Advertisement
ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ನೀರಾವರಿ ಯೋಜನೆಗಳಿಗೆ ಪ್ರಥಮ ಆದ್ಯತೆ ನೀಡುವುದಾಗಿ ತಿಳಿಸಿದ್ದರು. ಅಂತೆಯೇ, ಮೂಡಿ ಮತ್ತು ಮೂಗೂರು ಏತ ನೀರಾವರಿ ಯೋಜನೆಗಳಿಗೆ ಅನುದಾನವೂ ಬಿಡುಗಡೆಗೊಳಿಸಿ, ಕಳೆದ ವರ್ಷ ಫೆಬ್ರವರಿಯಲ್ಲಿ ಶಂಕುಸ್ಥಾಪನೆ ಸಹ ನೆರವೇರಿಸಿದ್ದರು.
Related Articles
Advertisement
ಸಮುದ್ರ ಸೇರುವ ನೀರಿನ ಬಳಕೆ: ಮಳೆಗಾಲದ ಸಂದರ್ಭದಲ್ಲಿ ತಾಲೂಕಿನ ವರದಾ ಹಾಗೂ ದಂಡಾವತಿ ನದಿಗಳ ಸಾಕಷ್ಟು ಪ್ರಮಾಣದ ನೀರು ಕೃಷ್ಣಾ ನದಿಯ ಮೂಲಕ ಸಮುದ್ರ ಸೇರುತ್ತದೆ. ಇದನ್ನು ಸದ್ಬಳಕೆ ಮಾಡಿಕೊಂಡು ಕೆರೆಗಳಿಗೆ ನೀರು ತುಂಬಿಸುವ ಮಹತ್ತರ ಯೋಜನೆಯಾಗಿದೆ. ಇದರಿಂದ ಕೆರೆಯ ಸುತ್ತಲಿನ ಜಮೀನುಗಳಿಗೆ ಅನುಕೂಲವಾಗಲಿದ್ದು, ಅಂತರ್ಜಲ ವೃದ್ಧಿಗೆ ಸಹಕಾರಿಯಾಗಲಿದೆ. ಏತ ನೀರಾವರಿ ಯೋಜನೆಯಿಂದ ತಾಲೂಕಿನ 97 ಕೆರೆಗಳಿಗೆ ಜೀವಕಳೆ ತುಂಬಲಿದೆ.
ಬಂಗಾರಪ್ಪರಿಂದ ಬಿಎಸ್‌ವೈವರೆಗೆ: ಕ್ಷೇತ್ರ ದವರೇ ಆದ ದಿ. ಎಸ್. ಬಂಗಾರಪ್ಪ ಅವರು 1991-92ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತಾಲೂಕನ್ನು ಸಂಪೂರ್ಣ ನೀರಾವರಿ ಮಾಡುವುದಾಗಿ ಘೋಷಿಸಿದ್ದರು. ಅಂತೆಯೇ ಹಲವಾರು ಯೋಜನೆಗಳಿಗೆ ಮುನ್ನುಡಿ ಬರೆದಿದ್ದರು.
ಇವುಗಳಲ್ಲಿ ಮೂಡಿ, ಮೂಗೂರು, ಕಚವಿ ಏತ ನೀರಾವರಿ ಯೋಜನೆಯೂ ಒಳಗೊಂಡಿತ್ತು. ಯೋಜನೆಗಾಗಿ ಅನುದಾನ ಬಿಡುಗಡೆ ಮಾಡಿ, ಯೋಜನೆಗೆ ಬೇಕಾದ ಭೂಮಿಯನ್ನು ವಶಪಡಿಸಿಕೊಂಡು ಸಂತ್ರಸ್ತರಿಗೆ ಪರಿಹಾರ ಕೂಡ ನೀಡಲಾಗಿತ್ತು. ಆದರೆ, ಘೋಷಣೆಯಾದ ಯೋಜನೆಗೆ ಅಂತಿಮ ಮುಂದ್ರೆ ಒತ್ತಲು ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುವವರೆಗೂ ಕಾಯುವಂತಾಯಿತು. ಇದೀಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಕಳೆದ ವರ್ಷ ಶಂಕುಸ್ಥಾಪನೆ ನೆರವೇರಿಸಿ, ಇದೀಗ ಮೂಗೂರು ಯೋಜನೆಯ ಉದ್ಘಾಟನೆ ಸಹ ಮಾಡುತ್ತಿರುವುದರಿಂದ ರೈತರಲ್ಲಿ ಸಂತಸ ಇಮ್ಮಡಿಗೊಂಡಿದೆ.