Advertisement

ಈಜುಕೊಳಕ್ಕೆ ಕೂಡಿ ಬಾರದ ಮುಹೂರ್ತ

06:18 PM Sep 28, 2021 | Team Udayavani |

ಕಲಬುರಗಿ: ಜಿಮ್‌, ಮಾಲ್‌, ಚಲನಚಿತ್ರ ಮಂದಿರ ಹೀಗೆ ಎಲ್ಲವೂ ಪ್ರಾರಂಭವಾಗಿದೆ. ಎಲ್ಲ ವಾಣಿಜ್ಯ ಚಟುವಟಿಕೆಗಳು ಪ್ರಾರಂಭವಾಗಿವೆ. ಆದರೆ ಜಿಲ್ಲಾ ಯುವಜನ ಸೇವಾ ಕ್ರೀಡಾ ಇಲಾಖೆಯ ನಗರದ ಏಕೈಕ ಈಜುಕೊಳ ಮಾತ್ರ ಪ್ರಾರಂಭವಾಗುತ್ತಿಲ್ಲ. ಕೋವಿಡ್‌-19 ಪ್ರಥಮ ಅಲೆ ಸಂದರ್ಭದಲ್ಲಿ ಅಂದರೆ 2020ರ ಮಾರ್ಚ್‌ ತಿಂಗಳಲ್ಲಿ ಬಂದಾಗಿರುವ ಇಲ್ಲಿನ ಚಂದ್ರಶೇಖರ ಪಾಟೀಲ್‌ ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಕೊಳ ಮತ್ತೆ ಪ್ರಾರಂಭವಾಗುತ್ತಿಲ್ಲ.

Advertisement

ಒಂದುವರೆ ವರ್ಷದಿಂದ ಈಜುಕೊಳ ಸಂಪೂರ್ಣ ಬಂದಾಗಿದ್ದು, ಈಜು ಪ್ರಿಯರು ಈಜುಕೊಳ ಯಾವಾಗ ಕಾರ್ಯಾರಂಭವಾಗುತ್ತದೆ ಎಂಬುದನ್ನು ಬಕಪ್ಷಕಿಯಂತೆ ಕಾಯುತ್ತಿದ್ದಾರೆ. ಈಜುಕೋಳದಲ್ಲಿ ನೀರು ಭರ್ತಿ ಮಾಡಲಾಗಿದೆ. ಈಜುಕೊಳ ಬಳಕೆಯಾಗದೇ ಇರುವುದರಿಂದ ನೀರು ಕಶ್ಮಲವಾಗುವ ಸಾಧ್ಯತೆಗಳೇ ಹೆಚ್ಚು. ಕೋವಿಡ್‌ ಮೊದಲ ಅಲೆ ಕಡಿಮೆಯಾದ ನಂತರ ಎಲ್ಲ ವಾಣಿಜ್ಯ ಚಟುವಟಿಕೆಗಳು ಹಾಗೂ ಇತರ ಎಲ್ಲ ವಿಧಧ ಮನರಂಜನಾ ಕಾರ್ಯಗಳು ಪುನಾರರಂಭಗೊಂಡಿದ್ದರೂ ಈ ಈಜುಕೊಳ ಮಾತ್ರ ಪ್ರಾರಂಭವಾಗಲೇ ಇಲ್ಲ. ಆದರೆ ಈಗ ಎರಡನೇ ಅಲೆ ನಿಯಂತ್ರಣಗೊಂಡ ಮೇಲಂತು ಎಲ್ಲ ವಹಿವಾಟು ಹಾಗೂ ಮನೋರಂಜನೆಯ ಎಲ್ಲ ಕಾರ್ಯಗಳು ಪುನಾರರಂಭಗೊಂಡಿವೆ.

ಆದರೆ ಪ್ರಾರಂಭವಾಗದಿರುವ ಏಕೈಕ ಯಾವುದಾದರೂ ಇದ್ದರೆ ಈಜುಕೊಳ ಮಾತ್ರವಾಗಿದೆ. ಕಲಬುರಗಿ ಮೊದಲೇ ಬಿಸಿಲು ನಾಡು. ಈಜಾಡುವುದು ತುಂಬಾನೇ ಆಸಕ್ತಿದಾಯಕವಾಗಿದೆ. ಈಜುಕೊಳ ಪ್ರಾರಂಭವಾದರೆ ದಿನಾಲು 250ರಿಂದ 300 ಜನರು ಈಜಾಡುತ್ತಾರೆ. ಒಂದುವರೆ ವರ್ಷದಿಂದ ಈಜುಕೊಳ ಬಂದಾಗಿದ್ದರಿಂದ ಎಲ್ಲವೂ ಅಸ್ತವ್ಯಸ್ಥಗೊಂಡಿದೆ. ಈಜಾಡುವ ಮುಂಚೆ ಹಾಗೂ ನಂತರ ಸ್ನಾನ ಮಾಡುವ ರೂಂಗಳು ಹಾಗೂ ಶೌಚಾಲಯ ವ್ಯವಸ್ಥೆ
ಉಪಯೋಗಕ್ಕೆ ಬಾರದಂತಾಗಿವೆ. ಈಗ ಅವುಗಳನ್ನೆಲ್ಲ ದುರಸ್ತಿಪಡಿಸುವುದು ಅತಿ ಜರೂರಾಗಿದೆ.

