Advertisement

ಮೂಕಹಕ್ಕಿಯ ಕತ್ತಲ ಬದುಕು…

12:43 PM Dec 16, 2017 | |

“ಸಾಮಿ ಉಂಡು ಎರಡ್‌ ದಿನ ಆಗದೆ, ಏನಾರ ಭಿಕ್ಸೆ ಎತ್ಕೊಂಡ್‌ ಬರ್ತೀನಿ… ಊರೊಳಿಕ್‌ ಬಿಡಿ…’ – ಹೀಗೆ ಪರಿ ಪರಿಯಾಗಿ ಆ ಅಲೆಮಾರಿ ಮಾರ, ಊರಾಚೆ ನಿಂತು ಬೇಡಿಕೊಳ್ಳುವ ಹೊತ್ತಿಗೆ, ಆ ಅಲೆಮಾರಿಗಳ ಸಂವೇದನೆಯೊಂದು ತೆರೆಯ ಮೇಲೆ ಬುಡ್ಡಿ ದೀಪದಂತೆ ಕಾಣಿಸಿಕೊಳ್ಳುತ್ತೆ. ಒಂದು ಜನಾಂಗದ ಪರಂಪರೆಯನ್ನು ಇಲ್ಲಿ ಕಟ್ಟಿಕೊಟ್ಟಿರುವ ರೀತಿಯನ್ನು ಒಪ್ಪಲೇಬೇಕು. ಎಲ್ಲಕ್ಕಿಂತಲೂ ಮಿಗಿಲಾಗಿ ಬರಡಾಗಿರುವ ಒಂದು ನಿಜ ಬದುಕನ್ನು ಅನಾವರಣಗೊಳಿಸಿರುವ ಪ್ರಯತ್ನ ಸಾರ್ಥಕ.

Advertisement

ಕಾಣದ ಬದುಕಿನ ವೇದನೆಯನ್ನು ನಿರೂಪಿಸಿರುವ ಶೈಲಿ ಅಲ್ಲಲ್ಲಲ್ಲಿ ಇಷ್ಟವಾಗದೇ ಇರದು. ಕಮರ್ಷಿಯಲ್‌ ದೃಷ್ಟಿಯನ್ನು ಪಕ್ಕಕ್ಕಿಟ್ಟು ನೋಡುವುದಾದರೆ, ಇದೊಂದು “ಮೂಕ ರಾಗ’ವಾಗಿ ಇಷ್ಟವಾಗುತ್ತೆ. ಅಲೆಮಾರಿ ಜನಾಂಗದ ಬದುಕು, ಬವಣೆ, ನೋವು, ನಲಿವಿನ ಮಿಶ್ರಣದಲ್ಲಿ ಸಿಹಿಗಿಂತ ಕಹಿಯೇ ಮೇಳೈಸಿದೆ. ಒಂದು ಸಿನಿಮಾಗೆ ಮುಖ್ಯವಾಗಿ ಬೇಕಿರುವುದು ಕಥೆ. ಅದು ಇಲ್ಲಿದೆ. ಆದರೆ, ಅದಕ್ಕೊಂದು ಚಂದದ ನಿರೂಪಣೆಯೇ ಚಿತ್ರದ ಜೀವಾಳ.

ಅದರ ಕೊರತೆ ಇಲ್ಲಿ ತುಸು ಎದ್ದು ಕಾಣುತ್ತೆ. ಆದರೆ, ಛಾಯಾಗ್ರಹಣ ಮತ್ತು ಕಲಾನಿರ್ದೇಶನ ಸಿನಿಮಾವನ್ನು ಜೀವಂತವಾಗಿರಿಸಿದೆ ಅನ್ನೋದು ಖುಷಿ ವಿಷಯ. ಇಂತಹ ಕಥೆಗಳಿಗೆ ತಕ್ಕಂತಹ ತಾಣಗಳೂ ಮುಖ್ಯ. ಅದನ್ನು ಚಾಚೂ ತಪ್ಪದೆ ನಿರ್ವಹಿಸಿರುವುದರಿಂದಲೇ, “ಮೂಕ ಹಕ್ಕಿ’ಯ ರೆಕ್ಕೆ ಕೊಂಚ ಬಿಚ್ಚಿಕೊಳ್ಳುತ್ತಾ ಹೋಗುತ್ತೆ. ಒಂದು ಜನಾಂಗದ ಬದುಕಿನ ನೋವನ್ನು ತೆರೆಯ ಮೇಲೆ ಇನ್ನಷ್ಟು ಪರಿಣಾಮಕಾರಿಯಾಗಿ ತೋರಿಸಲು ಸಾಧ್ಯವಿತ್ತು.

