Advertisement
ಮುಕ್ಕೂರು ಅಂಚೆ ಕಚೇರಿ ಉಳಿಸಿ ಹೋರಾಟ ಸಮಿತಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಅವರ ಮೂಲಕ ಮುಕ್ಕೂರಿನಲ್ಲೇ ಅಂಚೆ ಕಚೇರಿ ಮರು ಸ್ಥಾಪಿಸುವಂತೆ ಅಂಚೆ ಇಲಾಖೆಯನ್ನು ಆಗ್ರಹಿಸಲಾಗಿತ್ತು. ಇದರ ಪರಿಣಾಮ ಸ್ಥಳಾಂತರಗೊಂಡು ಮೂರು ವಾರದೊಳಗೆ ಅಂಚೆ ಕಚೇರಿ ಪುನಃ ಮುಕ್ಕೂರಿನಲ್ಲಿ ಕಾರ್ಯಾರಂಭಿಸಿದೆ.
ಜೂ. 14ರಂದು ಪುತ್ತೂರು ಮುಖ್ಯ ಅಂಚೆ ಕಚೇರಿಯ ಹಿರಿಯ ಅಂಚೆ ಅಧೀಕ್ಷಕ ಜಗದೀಶ ಪೈ, ಸಹಾಯಕ ಅಧೀಕ್ಷಕ ಲೋಕನಾಥ, ಸುಳ್ಯ ಅಂಚೆ ಇನ್‌ಸ್ಪೆಕ್ಟರ್ ಮೆಲ್ವಿನ್ ಲೋಬೋ ಅವರು ಮುಕ್ಕೂರಿಗೆ ಭೇಟಿ ನೀಡಿ, ಗ್ರಾಮಸ್ಥರ ಅಹವಾಲು ಆಲಿಸಿದರು. ಅಂಚೆ ಕಚೇರಿ ಹೋರಾಟ ಸಮಿತಿ ಪದಾಧಿಕಾರಿಗಳಾದ ಗಣೇಶ್ ಶೆಟ್ಟಿ ಕುಂಜಾಡಿ, ಉಮೇಶ್ ಕೆಎಂಬಿ, ಕುಶಾಲಪ್ಪ ಮೊದಲಾದವರು ಗ್ರಾಹಕರ ಗಮನಕ್ಕೆ ತಾರದೆ ಏಕಾಏಕಿ ಅಂಚೆ ಕಚೇರಿ ಸ್ಥಳಾಂತರಿಸಿರುವ ಇಲಾಖೆಯ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ನೆಟ್ವರ್ಕ್ ಸಮಸ್ಯೆಯಿಂದ ಸ್ಥಳಾಂತರ ನಡೆಸಲಾಗಿದೆ ಎಂದು ಅಧಿಕಾರಿಗಳು ಉತ್ತರಿಸಲು ಮುಂದಾದರೂ, ಇದನ್ನು ಗ್ರಾಹಕರ ಗಮನಕ್ಕೆ ತರಬೇಕಿತ್ತು. ಸಮಸ್ಯೆಗೆ ಊರವರು ಸ್ಪಂದಿಸುತ್ತಿದ್ದರು. ಅದು ಬಿಟ್ಟು ಉದ್ದೇಶಪೂರ್ವಕವಾಗಿ ಸ್ಥಳಾಂತರಿಸಿದ್ದು, ತತ್‌ಕ್ಷಣ ಪುನಾರಂಭಿಸದಿದ್ದರೆ ಧರಣಿ ಸತ್ಯಾಗ್ರಹ ನಡೆಸುವ ಎಚ್ಚರಿಕೆ ನೀಡಿದರು. ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಕುಸುಮಾಧರ ಮುಕ್ಕೂರು, ಕೇಶವ ಕಂಡಿಪ್ಪಾಡಿ, ಯೂಸುಫ್ ಮುಕ್ಕೂರು, ಪುರುಷೋತ್ತಮ ಅಡ್ಯತಕಂಡ, ಲಿಂಗಪ್ಪ ಕುಂಡಡ್ಕ, ದಿವಾಕರ ಬೀರುಸಾಗು, ದೂಮಣ್ಣ ಗೌಡ ಬೀರುಸಾಗು, ಕುಸುಮಾಧರ, ಬೃಂದಾ ಮುಕ್ಕೂರು, ಗಂಗಯ್ಯ, ರೂಪಾನಂದ ಉಪಸ್ಥಿತರಿದ್ದರು. ಗ್ರಾಮಸ್ಥರ ಹೋರಾಟದ ಫಲ
