ಬಳ್ಳಾರಿ: ಪ್ರಧಾನಿ ನರೇಂದ್ರ ಮೋದಿ ಅವರ ಭಾರತೀಯ “ಚೊಂಬು’ ಪಕ್ಷ ಕರ್ನಾಟಕಕ್ಕೆ ಖಾಲಿ ಚೊಂಬು ಕೊಟ್ಟಿದೆ ಎಂದು ಎಐಸಿಸಿ ಮುಖಂಡ ರಾಹುಲ್ ಗಾಂಧಿ ವ್ಯಂಗ್ಯವಾಡಿದರು.
ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಸಮಾವೇಶದಲ್ಲಿ ಬಳ್ಳಾರಿ, ಕೊಪ್ಪಳ ಕ್ಷೇತ್ರಗಳ ಅಭ್ಯರ್ಥಿಗಳ ಪರ ಮತಯಾಚಿಸಿ, ಪದೇಪದೆ ಚೊಂಬು, ಖಾಲಿ ಚೊಂಬು ಪಾರ್ಟಿ ಎಂದು ಲೇವಡಿ ಮಾಡಿದರು.
ಕರ್ನಾಟಕ ರಾಜ್ಯದಿಂದ ಕೇಂದ್ರಕ್ಕೆ ಪಾವತಿಯಾಗಿರುವ 100 ರೂ. ತೆರಿಗೆ ಹಣದಲ್ಲಿ ಕೇವಲ 13 ರೂ. ಸಿಗುತ್ತಿದೆ. ರಾಜ್ಯಕ್ಕೆ ಸಿಗಬೇಕಿದ್ದ 18 ಸಾವಿರ ಕೋಟಿ ರೂ. ಬರ ಪರಿಹಾರ ಬದಲಿಗೆ ಖಾಲಿ ಚೊಂಬು ಕೊಟ್ಟಿದೆ. ಹಣಕಾಸು ಆಯೋಗ ಅನುದಾನ 7 ಸಾವಿರ ಕೋಟಿ ರೂ. ನೀಡಿಲ್ಲ. ಕರ್ನಾಟಕದ ಜನರಿಗೆ ಕೊಟ್ಟಿದ್ದು, ಕೇವಲ ಖಾಲಿ ಚೊಂಬು. ಅದು ಭಾರತೀಯ ಚೊಂಬು ಪಕ್ಷದ ಕೊಡುಗೆ ಎಂದರು.
ಇದೇ ವೇಳೆ ನಾನು ಜನರಲ್ಲಿ ಕೇಳ ಬಯಸುತ್ತೇನೆ. ಕಳೆದ ವರ್ಷ ರಾಜ್ಯದಲ್ಲಿ ನಾವು ಘೋಷಿಸಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಪೂರ್ಣಗೊಳಿಸಿದ್ದೇವೆ. ನಾವು ಹೇಳಿದ್ದನ್ನು ಮಾಡಿಯೇ ಮಾಡುತ್ತೇವೆ. ಜೀನ್ಸ್ ಉಡುಗೆ ಪಾರ್ಕ್ ಮಾಡಿ, ಬಳ್ಳಾರಿಯನ್ನು “ಜೀನ್ಸ್ ಕ್ಯಾಪಿಟಲ್’ ಮಾಡುವುದಾಗಿ ಮಾತು ಕೊಟ್ಟಿದ್ದೆ. ಈ ಮಾತನ್ನು ನಾನು ಖಂಡಿತ ನಿಜ ಮಾಡುತ್ತೇನೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದು, ಈ ಕುರಿತು ಯೋಜನೆ ರೂಪಿಸುವ ಕೆಲಸಗಳು ನಡೆಯುತ್ತಿವೆ ಎಂದು ಭರವಸೆ ನೀಡಿದರು.