Advertisement

ಮುಕ್ಕೂರು: ಅಂಚೆ ಕಚೇರಿ ಸ್ಥಳಾಂತರ ವಿರುದ್ಧ ಸಭೆ

10:14 PM Jun 04, 2019 | mahesh |

ಮುಕ್ಕೂರು: ಪೆರುವಾಜೆ ಗ್ರಾಮದ ಮುಕ್ಕೂರು ಅಂಚೆ ಕಚೇರಿಯನ್ನು ಗ್ರಾಹಕರಿಗೆ ಮಾಹಿತಿ ನೀಡದೆ ಏಕಾಏಕಿ ಸ್ಥಳಾಂತರಿಸಿದ್ದು, ಇದನ್ನು ಮತ್ತೆ ಮುಕ್ಕೂರಿನಲ್ಲಿ ಆರಂಭಿಸುವ ತನಕ ವಿರಮಿಸದೆ ಹೋರಾಟ ನಡೆಸಲು ಮುಕ್ಕೂರಿನಲ್ಲಿ ಮಂಗಳವಾರ ಸ್ಥಳಾಂತರ ವಿರೋಧಿಸಿ ಅಂಚೆ ಕಚೇರಿ ಉಳಿಸಿ ಹೋರಾಟ ಸಮಿತಿ ವತಿಯಿಂದ ನಡೆದ ಗ್ರಾಮಸ್ಥರ ಸಭೆಯಲ್ಲಿ ನಿರ್ಧರಿಸಲಾಯಿತು.

Advertisement

ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ, 55 ವರ್ಷಕ್ಕೂ ಅಧಿಕ ಕಾಲ ಮುಕ್ಕೂರಿನಲ್ಲಿದ್ದ ಅಂಚೆ ಕಚೇರಿಯನ್ನು ಗ್ರಾಹಕರಿಗೆ ಮಾಹಿತಿ ಕೊಡದೆ ಪೆರುವಾಜೆ ಗ್ರಾ.ಪಂ. ಕಟ್ಟಡಕ್ಕೆ ಸ್ಥಳಾಂತರಿಸಿದ್ದಾರೆ. ಇದಕ್ಕೆ ಇಲ್ಲಿನ ಗ್ರಾಮಸ್ಥರ ವಿರೋಧವಿದೆ. ಅಂಚೆ ಕಚೇರಿ ಪುನರಾರಂಭದ ತನಕ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದರು.

ಸೌಲಭ್ಯ ಕಸಿಯಲು ಹುನ್ನಾರ
ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ತಿರುಮಲೇಶ್ವರ ಭಟ್‌ ಕಾನಾವು ಮಾತನಾಡಿ, ಮುಕ್ಕೂರಿನಲ್ಲಿ ಇರುವ ಸೌಲಭ್ಯಗಳನ್ನು ಕಸಿದುಕೊಳ್ಳಲಾಗುತ್ತಿದೆ. ಹಿಂದೆ ಸೊಸೈಟಿ, ಈಗ ಅಂಚೆ ಕಚೇರಿ ಸ್ಥಳಾಂತರಿಸುವ ಮೂಲಕ ಊರನ್ನು ಸೌಲಭ್ಯ ರಹಿತವನ್ನಾಗಿ ಮಾಡುವ ಹುನ್ನಾರ ನಡೆಯುತ್ತಿದೆ. ಇದರ ವಿರುದ್ಧ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಮುಕ್ಕೂರಿನಲ್ಲಿ ಅಂಚೆ ಕಚೇರಿ ಮರು ಸ್ಥಾಪಿಸಬೇಕು ಎಂಬ ನಮ್ಮ ಬೇಡಿಕೆ ಈಡೇರಲೆಬೇಕು ಎಂದವರು ಆಗ್ರಹಿಸಿದರು.

ಉದ್ದೇಶಪೂರ್ವಕ ಸ್ಥಳಾಂತರ
ಪೆರುವಾಜೆ ಗ್ರಾ.ಪಂ. ಸದಸ್ಯ, ಹೋರಾಟ ಸಮಿತಿ ಅಧ್ಯಕ್ಷ ಉಮೇಶ್‌ ಕೆ.ಎಂ.ಬಿ. ಮಾತನಾಡಿ, ನಾನು ಈ ಭಾಗದ ಗ್ರಾ.ಪಂ. ಸದಸ್ಯನಾಗಿದ್ದು, ಅಂಚೆ ಕಚೇರಿಯನ್ನು ಪೆರುವಾಜೆ ಗ್ರಾ.ಪಂ. ಕಟ್ಟಡಕ್ಕೆ ಸ್ಥಳಾಂತರಿಸುವ ಬಗ್ಗೆ ನನಗೆ ಯಾರೂ ಮಾಹಿತಿ ನೀಡಿಲ್ಲ. ಉದ್ದೇಶಪೂರ್ವಕವಾಗಿಯೇ ದಿಢೀರ್‌ ಸ್ಥಳಾಂತರಿಸಲಾಗಿದೆ. ಈ ಬಗ್ಗೆ ಪುತ್ತೂರು ಅಂಚೆ ಕಚೇರಿಗೆ ನಿಯೋಗ ತೆರಳಿ ಮನವಿ ಮಾಡಲಾಗಿದೆ. ಸಂಸದರು ಮುಕ್ಕೂರಿನಲ್ಲಿ ಅಂಚೆ ಕಚೇರಿ ಮರು ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಶೀಘ್ರವಾಗಿ ಆರಂಭಿಸದಿದ್ದರೆ ಮುಂದೆ ಯಾವುದೇ ಹೋರಾಟಕ್ಕೆ ಸಿದ್ಧ ಎಂದರು.

