ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ “ಮೇರನಾಮ್ ಪೂರಿಭಾಯ್’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನೆರವೇರಿತು. ಈ ಹಿಂದೆ ಮೂರು ಸಿನಿಮಾಗಳನ್ನು ನಿರ್ಮಿಸಿ, ನಿರ್ದೇಶಿಸಿದ ಅನುಭವವಿರುವ ತುಮಕೂರಿನ ಪಿ. ಚಿರಂಜೀವ ನಾಯ್ಕ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ.
ಮುಹೂರ್ತದ ಬಳಿಕ ‘ಮೇರನಾಮ್ ಪೂರಿಭಾಯ್’ ಚಿತ್ರದ ಬಗ್ಗೆ ಮಾತಿಗಿಳಿದ ಚಿತ್ರತಂಡ, “ಕನ್ನಡ, ತೆಲುಗು ಮತ್ತು ಹಿಂದಿಯಲ್ಲಿ ಈ ಸಿನಿಮಾ ತೆರೆಗೆ ಬರುತ್ತಿರುವ ಕಾರಣ ಎಲ್ಲಾ ಭಾಷೆಗಳಿಗೂ ಹೊಂದಿಕೆಯಾಗುತ್ತದೆ ಎಂಬ ಕಾರಣಕ್ಕೆ ಸಿನಿಮಾಕ್ಕೆ “ಮೇರ ನಾಮ್ ಪೂರಿಭಾಯ್’ ಎಂದು ಟೈಟಲ್ ಇಡಲಾಗಿದೆ. ಸಿನಿಮಾದ ಕಥೆ ಮುಂಬೈನಲ್ಲಿ ಆರಂಭವಾಗಿ ಬೆಂಗಳೂರಿಗೆ ಬಂದು ನಿಲ್ಲುತ್ತದೆ. ಬೇರೆ ಸಿನಿಮಾಗಳಲ್ಲಿ ಇಲ್ಲಿಂದ ಮುಂಬೈಗೆ ಹೋಗಿ ಡಾನ್ ಆಗುತ್ತಾರೆ. ಆದರೆ ಈ ಸಿನಿಮಾದಲ್ಲಿ ಮುಂಬೈನಿಂದ ಬಂದ ಹುಡುಗನೊಬ್ಬ ಕರ್ನಾಟಕದಲ್ಲಿ ರೌಡಿಯಾಗುತ್ತಾನೆ ಎನ್ನುವುದೇ ವಿಶೇಷ. ಮುಗ್ಧನಾಗಿದ್ದ ಹುಡುಗನೊಬ್ಬ ಇಲ್ಲಿಗೆ ಬಂದ ಮೇಲೆ ಪರಿಸ್ಥಿತಿಗೆ ತಕ್ಕಂತೆ ರಗಡ್ ಆಗುತ್ತಾನೆ. ಬೆಂಗಳೂರಿಗೆ ಬಂದು ಏನು ಮಾಡ್ತಾನೆ, ಹೇಗೆ ಬದಲಾವಣೆಯಾಗ್ತಾನೆ ಅನ್ನೋದೆ ಸಿನಿಮಾದ ಕಥೆ’ ಎಂದು ಚಿತ್ರದ ಕಥಾಹಂದರದ ಬಗ್ಗೆ ವಿವರಣೆ ನೀಡಿತು.
ಇದನ್ನೂ ಓದಿ:ಚಾರ್ಲಿ ಚಾನ್ಸ್ ಸಿಕ್ಕಿದ್ದು ಮಿಸ್ ಇಂಡಿಯಾ ಗೆದ್ದಂಗಿತ್ತು!: ಸಂಗೀತಾ ಶೃಂಗೇರಿ
ಲವ್ ಕಂ ಆ್ಯಕ್ಷನ್-ಕ್ರೈಂ ಕಥಾಹಂದರ ಹೊಂದಿರುವ “ಮೇರನಾಮ್ ಪೂರಿಭಾಯ್’ ಸಿನಿಮಾವನ್ನು ಔಟ್ ಆ್ಯಂಡ್ ಔಟ್ ಮಾಸ್ ಕಮರ್ಷಿಯಲ್ ಶೈಲಿಯಲ್ಲಿ ತೆರೆಮೇಲೆ ತರಲಾಗುತ್ತಿದ್ದು, ಮಡಕೇರಿ, ಚಿಕ್ಕಮಗಳೂರು, ಹೆಚ್. ಡಿ ಕೋಟೆ, ಹಿಮಾಲಯದಲ್ಲಿ ಎರಡು ಹಂತದಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.
ಈ ಹಿಂದೆ “ಐ1′ ಸಿನಿಮಾದಲ್ಲಿ ಕಾಣಿಸಿ ಕೊಂಡಿದ್ದ ಕಿಶೋರ್ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಬೆಳಗಾವಿ ಮೂಲದ ವಿದ್ಯಾನಾಗಪ್ಪ ಪಾಟೀಲ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು ಉಳಿದಂತೆ ಹಿರಿಯ ನಟ ಎಂ. ಎಸ್ ಉಮೇಶ್, ರಮೇಶ್ ಪಂಡಿತ್, ಪವಿತ್ರಾ ಲೋಕೇಶ್, ರಮೇಶ್ ಭಟ್ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದ ಆರು ಹಾಡುಗಳಿಗೆ ಎ. ಟಿ ರವೀಶ್ ಸಂಗೀತ ಸಂಯೋಜಿಸುತ್ತಿದ್ದು, ವಿಜಯ ಪ್ರಕಾಶ್, ರಾಜೇಶ್ ಕೃಷ್ಣನ್ ಮೊದಲಾದವರು ಚಿತ್ರದ ಹಾಡುಗಳಿಗೆ ಧ್ವನಿಯಾಗುತ್ತಿದ್ದಾರೆ.