ಹೊಸದಿಲ್ಲಿ: ಭಾರತದ ಆಗರ್ಭ ಶ್ರೀಮಂತ ಮುಕೇಶ್ ಅಂಬಾನಿ ಕಳೆದ ವರ್ಷ ಪ್ರತಿದಿನ ಸರಾಸರಿ 187.9 ಕೋಟಿ ರೂ. ಗಳಿಸಿದರೆ, ಅವರ ಸಹೋದರ ಅನಿಲ್ ಅಂಬಾನಿ ಇದೇ ಅವಧಿಯಲ್ಲಿ ಪ್ರತಿದಿನ 14 ಕೋಟಿ ರೂ. ಕಳೆದುಕೊಂಡಿದ್ದಾರೆ! ಅಮೆರಿಕದ ಪ್ರತಿಷ್ಠಿತ ನಿಯತಕಾಲಿಕೆ ಫೋರ್ಬ್ಸ್ 2018ರ ಭಾರತದ ಅತಿ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 11ನೇ ಬಾರಿಗೆ ಈ ಪಟ್ಟಿಯಲ್ಲಿ ಮುಕೇಶ್ ಮೊದಲನೇ ಸ್ಥಾನ ಪಡೆದಿದ್ದಾರೆ. ಇವರ ಒಟ್ಟು ಆಸ್ತಿ ಮೌಲ್ಯ 3,48,934.47 ಕೋಟಿ ರೂ. ಆಗಿದ್ದು, ಒಂದು ವರ್ಷದಲ್ಲಿ ಅವರ ಒಟ್ಟು ಆಸ್ತಿ ಮೌಲ್ಯದಲ್ಲಿ 67,890 ಕೋಟಿ ರೂ. ಹೆಚ್ಚಳವಾಗಿದೆ.
ಮುಕೇಶ್ ಅವರ ಸಹೋದರ ಅನಿಲ್ ಅಂಬಾನಿ ವರ್ಷದಿಂದ ವರ್ಷಕ್ಕೆ ನಷ್ಟ ಅನುಭವಿಸುತ್ತಿದ್ದಾರೆ. ಕಳೆದ ವರ್ಷ ಅನಿಲ್ ಅಂಬಾನಿಯವರ ಒಟ್ಟು ಆಸ್ತಿ ಮೌಲ್ಯ ಕೇವಲ 17,800 ಕೋಟಿ ರೂ. ಆಗಿದೆ. ಅದರ ಹಿಂದಿನ ವರ್ಷ ಇವರ ಸ್ವತ್ತಿನ ಮೌಲ್ಯ 23,000 ಕೋಟಿ ರೂ. ಆಗಿತ್ತು.
ಕಳೆದ ವರ್ಷ ಫೋರ್ಬ್ಸ್ ಪಟ್ಟಿಯಲ್ಲಿ ಅನಿಲ್ 45ನೇ ಸ್ಥಾನದಲ್ಲಿದ್ದರು. ಆದರೆ ಈ ವರ್ಷ ಅನಿಲ್ 68ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇನ್ನೂ ಅಚ್ಚರಿಯ ಸಂಗತಿಯೆಂದರೆ, 2007ರಲ್ಲಿ ಫೋರ್ಬ್ಸ್ ಶ್ರೀಮಂತರ ಪಟ್ಟಿ ಪ್ರಕಟಿಸಿದ್ದಾಗ ಅನಿಲ್ ಆಸ್ತಿ ಮೌಲ್ಯ 1 ಲಕ್ಷ ಕೋಟಿ ರೂ. ಇತ್ತು. ಆದರೆ ಈಗ ಅದರ ಶೇ.10ರಷ್ಟಕ್ಕೆ ಕುಸಿದಿದ್ದಾರೆ. ಆದರೆ ಮುಕೇಶ್ ಅಂಬಾನಿ ಸ್ವತ್ತಿನ ಮೌಲ್ಯ 1.20 ಲಕ್ಷ ಕೋಟಿ ರೂ. ಆಗಿತ್ತು. ಆದರೆ ಈಗ ಇದು 3.48 ಲಕ್ಷ ಕೋಟಿ ರೂ. ಆಗಿದೆ.
14 ಕೋ.ರೂ. ಅನಿಲ್ ಅಂಬಾನಿ ದಿನಕ್ಕೆ ಕಳೆದುಕೊಂಡದ್ದು
187 ಕೋ. ರೂ. ಮುಕೇಶ್ ಅಂಬಾನಿ ಒಟ್ಟಾರೆ ದಿನದ ಗಳಿಕೆ