Advertisement

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

04:33 PM Apr 29, 2024 | Team Udayavani |

ನಿರ್ದೇಶಕ ಹಾಗೂ ನಿರ್ಮಾಪಕ ಕೆಲವು ದಿನಗಳ ಹಿಂದೆ ಆರ್‌. ಸಿ ಸ್ಟುಡಿಯೋಸ್‌ ಎಂಬ ನಿರ್ಮಾಣ ಸಂಸ್ಥೆ ಆರಂಭಿಸುವುದರ ಮೂಲಕ ಐದು ಸಿನಿಮಾಗಳನ್ನು ನಿರ್ಮಾಣ ಮಾಡುವುದಾಗಿ ಹೇಳಿದ್ದರು. ಆ ಪೈಕಿ ಮೊದಲ ಚಿತ್ರವಾಗಿ ಡಾರ್ಲಿಂಗ್‌ ಕೃಷ್ಣ ನಾಯಕರಾಗಿ ನಟಿಸುತ್ತಿರುವ “ಫಾದರ್‌’ ಚಿತ್ರ ನಿರ್ಮಾಣವಾಗುತ್ತಿದೆ.

Advertisement

ಇತ್ತೀಚಿಗೆ ಈ ಚಿತ್ರದ ಮುಹೂರ್ತ ಸಮಾರಂಭ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಅದ್ಧೂರಿಯಾಗಿ ನೆರವೇರಿತು. ಶಿವರಾಜಕುಮಾರ್‌ ಹಾಗೂ ಗೀತಾ ಶಿವರಾಜಕುಮಾರ್‌ ಅವರು ಆರಂಭ ಫ‌ಲಕ ತೋರುವುದರ ಮೂಲಕ ಫಾದರ್‌ ಚಿತ್ರದ ಮೊದಲ ಸನ್ನಿವೇಶಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶಿವಣ್ಣ, “ಆರ್‌. ಚಂದ್ರು ನನ್ನ ಆತ್ಮೀಯರು. ಸಿನಿಮಾವನ್ನು ಹೆಚ್ಚಾಗಿ ಪ್ರೀತಿಸುತ್ತಾರೆ. ಆರ್‌ ಸಿ ಸ್ಟುಡಿಯೋಸ್‌ ಮೂಲಕ ಮೊದಲ ಚಿತ್ರವಾಗಿ ಫಾದರ್‌ ಚಿತ್ರ ಆರಂಭಿಸಿದ್ದಾರೆ. ಚಂದ್ರು ಅವರಿಗೆ ಹಾಗೂ ಇಡೀ ಚಿತ್ರತಂಡಕ್ಕೆ ಶುಭವಾಗಲಿ’ ಎಂದರು.

“ನನ್ನ ಚಾರ್‌ ಮಿನಾರ್‌ ಚಿತ್ರ ಆರಂಭವಾದಗಿನಿಂದ ಹಿಡಿದು ಈವರೆಗೂ ನನಗೆ ಶಿವಣ್ಣ ಹಾಗೂ ಗೀತಾ ಶಿವರಾಜಕುಮಾರ್‌ ಅವರು ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಕೆಲವು ದಿನಗಳ ಮುಂಚೆ ನಮ್ಮ ಆರ್‌ ಸಿ ಸ್ಟುಡಿಯೋಸ್‌ ಸಂಸ್ಥೆಯನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದರು. ಈ ಸಂಸ್ಥೆಯಿಂದ ಒಂದು ವರ್ಷದಲ್ಲಿ ಐದು ಸಿನಿಮಾಗಳನ್ನು ನಿರ್ಮಿಸುವುದಾಗಿ ಹೇಳಿದ್ದೆ. ಅದರ ಮೊದಲ ಹೆಜ್ಜೆಯಾಗಿ ಇಂದು ಫಾದರ್‌ ಚಿತ್ರ ಆರಂಭವಾಗಿದೆ. ಶಿವಣ್ಣ ಅವರ ಭೈರಾಗಿ ಚಿತ್ರಕ್ಕೆ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ರಾಜ್‌ ಮೋಹನ್‌ ಈ ಚಿತ್ರದ ನಿರ್ದೇಶಕರು. ಡಾರ್ಲಿಂಗ್‌ ಕೃಷ್ಣ ನಾಯಕರಾಗಿ, ಅಮೃತ ಅಯ್ಯಂಗಾರ್‌ ನಾಯಕಿಯಾಗಿ ನಟಿಸುತ್ತಿದ್ದಾರೆ. ಪ್ರಕಾಶ್‌ ರೈ, ಸುನೀಲ್‌ ಮುಂತಾದವರು ತಾರಾಬಳಗದಲ್ಲಿದ್ದಾರೆ. ಮುಂಬೈನ ಆನಂದ್‌ ಪಂಡಿತ್‌ ಅವರು ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ಹನುಮಾನ್‌ ಚಿತ್ರದ ಖ್ಯಾತಿಯ ಹರಿ ಸಂಗೀತ ನೀಡುತ್ತಿದ್ದಾರೆ’ ಎನ್ನುವುದು ನಿರ್ಮಾಪಕ ಆರ್‌.ಚಂದ್ರು ಮಾತು.

ನಿರ್ದೇಶಕ ರಾಜ್‌ ಮೋಹನ್‌ ಮಾತನಾಡಿ, “ಇದೊಂದು ತಂದೆ – ಮಗನ ಬಾಂಧವ್ಯದ ಚಿತ್ರ. ಕಥೆ ತುಂಬಾ ಚೆನ್ನಾಗಿದೆ. ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳು ಫಾದರ್‌ ಚಿತ್ರದಲ್ಲಿದೆ’ ಎಂದರು.

Advertisement

“ನಿರ್ದೇಶಕರು ಹೇಳಿದ ಕಥೆ ಮನಸ್ಸಿಗೆ ಹತ್ತಿರವಾಯಿತು. ಆರ್‌ ಚಂದ್ರು ಅವರ ಜೊತೆಗೆ ಇದು ನನ್ನ ಮೊದಲ ಚಿತ್ರ’ ಎಂದು ನಾಯಕ ಡಾರ್ಲಿಂಗ್‌ ಕೃಷ್ಣ ತಿಳಿಸಿದರು. ಕಥೆ ಹಾಗೂ ನನ್ನ ಪಾತ್ರ ಎರಡು ತುಂಬಾ ಚೆನ್ನಾಗಿದೆ ಎಂದರು ನಾಯಕಿ ಅಮೃತ ಅಯ್ಯಂಗಾರ್‌.

Advertisement

Udayavani is now on Telegram. Click here to join our channel and stay updated with the latest news.

Next