Advertisement

ಮುಖರ್ಜಿಯವರ ರಾಜಕೀಯ ಮೌಲ್ಯ ಇಂದಿಗೂ ಪ್ರಸ್ತುತ

01:13 AM Jun 24, 2019 | Lakshmi GovindaRaj |

ಬೆಂಗಳೂರು: ಜನಸಂಘದ ಸ್ಥಾಪಕ ಶ್ಯಾಮಪ್ರಸಾದ್‌ ಮುಖರ್ಜಿ ಅವರ ರಾಷ್ಟ್ರೀಯ ಅಸ್ಮಿತೆಯ ರಾಜಕೀಯ ಮೌಲ್ಯಗಳು ಇಂದಿಗೂ ಪ್ರಸ್ತುತ ಎಂದು ರಾಜ್ಯಸಭಾ ಸದಸ್ಯ ಸ್ವಪನ್‌ ದಾಸ್‌ಗುಪ್ತಾ ಅಭಿಪ್ರಾಯಪಟ್ಟರು.

Advertisement

ಡಾ.ಶ್ಯಾಮ ಪ್ರಸಾದ್‌ ಮುಖರ್ಜಿ ಸಂಶೋಧನಾ ಪ್ರತಿಷ್ಠಾನದಿಂದ ಭಾನುವಾರ ರಾಜಾಜಿನಗರದ ಕೆಎಲ್‌ಇ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಭಾರತ ಸುರಕ್ಷತೆ- ವರ್ತಮಾನ ಮತ್ತು ಭವಿಷ್ಯ ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಹರ್‌ ಲಾಲ್‌ ನೆಹರು ಅವರ ಮಂತ್ರಿ ಮಂಡಲದಲ್ಲಿ ಶ್ಯಾಮಪ್ರಸಾದ್‌ ಮುಖರ್ಜಿಯವರು ಸಚಿವರಾಗಿದ್ದರು. ನೆಹರು ಅವರು ತೆಗೆದುಕೊಂಡು ನಿರ್ಧಾರ ರಾಷ್ಟ್ರೀಯತೆಯ ನೆಲೆಗಟ್ಟಿನಲ್ಲಿ ಒಪ್ಪುವಂತಹದಲ್ಲ ಎಂಬ ಕಾರಣಕ್ಕೆ ಸಚಿವಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಅವರ ಇಂತಹ ರಾಜಕೀಯ ಅದರ್ಶಗಳು ಇಂದಿಗೂ ಪ್ರಸ್ತುತ ಎನಿಸುತ್ತಿದೆ ಎಂದರು. ದೇಶ ವಿಭಜನೆ ಸಂದರ್ಭದಲ್ಲಿ ಬಂಗಾಲ ಮತ್ತು ಅಸ್ಸಾಂ ಪ್ರದೇಶವನ್ನು ಪೂರ್ವಪಾಕಿಸ್ತಾನ (ಈಗಿನ ಬಾಂಗ್ಲ ದೇಶ)ಕ್ಕೆ ಸೇರಿಸಬೇಕು ಎಂಬುದು ಮೊಹಮ್ಮದ್‌ ಅಲಿ ಜಿನ್ನಾ ಅವರ ಯೋಚನೆಯಾಗಿತ್ತು. ಅದಕ್ಕೆ ಸಿದ್ಧತೆಯೂ ನಡೆದಿತ್ತು.

ಆದರೆ, ಶ್ಯಾಮ ಪ್ರಸಾದ್‌ ಮುಖರ್ಜಿವರು ಇದನ್ನು ವಿರೋಧಿಸಿದ್ದರು. ಕಾಶ್ಮೀರದ ಕುರಿತಂತೆ ನೆಹರು ಅವರ ನಿಲುವನ್ನು ವಿರೋಧಿಸಿದ ಶ್ಯಾಮ ಪ್ರಸಾದ್‌ ಮುಖರ್ಜಿಯವರು ಎರಡು ಪ್ರಧಾನಿ, ಎರಡು ಸಂವಿಧಾನ ಹಾಗೂ ಎರಡು ಧ್ವಜ ಎಂಬ ಹೋರಾಟ ಆರಂಭಿಸಿದ್ದರು ಎಂದರು.

Advertisement

ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯಕ್ಷೇತ್ರಿಯ ಸಂಘಚಾಲಕ ವಿ.ನಾಗರಾಜ ಮಾತನಾಡಿ, ದೇಶಕ್ಕೆ ಮಾರಕವಾಗಿರುವ ಮೆಕಾಲ ಶಿಕ್ಷಣ ಪದ್ಧತಿಯನ್ನು ಶ್ಯಾಮ ಪ್ರಸಾದ್‌ ಮುಖರ್ಜಿಯವರು ಅಂದೇ ವಿರೋಧಿಸಿದ್ದರು. ಅತ್ಯಂತ ಚಿಕ್ಕ ವಯಸ್ಸಿಗೆ ಕಾನೂನು ಪದವಿ ಪಡೆದು, ವಿಶ್ವವಿದ್ಯಾಲಯದ ಕುಲಪತಿಯಾಗಿ ಎರಡು ಬಾರಿ ಆಯ್ಕೆಯಾಗಿದ್ದರು.

ನಿಷ್ಕಲ್ಮಶ ಚಾರಿತ್ರ್ಯ ಹೊಂದಿದ್ದ ಅವರಿಗೆ ಭಾರತವನ್ನು ಹೇಗೆ ಕಟ್ಟಬೇಕು ಎಂಬುದರ ಸ್ಪಷ್ಟ ಕಲ್ಪನೆ ಇತ್ತು ಎಂದರು. ಹಿಂದಿ ಹೇರಿಕೆ ಮಾಡುವುದು ಸರಿಯಲ್ಲ, ಇದರಿಂದ ಭವಿಷ್ಯದಲ್ಲಿ ಸಮಸ್ಯೆಯಾಗಲಿದೆ ಎಂಬ ಮುನ್ಸೂಚನೆಯನ್ನು ಮುಖರ್ಜಿ ನೀಡಿದ್ದರು. ಹೋರಾಟದ ಜತೆಗೆ ಶಿಕ್ಷಣ ಮತ್ತು ರಾಷ್ಟ್ರೀಯತೆಯ ಸ್ಪಷ್ಟ ಪರಿಕಲ್ಪನೆ ಹೊಂದಿದ್ದರು.

ಆದರೆ, ಅವರ ಸಾವು ಇಂದಿಗೂ ನಿಗೂಢವಾಗಿಯೇ ಉಳಿದಿದೆ ಎಂದು ಹೇಳಿದರು. ನಟ ಪ್ರಕಾಶ್‌ ಬೆಳವಾಡಿ, ಲೇಖಕ ಹಾಗೂ ಸಂಶೋಧಕ ಅನಿರಾನ್‌ ಗಂಗೂಲಿ, ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next