗ್ರಾಮೀಣ ಭಾಗದಲ್ಲಿ ಮಿತಿ ಮೀರಿದ ಲೋಡ್‌ಶೆಡ್ಡಿಂಗ್‌ನಿಂದ ಎಲ್ಲರಿಗೂ ಸಮಸ್ಯೆಯಾಗಿದ್ದು, ಕೃಷಿಕರು ಮುಂದಿನ ದಿನಗಳಲ್ಲಿ ನೋವು ಅನುಭವಿಸುವಂತಾಗಿದೆ. ಮೊಬೈಲ್‌ ನೆಟ್‌ವರ್ಕ್‌ನ ಸಮಸ್ಯೆಯಿಂದ ಫೋನ್‌ ಕರೆ ಮಾಡಲು ನಗರದತ್ತ ತೆರಳುವ ಸ್ಥಿತಿ ನಿರ್ಮಾಣವಾಗಿದೆ.
– ಸುರೇಶ್‌ ಉಜಿರಡ್ಕ, ಸಾಮಾಜಿಕ ಕಾರ್ಯಕರ್ತರು, ಸುಬ್ರಹ್ಮಣ್ಯ

Advertisement

Udayavani is now on Telegram. Click here to join our channel and stay updated with the latest news.

Next