ಎಲ್ಲೋ ಒಂದು ಕಡೆ ಚಿತ್ರ ಮಂದಗತಿ ಎನಿಸುತ್ತೆ ಅಂದುಕೊಳ್ಳುವಾಗಲೇ, “ಚುಕ್ಕಿ ಚಂದ್ರರ ತಬ್ಬಿ ಹಿಡಿದೈತೆ ಬಿಳಿ ಮೋಡ’ ಎಂಬ ಹಾಡು ತಲೆದೂಗುವಂತೆ ಮಾಡುತ್ತೆ. ಈ ಚಿತ್ರವನ್ನು ಕಲಾತ್ಮಕ ವರ್ಗೀಕರಣಕ್ಕೆ ಸೇರಿಸಿದರೂ, ಈಗಿನ ವ್ಯವಸ್ಥೆ ಮತ್ತು ವಾಸ್ತವತೆಗೆ ಹಿಡಿದ ಕೈಗನ್ನಡಿಯಾಗುತ್ತೆ. ಅದಕ್ಕೆ ಕಾರಣ, ಚಿತ್ರದೊಳಗೆ ಆಗಾಗ ಇಣುಕಿ ನೋಡುವ ಜನಪದನೀಯ ಅಂಶಗಳು.

ಅಷ್ಟೇ ಅಲ್ಲ, ಸಿನಿಮಾದುದ್ದಕ್ಕೂ ಕಾಡುವ ಗುಣಗಳೇ ತುಂಬಿರುವುದರಿಂದ, “ಮೂಕಹಕ್ಕಿ’ ಒಂದು ಗ್ರಾಮೀಣ ಬದುಕಿನ ನೈಜತೆ, ಮಾನವೀಯತೆ ಮತ್ತು ಅಲೆಮಾರಿಗಳ ನೋವಿನ ಕಥೆ-ವ್ಯಥೆಯನ್ನು ತೆರೆದಿಡುತ್ತದೆ. ಧ್ವನಿ ಕಳಕೊಂಡವರ ಕಥೆಯನ್ನು ದೃಶ್ಯರೂಪಕವಾಗಿಸುವುದು ಸುಲಭವಲ್ಲ. ಅದನ್ನಿಲ್ಲಿ ಸಾಧ್ಯವಾಗಿಸಿರುವುದಕ್ಕೆ ಮತ್ತೂಂದು ಬಲವಾದ ಕಾರಣ ಅನ್ನುವುದಾದರೆ, ತೆರೆಯ ಮೇಲೆ ಅಲೆಮಾರಿ ಪಾತ್ರಗಳಾಗಿ ಜೀವಿಸಿರುವ ಕಲಾವಿದರು.

