ಮುದಗಲ್ಲ: ಪುರಸಭೆ ನಿರ್ಲಕ್ಷéದಿಂದಾಗಿ ಕೃಷ್ಣಾ ನದಿಗೆ ರಾಂಪುರ ಬಳಿ ನಿರ್ಮಿಸಿದ ಜಾಕ್‌ವೆಲ್‌ನಿಂದ ಕಳೆದ ಕೆಲ ದಿನಗಳಿಂದ ಪಟ್ಟಣಕ್ಕೆ ಕಲುಷಿತ ನೀರು ಪೂರೈಕೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಯೋಜನೆಯಡಿ ರಾಂಪುರ ಬಳಿ ಜಾಕ್ ವೆಲ್ ನಿರ್ಮಿಸಿದ್ದು, ಕೃಷ್ಣಾ ನದಿ ನೀರನ್ನು ಪಟ್ಟಣಕ್ಕೆ ಕುಡಿಯಲು ಪೂರೈಸಲಾಗುತ್ತಿದೆ. ಕಳೆದ ಕೆಲ ದಿನಗಳಿಂದ ಪಟ್ಟಣದಲ್ಲಿ ಕಲುಷಿತ ನೀರು ಪೂರೈಕೆ ಆಗುತ್ತಿದ್ದರೂ ಪುರಸಭೆ ಆಡಳಿತ ಮಂಡಳಿ ಗಮನಹರಿಸಿಲ್ಲ. ಪಟ್ಟಣದಲ್ಲಿ 5-6 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಆದರೂ ಶುದ್ಧ ನೀರು ಪೂರೈಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಪಟ್ಟಣದ ಕನ್ನಾಪುರಹಟ್ಟಿಯ ಶ್ರೀ ಸಂಗಮೇಶ್ವರ ದೇವಸ್ಥಾನದ ಬಳಿ ನಿರ್ಮಿಸಿದ ಕುಡಿಯುವ ನೀರು ಶುದ್ಧೀಕರಣ ಘಟಕವಿದ್ದರೂ ಪಟ್ಟಣದ ಪಾಲಿಗೆ ಇಲ್ಲದಂತಾಗಿದೆ.
ತಿಂಗಳಿಂದ ಶುದ್ಧ ಕುಡಿಯುವ ನೀರು ಬದಲಾಗಿ ಅಶುದ್ಧ ನೀರು ಪೂರೈಸಲಾಗುತ್ತಿದೆ. ಕಲುಷಿತ ನೀರು ಕುಡಿದು ಹಲವರು ವಾಂತಿ, ಭೇದಿ, ಟೈಫಾಯಿಡ್ ಜ್ವರದಂತಹ ಕಾಯಿಲೆಯಿಂದ ಬಳಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರಿಗೆ ಮೈ-ಕೈ ನೋವು, ಗಂಟಲು ಬೇನೆಯಂತಹ ಕಾಯಿಲೆ ಕಾಣಿಸಿಕೊಂಡಿದೆ. ಈ ಕುರಿತು ಪುರಸಭೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಸಿಬ್ಬಂದಿ ನಿರ್ಲಕ್ಷ್ಯ :ನೀರು ಶುದ್ಧೀಕರಣ ಘಟಕದಲ್ಲಿ ಇಬ್ಬರು ಪುರಸಭೆ ನೌಕರರು ನೇಮಕಗೊಂಡಿದ್ದರೂ ಅವರು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ನೀರು ಶುದ್ಧೀಕರಣದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ತೊಂದರೆ: ಪಟ್ಟಣದಲ್ಲಿ 5-6 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಅದು ನಿಗದಿತ ಸಮಯದಲ್ಲಿ ಪೂರೈಸುವುದಿಲ್ಲ. ಹೀಗಾಗಿ ಯಾವ ವಾರ್ಡ್‌ಗೆ ಯಾವ ಸಮಯದಲ್ಲಿ ನೀರು ಬರುತ್ತದೆ ಎಂದು ಮಹಿಳೆಯರು ಚಾತಕ ಪಕ್ಷಿಯಂತೆ ಕಾಯಬೇಕಿದೆ. ಇನ್ನಾದರೂ ಪುರಸಭೆ ಅಧಿಕಾರಿಗಳು ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರು ಪೂರೈಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.