ಬೆಳ್ಳಾರೆ ಅಂಚೆ ವಿಭಾಗಕ್ಕೆ ಒಳಪಟ್ಟ ಪೆರುವಾಜೆ ಗ್ರಾಮದ ಮುಕ್ಕೂರಿನಲ್ಲಿ 55 ವರ್ಷಗಳ ಹಿಂದೆ ಅಂಚೆ ಕಚೇರಿ ತೆರೆಯಲಾಗಿತ್ತು. ಮೇ 22ರಿಂದ ಅಂಚೆ ಕಚೇರಿಗೆ ಬೀಗ ಜಡಿದು, ಪೆರುವಾಜೆ ಗ್ರಾ.ಪಂ. ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಮುಕ್ಕೂರು ಪರಿಸರದಲ್ಲಿ 250ಕ್ಕೂ ಅಧಿಕ ಮಂದಿ ಆರ್‌ಡಿ ಸೌಲಭ್ಯ ಹೊಂದಿದ್ದು ಎಫ್‌ಡಿ, ಇನ್ಶೂರೆನ್ಸ್ ಖಾತೆದಾರರಿದ್ದರು. ದಿಢೀರ್ ಸ್ಥಳಾಂತರದ ಪರಿಣಾಮ ಅವರು ತೊಂದರೆಗೆ ಈಡಾಗಿದ್ದರು. ಬಳಿಕ ಮುಕ್ಕೂರು ಅಂಚೆ ಕಚೇರಿ ಉಳಿಸಿ ಹೋರಾಟ ಸಮಿತಿ ರಚಿಸಿ ಗ್ರಾಮಸ್ಥರ ಸಭೆ ನಡೆದು, ಅಂಚೆ ಕಚೇರಿ ಸ್ಥಳಾಂತರ ವಿರೋಧಿಸಿ ಜೂ. 7ರಂದು ಪುತ್ತೂರು ಮುಖ್ಯ ಅಂಚೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಸಂಸದರಿಗೆ ಮನವಿ ಸಲ್ಲಿಸಲಾಗಿತ್ತು. ಜೂ. 13ರಂದು ನಳಿನ್ ಕುಮಾರ್ ಕಟೀಲು ಅವರ ಉಪಸ್ಥಿತಿಯಲ್ಲಿ ಮಂಗಳೂರಿನಲ್ಲಿ ಪುತ್ತೂರು ವಿಭಾಗೀಯ ಹಿರಿಯ ಅಂಚೆ ಅಧೀಕ್ಷಕರ ಸಭೆ ನಡೆದು, ತತ್‌ಕ್ಷಣ ಮುಕ್ಕೂರಿನಲ್ಲಿ ಅಂಚೆ ಕಚೇರಿ ಆರಂಭಿಸುವಂತೆ ಸಂಸದರು ಸೂಚನೆ ನೀಡಿದ್ದರು. ಶುಕ್ರವಾರ ಅಧಿಕಾರಿಗಳು ಮುಕ್ಕೂರಿಗೆ ಭೇಟಿ ನೀಡಿ ಗ್ರಾಮಸ್ಥರ, ಗ್ರಾಹಕರ ಬೇಡಿಕಗೆ ಸ್ಪಂದಿಸುವ ಭರವಸೆ ನೀಡಿದರು. ಪುನಾರಂಭಕ್ಕೆ ಹಳೆ ಕಟ್ಟಡ, ಸೊಸೈಟಿ ಕಟ್ಟಡ ಪರಿಶೀಲಿಸಿದರು. ಶುಕ್ರವಾರ ಮಧ್ಯಾಹ್ನವೇ ಪೆರುವಾಜೆ ಗ್ರಾ.ಪಂ. ಕಟ್ಟಡಕ್ಕೆ ಸ್ಥಳಾಂತರವಾಗಿದ್ದ ಅಂಚೆ ಕಚೇರಿಯನ್ನು ಮುಕ್ಕೂರಿಗೆ ಸ್ಥಳಾಂತರಿಸಲಾಯಿತು.
Related Articles
ಶುಕ್ರವಾರ ಮುಕ್ಕೂರಿಗೆ ಭೇಟಿ ನೀಡಿ ಅಲ್ಲಿನ ಗ್ರಾಮಸ್ಥರ ಅಹವಾಲು ಆಲಿಸಿ, ಸ್ಥಳ ಪರಿಶೀಲನೆ ನಡೆಸಲಾಯಿತು. ಬಳಿಕ ಪೆರುವಾಜೆ ಗ್ರಾ.ಪಂ.ಕಟ್ಟಡದಲ್ಲಿದ್ದ ಅಂಚೆ ಕಚೇರಿಯನ್ನು ಮುಕ್ಕೂರಿನ ಹಳೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.
– ಪಾಂಡುರಂಗ ಪೈ. ಹಿರಿಯ ಅಂಚೆ ಅಧೀಕ್ಷಕ, ಪುತ್ತೂರು
Advertisement