Advertisement

ಆಯಾ ಪಾತ್ರಗಳಿಗೆ ತಕ್ಕ ಪ್ರತಿಭೆಗಳು ಸಿಕ್ಕಿರುವುದರಿಂದಲೇ “ಮೂಕ ಹಕ್ಕಿ’ ಆಪ್ತವೆನಿಸುತ್ತಾ ಹೋಗುತ್ತೆ. ಈ ಆಪ್ತತೆಗೆ ಮತ್ತೂಂದು ಕಾರಣ, ಗ್ರಾಮೀಣ ಭಾಷೆ ಮತ್ತು ಸಂಭಾಷಣೆ. ಅವುಗಳು ಚಿತ್ರವನ್ನು ಪರಿಪೂರ್ಣಗೊಳಿಸಿವೆ ಎನ್ನಬಹುದು. ಕೆಲವೆಡೆ, ಇದೊಂದು ಅಲೆಮಾರಿ ಜನಾಂಗದವರ ಸಾಕ್ಷ್ಯಚಿತ್ರವಾ ಅನ್ನುವಂತೆ ಅನುಮಾನ ಮೂಡಿಸುತ್ತದೆಯಾದರೂ, ಹಿನ್ನೆಲೆ ಸಂಗೀತ ಹಾಗೂ ಛಾಯಾಗ್ರಹಣದ ಕತ್ತಲು ಬೆಳಕಿನಾಟ ಅವೆಲ್ಲವನ್ನೂ ಮರೆಸುತ್ತದೆ.

ಇಲ್ಲಿ ಕೋಲೆಬಸವ ಆಡಿಸೋರು ಕಾಣುತ್ತಾರೆ, ಸುಡುಗಾಡು ಸಿದ್ಧರು ಸಿಗುತ್ತಾರೆ, ಸೌಹಾರ್ದ ಸಾರುವ ಸಾಬಣ್ಣ ಬಂದು ಹೋಗುತ್ತಾನೆ, ಮಾನವೀಯತೆ ಸಾರುವ ಊರ ಗೌಡ ಬರುತ್ತಾನೆ, ಹದ್ದಿನಂತೆ ಎರಗೋ ವ್ಯಕ್ತಿತ್ವಗಳು ಅಡ್ಡಾಡುತ್ತವೆ. ಇವೆಲ್ಲದರ ನಡುವೆ, ಆಸೆ, ಅಸೂಯೆ, ಮೋಸ, ಹಸಿವು, ದಾರಿದ್ರ, ಸಮಾಜದೊಳಗಿನ ವ್ಯವಸ್ಥೆ ಇತ್ಯಾದಿಯ ದರ್ಶನವಾಗುತ್ತೆ. ಇವೆಲ್ಲದರ ಪಾಕ ಸಿಹಿಯೋ, ಕಹಿಯೋ ಅನ್ನುವುದಕ್ಕಾದರೂ “ಮೂಕ ಹಕ್ಕಿ’ಯ ವೇದನೆ ಕೇಳಲು ಹೋಗಲ್ಲಡ್ಡಿಯಿಲ್ಲ.

ಮಾರ ತನ್ನ ಮೂಕ ತಂಗಿ ಗೌರಿ ಮತ್ತು ತಮ್ಮ ದುಗ್ಯಾ ಜತೆಗೆ ಕೋಲೆಬಸವನೊಂದಿಗೆ ಊರೂರು ಅಲೆದಾಡಿ ಬದುಕು ಕಟ್ಟಿಕೊಳ್ಳಲು ಹೆಣಗಾಡುವ ಅಸಹಾಯಕ. ಒಪ್ಪೊತ್ತಿನ ಗಂಜಿಗೂ ಬಡಿದಾಡುವ ಮಾರ, ಒಂದು ಕಡೆ ನೆಲೆ ನಿಲ್ಲದೆ ಊರಿಂದೂರಿಗೆ ಅಲೆದಲೆದು ಹಸಿವು ನೀಗಿಸಿಕೊಳ್ಳಲು ಹರಸಾಹಸ ಪಡುವ ಬಡಜೀವ. ತಂಗಿಗೊಂದು ಮದುವೆ ಮಾಡಿಸಬೇಕು, ತಮ್ಮನಿಗೊಂದು ಶಿಕ್ಷಣ ಕೊಡಿಸಬೇಕೆಂಬ ತನ್ನೊಳಗಿನ ಆಸೆಗೆ ಮಿತಿಯಿಲ್ಲ.

