ಗಣೇಶ್ ಅಭಿನಯದ “ಮುಗುಳು ನಗೆ’ ಚಿತ್ರವು ಸದ್ಯದಲ್ಲೇ ಎರಡನೇ ವಾರ ಮುಗಿಸಿ, ಮೂರನೆಯ ವಾರಕ್ಕೆ ಕಾಲಿಡುತ್ತಿದೆ. ಈ ಸಂದರ್ಭದಲ್ಲಿ ಚಿತ್ರವನ್ನು ಅಮೇರಿಕಾ ಮತ್ತು ಕೆನೆಡಾದಲ್ಲಿ ಬಿಡುಗಡೆ ಮಾಡುವ ಪ್ರಯತ್ನ ನಡೆಯುತ್ತಿದೆ.
ಹೌದು, ಇದೇ ಶುಕ್ರವಾರ, ಅಂದರೆ ಸೆಪ್ಟೆಂಬರ್ 14ರಂದು ಚಿತ್ರವನ್ನು ಅಮೇರಿಕಾ ಮತ್ತು ಕೆನೆಡಾದಲ್ಲಿ ಸುಮಾರು 41 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಇದುವರೆಗೂ ಅಲ್ಲಿ ಯಾವೊಂದು ಚಿತ್ರವೂ ಇಷ್ಟೊಂದು ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿ, ಪ್ರದರ್ಶನಗೊಂಡ ಉದಾಹರಣೆ ಇರಲಿಲ್ಲ.
ಈಗ “ಮುಗುಳು ನಗೆ’ ಚಿತ್ರವು ಅಮೇರಿಕಾದ ಲಾಸ್ ಆ್ಯಂಜಲೀಸ್, ಸೆಯಾಟಲ್, ಡಲ್ಲಾಸ್, ಹೂಸ್ಟನ್, ಡೆಟ್ರಾಯ್, ಡೆನ್ವರ್, ಚಿಕಾಗೋ, ಡಬ್ಲಿನ್, ವಾಷಿಂಗ್ಟನ್ ಡಿಸಿ, ಬೋಸ್ಟಾನ್, ನ್ಯೂಯಾರ್ಕ್ ಜೊತೆಗೆ ಕೆನೆಡಾದ ಟೊರಾಂಟೋ, ಮಾಂಟ್ರಿಯಲ್ ಮತ್ತು ಒಟ್ಟಾವದಲ್ಲೂ ಬಿಡುಗಡೆಯಾಗಲಿದೆ.
“ಮುಗುಳು ನಗೆ’ ಚಿತ್ರದ ಮೂಲಕ ಗಣೇಶ್ ಮತ್ತು ಯೋಗರಾಜ್ ಭಟ್, ಸುಮಾರು 10 ವರ್ಷಗಳ ನಂತರ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇನ್ನು ಈ ಚಿತ್ರದಲ್ಲಿ ಗಣೇಶ್ ಎದುರು ಆಶಿಕಾ, ಅಪೂರ್ವ ಅರೋರಾ, ನಿಖೀತಾ ನಾರಾಯಣ್ ಮತ್ತು ಅಮೂಲ್ಯ ನಾಯಕಿಯರಾಗಿ ನಟಿಸಿದ್ದಾರೆ.
ನಿರ್ದೇಶನದ ಜೊತೆಗೆ ಯೋಗರಾಜ್ ಭಟ್ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯವನ್ನೂ ಬರೆದಿದ್ದು, ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಇನ್ನು ಚಿತ್ರವನ್ನು ಸೈಯದ್ ಸಲಾಂ ನಿರ್ಮಿಸಿದ್ದು, ಮೈಸೂರ್ ಟಾಕೀಸ್ ಮೂಲಕ ಜಾಕ್ ಮಂಜು ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.