Advertisement

ಭತ್ತ ಖರೀದಿಗೆ ಕೊನೆಗೂ ಮುಹೂರ್ತ; ನ. 30ರಿಂದ ನೋಂದಣಿ, ಡಿ. 20ರಿಂದ ಖರೀದಿ

11:06 PM Nov 19, 2020 | mahesh |

ಉಡುಪಿ: ಭತ್ತವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಬೇಕೆಂಬ ಬಹು ದಿನಗಳ ಬೇಡಿಕೆ ಈಡೇರುವ ದಿನ ಸಮೀಪಿಸುತ್ತಿದೆ. ಉಡುಪಿ ಜಿಲ್ಲೆಯ ಉಡುಪಿ, ಕುಂದಾಪುರ, ಕಾರ್ಕಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಪ್ರಾಂಗಣಗಳಲ್ಲಿ ಭತ್ತ ಖರೀದಿಯಾಗಲಿದೆ. ಇದನ್ನು ನಿರ್ವಹಿಸಲು ರಾಜ್ಯ ಸರಕಾರ ಕರ್ನಾಟಕ ರಾಜ್ಯ ಆಹಾರ ನಿಗಮಕ್ಕೆ (ಕೆಎಸ್‌ಎಫ್ಸಿ) ವಹಿಸಿಕೊಟ್ಟಿದೆ.

Advertisement

ನ. 30ರಿಂದ ಖರೀದಿ ಕೇಂದ್ರಗಳಲ್ಲಿ ರೈತರ ನೋಂದಣಿಯಾಗಲಿದೆ. ಇದರ ಕುರಿತು ರೈತರಿಗೆ ಜಾಗೃತಿ ಮೂಡಿಸಲು (ಕರಪತ್ರ, ಬ್ಯಾನರ್‌ ಇತ್ಯಾದಿ ಮೂಲಕ) ಸರಕಾರ ಕೆಎಸ್‌ಎಫ್ಸಿಗೆ ಸೂಚಿಸಿದೆ. ಡಿ. 20ರಿಂದ ಖರೀದಿ ಆರಂಭವಾಗಲಿದ್ದು ಮಾ. 20ರ ವರೆಗೆ ನಡೆಯಲಿದೆ. ಕೆಲವು ಜಿಲ್ಲೆಗಳಲ್ಲಿ ಮಾರ್ಕೆಟಿಂಗ್‌ ಫೆಡರೇಶನ್‌ ಭತ್ತ ಖರೀದಿಯ ಏಜೆನ್ಸಿಯಾಗಿದೆ. ಭತ್ತದ ಖರೀದಿಯು ಅಕ್ಕಿ ಮಿಲ್ಲುಗಳ ಮೂಲಕ ನಡೆಯಲಿದೆ. “ಎ’ ಶ್ರೇಣಿಯ ಭತ್ತದ ಕ್ವಿಂಟಾಲ್‌ಗೆ 1,888 ರೂ., ಸಾಮಾನ್ಯ ಭತ್ತದ ಕ್ವಿಂಟಾಲ್‌ಗೆ 1,868 ರೂ.ಗಳಲ್ಲಿ ಖರೀದಿಸಲಾಗುವುದು.

ದ.ಕ.: ನಿರ್ಧಾರವಾಗಿಲ್ಲ
ದ.ಕ. ಜಿಲ್ಲೆಯಲ್ಲಿ ಯಾವ ಎಪಿಎಂಸಿಗಳಲ್ಲಿ ಭತ್ತದ ಖರೀದಿ ಕೇಂದ್ರವನ್ನು ತೆರೆಯಬೇಕೆಂದು ಇನ್ನೂ ನಿರ್ಧಾರವಾಗಿಲ್ಲ. ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಶೀಘ್ರವೇ ಸ್ಥಳ ನಿಗದಿಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಪ್ರಯೋಜನ ಶೂನ್ಯ?
ಈಗಾಗಲೇ ಕರಾವಳಿಯಲ್ಲಿ ಮುಂಗಾರಿನ ಭತ್ತದ ಕೊçಲು ಮುಗಿದಿದ್ದು ಗದ್ದೆಯಿಂದ ನೇರವಾಗಿ ಅಕ್ಕಿ ಮಿಲ್ಲುಗಳಿಗೆ ಮಾರಾಟ ನಡೆಯುತ್ತಿದೆ. ಕ್ವಿಂಟಾಲ್‌ಗೆ 1,600 ರೂ.ಗಳಂತೆ ಈಗಾಗಲೇ ಶೇ. 60ಕ್ಕಿಂತ ಹೆಚ್ಚು ಮಾರಾಟವಾಗಿದೆ. ಕೃಷಿ ಸಚಿವರು ಉಡುಪಿ ಜಿಲ್ಲೆಗೆ ಬಂದಿದ್ದಾಗ ಕರಾವಳಿಯ ಯಾವ ರೈತರೂ ಭತ್ತವನ್ನು ಇಟ್ಟುಕೊಳ್ಳುವುದಿಲ್ಲ. ರಾಜ್ಯದ ಇತರ ಜಿಲ್ಲೆಗಳಂತೆ ಜನವರಿಯಲ್ಲಿ ಭತ್ತ ಖರೀದಿಸಿದರೆ ನಮ್ಮ ರೈತರಿಗೆ ಯಾವ ಪ್ರಯೋಜನ ದೊರಕುವುದಿಲ್ಲ. ನಮ್ಮ ಭಾಗಕ್ಕೆ ಕನಿಷ್ಠ ಅಕ್ಟೋಬರ್‌ನಲ್ಲಿಯಾದರೂ ಭತ್ತದ ಖರೀದಿ ಕೇಂದ್ರವನ್ನು ತೆರೆಯಬೇಕೆಂದು ವಿನಂತಿಸಿದ್ದೆವು. ಆದರೆ ಈ ಬಾರಿಯೂ ಇದು ಕೈಗೂಡಿಲ್ಲ ಎಂದು ಭತ್ತದ ಹಿರಿಯ ಕೃಷಿಕ, ಭಾರತೀಯ ಕಿಸಾನ್‌ ಸಂಘದ ಜಿಲ್ಲಾಧ್ಯಕ್ಷ ನಿಟ್ಟೆ ನವೀನ್‌ಚಂದ್ರ ಜೈನ್‌ ಖೇದ ವ್ಯಕ್ತಪಡಿಸುತ್ತಾರೆ.

ಸರಕಾರದ ಮಾರ್ಗಸೂಚಿಯಂತೆ ಡಿ. 20ರಿಂದ ಭತ್ತವನ್ನು ಬೆಂಬಲ ಬೆಲೆಯಲ್ಲಿ ಖರೀದಿಸುತ್ತೇವೆ. ನ. 30ರಿಂದ ರೈತರ ಹೆಸರು ನೋಂದಣಿ ಮಾಡಲು ಸೂಚನೆ ಬಂದಿದ್ದು ಅಷ್ಟರೊಳಗೆ ನೋಂದಣಿ ಆರಂಭಿಸುತ್ತೇವೆ.
– ಅನುರಾಧಾ, ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಆಹಾರ ನಿಗಮ, ಮಂಗಳೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next