ದಿಕ್ಕಿಲ್ಲದ ಮಾರ ದಿಕ್ಕು ಹುಡುಕಿ ಹೋಗುತ್ತಾನೆ. ಹೋಗುವ ದಾರೀಲಿ ನೂರಾರು ಮುಳ್ಳು. ದಾಟಿ ಸಾಗಿದರೂ ಅಲ್ಲಲ್ಲಿ ಕಲ್ಲು. ಅಲ್ಲಿ ಎದುರಾಗುವ ಸಮಸ್ಯೆಗಳಿಂದ ಅವನು ಹೊರಬರುತ್ತಾನಾ ಇಲ್ಲವಾ ಅನ್ನೋದು ಕಥೆ. ಪೂಜಾ ಅಭಿನಯದ “ತಿಥಿ’ ನೋಡಿದವರಿಗೆ ಆ ಪಾತ್ರದ ಮುಂದುವರೆದ ಭಾಗ ಅಂತಂದುಕೊಂಡರೆ ಅದು ತಪ್ಪು. ಇಲ್ಲಿ ಪೂಜಾ ಮೂಕ ಗೌರಿಯಾಗಿ ಇಷ್ಟವಾಗುತ್ತಾಳೆ.

ಆ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ ಪೂಜಾ. ಸಂಪತ್‌ಕುಮಾರ್‌ ಸಿಕ್ಕ ಪಾತ್ರದಲ್ಲಿ ಜೀವಿಸಿದ್ದಾರೆ. ಭಾಷೆ, ಬಾಡಿ ಲಾಂಗ್ವೇಜ್‌ ಎಲ್ಲವೂ ಪಾತ್ರವನ್ನು ಸರಿದೂಗಿಸಿದೆ. ಮಾಸ್ಟರ್‌ ನಿಶಾಂತ್‌ ರಾಥೋಡ್‌ ಕೂಡಾ ದುಗ್ಯಾ ಪಾತ್ರಕ್ಕೆ ಮೋಸ ಮಾಡಿಲ್ಲ. ಅನಿಲ್‌ ಕಾಳಿಂಗನಾಗಿ ಅಬ್ಬರಿಸಿದರೆ, ಸತೀಶ್‌ ಕುಮಾರ್‌ ಚದುರಂಗದ ಹುಡುಗನಾಗಿ ಗಮನಸೆಳೆಯುತ್ತಾರೆ. ಬರುವ ಪಾತ್ರಗಳೆಲ್ಲವೂ ನೈಜತೆ ಬಿಟ್ಟು ಹೋಗಿಲ್ಲ.

ಇಲ್ಲಿ ಮತ್ತೂಂದು ಕಾಡುವ ಅಂಶವೆಂದರೆ, ಅದು ಮಣಿಕಾಂತ್‌ ಕದ್ರಿ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ. ಇಲ್ಲಿ ಕೋಟಿಗಾನಹಳ್ಳಿ ರಾಮಯ್ಯ ಅವರ ಗ್ರಾಮೀಣ ಭಾಷೆಯೂ ಚಿತ್ರದ ವೇಗಕ್ಕೊಂದು ಕಾರಣವಾಗಿದೆ. ಶ್ರೀಧರ್‌ ಮೂರ್ತಿ ಅವರ ಕಲಾನಿರ್ದೇಶನವೂ ಚಿತ್ರಕ್ಕೆ ಪೂರಕವಾಗಿದೆ. ಚಿದಾನಂದ್‌ ಕ್ಯಾಮೆರಾದಲ್ಲಿ “ಮೂಕ ಹಕ್ಕಿ’ಯ ಸ್ವತ್ಛಂದದಿ ವಿಹರಿಸಿದೆ.

ಚಿತ್ರ: ಮೂಕಹಕ್ಕಿ
ನಿರ್ಮಾಣ: ಚಂದ್ರಕಲಾ
ನಿರ್ದೇಶನ: ನೀನಾಸಂ ಮಂಜು
ತಾರಾಗಣ: ಪೂಜಾ, ಸಂಪತ್‌ ಕುಮಾರ್‌, ಸತೀಶ್‌ ಕುಮಾರ್‌, ಅನಿಲ್‌ ಕುಮಾರ್‌, ಮಾ.ನಿಶಾಂತ್‌ ರಾಥೋಡ್‌ ಇತರರು. 

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next