Advertisement

ಗಿನ್ನಿಸ್‌ ದಾಖಲೆ ಹೊಸ್ತಿಲಲ್ಲಿ ಮುಖ್ಯಮಂತ್ರಿ

10:05 AM Dec 27, 2019 | Lakshmi GovindaRaj |

ಹಿರಿಯ ನಟ ಚಂದ್ರು ಅವರನ್ನು ಕನ್ನಡ ರಂಗಭೂಮಿ ಮತ್ತು ಚಿತ್ರರಂಗ “ಮುಖ್ಯಮಂತ್ರಿ ಚಂದ್ರು’ ಎಂದೇ ಗುರುತಿಸಿ, ಕರೆಯುವಂತೆ ಮಾಡಿದ “ಮುಖ್ಯಮಂತ್ರಿ’ ನಾಟಕ ಮತ್ತದರ ಪಾತ್ರಧಾರಿ ಮುಖ್ಯಮಂತ್ರಿ ಚಂದ್ರು, ಮತ್ತು ಆ ನಾಟಕದ ಸೂತ್ರಧಾರಿ ಡಾ. ಬಿ.ವಿ ರಾಜಾರಾಂ ಹೆಸರು ಈಗ ಗಿನ್ನಿಸ್‌ ದಾಖಲೆಗೆ ಸೇರ್ಪಡೆಯಾಗುವ ಹಂತದಲ್ಲಿದೆ.

Advertisement

ಹೌದು, ಕನ್ನಡ ರಂಗಭೂಮಿಯಲ್ಲಿ ಸುಮಾರು ಸತತ ನಲವತ್ತು ವರ್ಷಗಳ ಕಾಲ ಪ್ರದರ್ಶನಗೊಂಡಿರುವ, ಈಗಾಗಲೇ ಬರೋಬ್ಬರಿ 697 ಯಶಸ್ವಿ ಪ್ರದರ್ಶನಗಳನ್ನು ಕಂಡಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ “ಮುಖ್ಯಮಂತ್ರಿ’ ನಾಟಕ ಇದೇ ಜನವರಿ ಮೊದಲವಾರ ಯಶಸ್ವಿಯಾಗಿ 700 ಪ್ರದರ್ಶನಗಳನ್ನು ಪೂರೈಸಲಿದೆ. 1971ರಲ್ಲಿ “ಕಲಾ ಗಂಗೋತ್ರಿ’ ರಂಗ ತಂಡ ಪ್ರಾರಂಭಗೊಂಡು ಅದರ ಮೂಲಕ “ಮುಖ್ಯಮಂತ್ರಿ’ ನಾಟಕ ಪ್ರದರ್ಶನ ಆರಂಭವಾಗಿತ್ತು.

ಇದಲ್ಲದೆ “ಕಲಾ ಗಂಗೋತ್ರಿ’ ತಂಡದ ಮೂಲಕ ಕಲಾವಿದರಾಗಿ, ನಿರ್ದೇಶಕರಾಗಿ ರಂಗಭೂಮಿಗೆ ಪರಿಚಯವಾದ ಅನೇಕರು ವಿಶ್ವದಾದ್ಯಂತ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ “ಕಲಾ ಗಂಗೋತ್ರಿ’ ರಂಗ ತಂಡಕ್ಕೆ 49 ವಸಂತಗಳನ್ನು ಪೂರೈಸಿರುವುದರಿಂದ, ಇದೇ ಡಿಸೆಂಬರ್‌ 31 ರಿಂದ ಜನವರಿ 5ರ ವರೆಗೆ ಆರು ದಿನಗಳ ಕಾಲ ಬೆಂಗಳೂರಿನಲ್ಲಿ “ಅಮೃತ ರಂಗ ಹಬ್ಬ’ ಎನ್ನುವ ಹೆಸರಿನಲ್ಲಿ ರಂಗ ಕಾರ್ಯಕ್ರಮವನ್ನು ಆಯೋಜಿಸಿದೆ.

ಈ ರಂಗ ಪ್ರದರ್ಶನದಲ್ಲಿ “ಮುಖ್ಯಮಂತ್ರಿ’ ನಾಟಕ ಮೂರು ಪ್ರದರ್ಶನಗಳನ್ನು ಕಾಣಲಿದ್ದು, ಆ ಮೂಲಕ 700 ಪ್ರದರ್ಶನಗಳನ್ನು ಕಂಡ ನಾಟಕ ಎಂಬ ಖ್ಯಾತಿಗೆ ಪಾತ್ರವಾಗಲಿದೆ. ಇದೇ ವೇಳೆ ವಿಶ್ವದಲ್ಲೇ ನಾಲ್ಕು ದಶಕಗಳ ಅವಧಿಗೆ ಒಂದೇ ನಾಟಕದಲ್ಲಿ ನಟನಾಗಿ ಮುಖ್ಯಮಂತ್ರಿ ಚಂದ್ರು ಮತ್ತು ನಿರ್ದೇಶಕನಾಗಿ ಡಾ. ಬಿ.ವಿ ರಾಜಾರಾಂ ಇವರಿಬ್ಬರೇ ಗುರುತಿಸಿಕೊಂಡಿದ್ದರಿಂದ, ಈ ಸಂಗತಿ ಕೂಡ ಗಿನ್ನಿಸ್‌ ದಾಖಲೆಗೆ ಸೇರ್ಪಡೆಯಾಗಲು ಅರ್ಹವಾಗಿದೆ ಎನ್ನುವುದು ಆಯೋಜಕರ ಮಾತು.

ಇನ್ನು “ಅಮೃತ ರಂಗ ಹಬ್ಬ’ ಕಾರ್ಯಕ್ರಮದಲ್ಲಿ “ಮುಖ್ಯಮಂತ್ರಿ’ ನಾಟಕದ ಮೂರು ಪ್ರದರ್ಶನಗಳ ಜೊತೆಗೆ, ಮುಖ್ಯ ಮಂತ್ರಿ ಚಂದ್ರು ಅಭಿನಯದ “ಮೂಕಿ ಟಾಕಿ ಮೈಮ್‌’, ರಂಗಕರ್ಮಿ ಕೆ.ಆರ್‌ ಶ್ರೀನಿವಾಸ್‌ ಮೇಷ್ಟ್ರು ಸಾರಥ್ಯದ “ಮೈಸೂರು ಮಲ್ಲಿಗೆ’, “ಮುದಿ ದೊರೆ ಮತ್ತು ಮೂವರು ಮಕ್ಕಳು’ ನಾಟಕ, ಜೊತೆಗೆ “ಹಸಿರು ರಿಬ್ಬನ್‌’ ಚಿತ್ರ ಕೂಡ ಪ್ರದರ್ಶನವಾಗಲಿದೆ.

Advertisement

ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಕವಿಗಳು, ಸಾಹಿತಿಗಳು, ರಂಗಕರ್ಮಿಗಳು ಪಾಲ್ಗೊಳ್ಳಲಿದ್ದು, ಇದೇ ಸಂದರ್ಭದಲ್ಲಿ 75 ವಸಂತಗಳನ್ನು ಪೂರೈಸಿದ ರಂಗಕರ್ಮಿ ಶ್ರೀನಿವಾಸ ಮೇಷ್ಟ್ರು ಮತ್ತು ಹಿರಿಯ ಕವಿ ಡಾ.ಹೆಚ್‌.ಎಸ್‌ ವೆಂಕಟೇಶ ಮೂರ್ತಿ ಅವರಿಗೆ ಸನ್ಮಾನವನ್ನು ಏರ್ಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next