ಮುಂಬೈ: ಭಾರತದ ಆಗರ್ಭ ಶ್ರೀಮಂತ ಉದ್ಯಮಿ, ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ತನ್ನ ಆಪ್ತ, ಕಂಪನಿಯ ಉದ್ಯೋಗಿಯೊಬ್ಬರಿಗೆ ಮುಂಬೈಯಲ್ಲಿ ಬರೋಬ್ಬರಿ 1,500 ಕೋಟಿ ರೂಪಾಯಿ ಮೌಲ್ಯದ ಬೃಹತ್ ಬಂಗಲೆಯನ್ನು ಉಡುಗೊರೆಯಾಗಿ ನೀಡಿರುವುದಾಗಿ ಡಿಎನ್ ಎ ವರದಿ ಮಾಡಿದೆ.
ಇದನ್ನೂ ಓದಿ:ಗೇಮ್ ಆಡುತ್ತಿರುವಾಗ ಮೊಬೈಲ್ ಸ್ಫೋಟಗೊಂಡು 8 ವರ್ಷದ ಬಾಲಕಿ ಮೃತ್ಯು
ಮುಕೇಶ್ ಅಂಬಾನಿಯವರ ಬಲಗೈ ಬಂಟ ಎಂದೇ ಜನಪ್ರಿಯರಾಗಿರುವ ಮನೋಜ್ ಮೋದಿಗೆ ಮುಂಬೈನ ನೇಪಿಯನ್ ಸೀ ರೋಡ್ ಸಮೀಪದಲ್ಲಿರುವ ಬಂಗಲೆಯನ್ನು ಉಡುಗೊರೆಯಾಗಿ ನೀಡಲಾಗಿದೆ.
ಮ್ಯಾಜಿಕ್ ಬ್ರಿಕ್ಸ್ ಡಾಟ್ ಕಾಮ್ ವರದಿ ಪ್ರಕಾರ, 1.7 ಲಕ್ಷ ಚದರ ಅಡಿಯಷ್ಟು ವಿಸ್ತಾರದ ಪ್ರದೇಶದಲ್ಲಿ 22 ಅಂತಸ್ತುಗಳ ಬಹುಮಹಡಿ ಕಟ್ಟಡವನ್ನು ಮನೋಜ್ ಮೋದಿಯವರಿಗೆ ನೀಡಲಾಗಿದ್ದು, ಇದು 1,500 ಕೋಟಿ ರೂಪಾಯಿ ಮೌಲ್ಯದ ಆಸ್ತಿಯಾಗಿದೆ ಎಂದು ತಿಳಿಸಿದೆ.
ಮುಕೇಶ್ ಅಂಬಾನಿ ಉಡುಗೊರೆಯಾಗಿ ನೀಡಿರುವ ಈ ಬಂಗಲೆಯನ್ನು ತಲಾತಿ ಮತ್ತು ಎಲ್ ಎಲ್ ಪಿ ಪಾರ್ಟನರ್ಸ್ ವಿನ್ಯಾಸಗೊಳಿಸಿದ್ದು, ಕೆಲವೊಂದು ಪೀಠೋಪಕರಣಗಳನ್ನು ಇಟಲಿಯಿಂದ ಖರೀದಿಸಲಾಗಿದೆ ಎಂದು ಡಿಎನ್ ಎ ವರದಿ ವಿವರಿಸಿದೆ.
ಯಾರಿವರು ಮನೋಜ್ Modi :
ಮನೋಜ್ ಮೋದಿ ಅವರು ಮುಕೇಶ್ ಅಂಬಾನಿಯ ಬ್ಯಾಚ್ ಮೇಟ್. ಇವರಿಬ್ಬರು ಕಾಲೇಜು ವಿದ್ಯಾಭ್ಯಾಸ ಹಾಗೂ ಮುಂಬೈ ಯೂನಿರ್ವಸಿಟಿಯ ಕೆಮಿಕಲ್ ಟೆಕ್ನಾಲಜಿ ಪದವಿಯಿಂದ ಈವರೆಗೂ ಆತ್ಮೀಯ ಗೆಳೆಯರಾಗಿದ್ದಾರೆ. ಮುಕೇಶ್ ಅಂಬಾನಿಯ ತಂದೆ ಧೀರೂಭಾಯಿ ಅಂಬಾನಿ ರಿಲಯನ್ಸ್ ಕಂಪನಿಯನ್ನು ಮುನ್ನಡೆಸುತ್ತಿದ್ದ (1980) ಸಂದರ್ಭದಲ್ಲಿ ಮನೋಜ್ ಮೋದಿ ಕಂಪನಿಗೆ ಸೇರ್ಪಡೆಗೊಂಡಿದ್ದರು. ಆ ಬಳಿಕ ಮುಕೇಶ್ ಮತ್ತು ನೀತಾ ಅಂಬಾನಿ ಜೊತೆ ದಶಕಗಳಿಂದಲೂ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಸ್ತುತ ಮನೋಜ್ ಮೋದಿ ಅವರು ಆಕಾಶ್ ಅಂಬಾನಿ ಮತ್ತು ಇಶಾ ಅಂಬಾನಿಯ ಜೊತೆ ಕಾರ್ಯನಿರ್ವಹಿಸುತ್ತಿದ್ದಾರೆ. ರಿಲಯನ್ಸ್ ಕಂಪನಿಯ ಬಹುಕೋಟಿ ರೂಪಾಯಿ ಒಪ್ಪಂದಗಳ ಹಿಂದಿನ ರೂವಾರಿ ಈ ಮನೋಜ್ ಮೋದಿ. ಪ್ರಸ್ತುತ ಮೋದಿ ರಿಲಯನ್ಸ್ ರಿಟೈಲ್ ಮತ್ತು ರಿಲಯನ್ಸ್ ಜಿಯೋದ ನಿರ್ದೇಶಕರಾಗಿದ್ದಾರೆ.