ಸಂಕಷ್ಟದಲ್ಲಿ ಈಜು ಸ್ಪರ್ಧಾಗಾರರು: ಕಲಬುರಗಿಯ ಈಜುಕೊಳದಲ್ಲಿ ಅಂತಾರಾಷ್ಟ್ರೀಯ ಈಜುಕೊಳದ ಸ್ಪರ್ಧೆ ನಡೆದಿದೆ. ಅದಲ್ಲದೇ ವರ್ಷ ಇಪ್ಪತ್ತುಕ್ಕೂ ಹೆಚ್ಚು ಸ್ಪರ್ಧಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದ ಈಜು ಸ್ಪರ್ಧಾ ಕೂಟದಲ್ಲಿ ಪಾಲ್ಗೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಆದರೆ ಒಂದುವರೆ ವರ್ಷದಿಂದ ಈಜುಕೋಳ ಬಂದಾಗಿದ್ದರಿಂದ ಈಜು ಸ್ಪರ್ಧೆಗೆ ನೆಲೆ ಇಲ್ಲ ಎನ್ನುವಂತಾಗಿದೆ.

ಸಿಬ್ಬಂದಿಯೂ ಇಲ್ಲ ಸಂಬಳವೂ ಇಲ್ಲ: ಈಜುಕೊಳ ನಿರ್ವಹಣೆಗೆ ತರಬೇತಿದಾರರಿಂದ ಹಿಡಿದು 9 ಜನ ಸಿಬ್ಬಂದಿಯನ್ನು ಹೊರ ಗುತ್ತಿಗೆ ಆಧಾರದ ಮೇಲೆ ಸೇವೆ ಪಡೆಯಲಾಗಿತ್ತು. ಈಜುಕೋಳ ಬಂದಾದ ನಂತರ ಮೊದಲ ಮೂರು ತಿಂಗಳ ಸಂಬಳ ನೀಡಲಾಯಿತು. ನಂತರ ಸಂಬಳ ನೀಡದೇ ಇದ್ದುದ್ದಕ್ಕೆ ಆರು ಜನ ಬಿಟ್ಟು ಹೋಗಿದ್ದಾರೆ. ಈಗೇನಿದ್ದರೂ ಮೂರು ಜನ ಉಳಿದಿದ್ದಾರೆ. ಪ್ರಾದೇಶಿಕ ಆಯುಕ್ತರೇ ಈಜುಕೊಳ ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಇವರಾದರೂ ಆಸಕ್ತಿ ವಹಿಸಿ ಈಜುಕೊಳದ ಅಭಿವೃದ್ಧಿಗೆ ಒತ್ತು ನೀಡಿದ್ದರೆ ಹಾಗೂ ನೌಕರರಿಗೆ ಸಂಬಳ ನೀಡಿದ್ದರೆ ಪರಿಸ್ಥಿತಿ ಹೀಗಾಗುತ್ತಿರಲಿಲ್ಲ ಎನ್ನಲಾಗುತ್ತಿದೆ. ಒಟ್ಟಾರೆ ಈಗಲಾದರೂ ಈಜುಕೊಳ ಪ್ರಾರಂಭವಾಗಿ ಜನರಿಗೆ ಈಜಾಡುವ ಅವಕಾಶ ಕಲ್ಪಿಸಲಿ ಎನ್ನುವುದೇ ಜನಾಶಯವಾಗಿದೆ.

Advertisement

ತರಬೇತಿಗೆ ಮೊದಲು ಅವಕಾಶ
ಈಜುಕೋಳ ಈಗ ಈಜು ತರಬೇತಿಗೆ ಮಾತ್ರ ಅವಕಾಶ ಕಲ್ಪಿಸಿ, ತದನಂತರ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲು ಮುಂದಾಗಲಾಗುತ್ತಿದೆ ಎನ್ನಲಾಗುತ್ತಿದೆ. ಒಟ್ಟಾರೆ ಮೊದಲು ಈಜು ಸ್ಪರ್ಧಾರುಗಾರರಿಗೆ ಅವಕಾಶ ದೊರೆಯಲಿ. ಮುಂದಿನ ತಿಂಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದ ಈಜು ಸ್ಪರ್ಧಾಕೂಟ ನಡೆಯುತ್ತಿದೆ. ಹೀಗಾಗಿ ಈಜುಕೊಳ ಪ್ರಾರಂಭವಾಗಿ ಉತ್ತಮ ತರಬೇತಿ ನಡೆದು ಉತ್ತಮ ಪ್ರದರ್ಶನ ತೋರಲಿ ಎನ್ನುವುದು ತರಬೇತಿದಾರರ ಆಶಯವಾಗಿದೆ.

ಈಜುಕೋಳ ಪ್ರಾರಂಭ ನಿಟ್ಟಿನಲ್ಲಿ ನಿಯಮಾವಳಿ ಬಂದಿದ್ದು, ಎರಡ್ಮೂರು ದಿನದೊಳಗೆ ಸಭೆ ನಡೆಸಿ ನಾಲ್ಕೈದು ದಿನದೊಳಗೆ ಈಜುಕೊಳ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು. ಎಲ್ಲ ಸುಧಾರಣೆಗೈದು ಈಜುಕೊಳ ಪ್ರಾರಂಭಿಸಲಾಗುವುದು.
ಆರ್‌.ಜಿ. ನಾಡಿಗೇರ,
ಸಹಾಯಕ ನಿರ್ದೇಶಕರು,
ಜಿಲ್ಲಾ ಯುವಜನ
ಸೇವಾ ಕ್ರೀಡಾ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next