ಸಭೆಯಲ್ಲಿ ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಗಣೇಶ ಶೆಟ್ಟಿ ಕುಂಜಾಡಿ, ಅಂಚೆ ಕಚೇರಿ ಉಳಿಸಿ ಹೋರಾಟ ಸಮಿತಿ ಗೌರವಾಧ್ಯಕ್ಷ ಗೋಪಾಲಕೃಷ್ಣ ಭಟ್‌ ಕಾನಾವು, ಕಾರ್ಯದರ್ಶಿ ಸತ್ಯಪ್ರಸಾದ್‌ ಕಂಡಿಪ್ಪಾಡಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಸುಧಾಕರ ರೈ ಕುಂಜಾಡಿ, ದಾಮೋದರ ಗೌಡ ಕಂಡಿಪ್ಪಾಡಿ, ಗುಡ್ಡಪ್ಪ ಗೌಡ ಅಡ್ಯತಕಂಡ, ಹೊನ್ನಪ್ಪ ಗೌಡ ಚಾಮುಂಡಿಮೂಲೆ, ರಮೇಶ್‌ ಕಾನಾವು, ಕುಶಾಲಪ್ಪ ಪೆರುವಾಜೆ, ಯಶವಂತ ಜಾಲು, ನಾರಾಯಣ ಕೊಂಡೆಪ್ಪಾಡಿ, ಸುಬ್ರಾಯ ಭಟ್‌ ನೀರ್ಕಜೆ, ಕುಂಞಣ್ಣ ನಾಯ್ಕ ಅಡ್ಯತಕಂಡ, ಇಬ್ರಾಹಿಂ ಮುಕ್ಕೂರು, ಸುಜಾತ ವಿ.ರಾಜ್‌ ಕಜೆ, ಜಯಂತ ಕುಂಡಡ್ಕ, ಗ್ರಾಮಸ್ಥರಾದ ಸುಬ್ರಹ್ಮಣ್ಯ ಒರುಂಕು, ಕುಸುಮಾಧರ ಪೂಜಾರಿ, ಯಾಕುಬ್‌ ಖಾನ್‌, ಜನಾರ್ದನ ಕಂಡಿಪ್ಪಾಡಿ, ಮಂಜುನಾಥ ಗೌಡ, ಚೆನ್ನಪ್ಪ ಗೌಡ ಉಪಸ್ಥಿತರಿದ್ದರು.

Advertisement

ಪ್ರತ್ಯೇಕ ಅಂಚೆ ಕಚೇರಿ ಸ್ಥಾಪಿಸಲಿ
ಅರ್ಧ ಶತಮಾನಕ್ಕೂ ಅಧಿಕ ಕಾಲ ಪೆರುವಾಜೆ ಗ್ರಾಮದ ಮುಕ್ಕೂರಿನಲ್ಲಿದ್ದ ಅಂಚೆ ಕಚೇರಿಯನ್ನು ಪೆರುವಾಜೆ ಗ್ರಾ.ಪಂ. ಕಟ್ಟಡಕ್ಕೆ ಸ್ಥಳಾಂತರಿಸಿರುವುದಕ್ಕೆ ಎಲ್ಲರ ವಿರೋಧವಿದೆ. ಪೆರುವಾಜೆಯಲ್ಲಿ ಹೊಸ ಅಂಚೆ ಕಚೇರಿ ತೆರಯಲಿ. ಅದಕ್ಕೆ ನಮ್ಮ ವಿರೋಧವಿಲ್ಲ. ಮುಕ್ಕೂರಿನಿಂದ ಸ್ಥಳಾಂತರಿಸಿರುವುದು ಈ ಊರನ್ನು ಮೂಲ ಸೌಲಭ್ಯ ರಹಿತವನ್ನಾಗಿಸಬೇಕು ಎನ್ನುವ ಷಡ್ಯಂತ್ರವಿದೆ ಎಂದು ಹೋರಾಟ ಸಮಿತಿ ಪದಾಧಿಕಾರಿಗಳು ಹೇಳಿದರು.

ನಿಯೋಗ ತೆರಳಲು ನಿರ್ಧಾರ
ಪುತ್ತೂರು ಅಂಚೆ ವಿಭಾಗದಲ್ಲಿ ಜೂ. 7ರಂದು ನಡೆಯಲಿರುವ ಅಂಚೆ ಅದಾಲತ್‌ನಲ್ಲಿ ಮುಕ್ಕೂರು ಅಂಚೆ ಕಚೇರಿ ಉಳಿಸಿ ಹೋರಾಟ ಸಮಿತಿ ವತಿಯಿಂದ ನಿಯೋಗ ತೆರಳಿ ಮುಕ್ಕೂರಿನಲ್ಲಿ ಅಂಚೆ ಕಚೇರಿ ಪುನರಾರಂಭಕ್ಕೆ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಮುಂದಿನ ಹೋರಾಟಕ್ಕಾಗಿ ಸಮಿತಿ ರಚಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next