ದೇವಪ್ಪ ರಾಠೊಡ
ಮುದಗಲ್ಲ: ಕೃಷಿ ಇಲಾಖೆಯ ಕೃಷಿ ಭಾಗ್ಯ ಯೋಜನೆಯಡಿ ಸ್ವಂತ ಹಣ ಹಾಕಿ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡ ರೈತರಿಗೆ ಈವರೆಗೆ ಇಲಾಖೆಯಿಂದ ಅನುದಾನ ಬಿಡುಗಡೆ ಆಗದ್ದಕ್ಕೆ ರೈತರು ಕೈ ಸುಟ್ಟುಕೊಳ್ಳುವಂತಾಗಿದೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಕೃಷಿ ಭಾಗ್ಯ ಯೋಜನೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರಿಗೆ ದುರ್ಭಾಗ್ಯವಾಗಿದೆ. ಸರ್ಕಾರದ ಸಹಾಯಧನ ನಂಬಿಕೊಂಡು ಇದ್ದ ಅಲ್ಪಸ್ವಲ್ಪ ಜಮಿನುದಲ್ಲಿ ಸಾಲ ಮಾಡಿ ಕೃಷಿ ಹೊಂಡ ನಿರ್ಮಿಸಿಕೊಂಡ ರೈತರು ಸರ್ಕಾರದ ಸಹಾಯಧನಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಒಂದು ಕಡೆ ಸರ್ಕಾರದಿಂದ ಸಹಾಯಧನ ಬರುತ್ತಿಲ್ಲ, ಇನ್ನೊಂದೆಡೆ ಸಾಲಗಾರರ ಕಾಟದಿಂದ ರೈತರು ಗೋಳಾಡುವಂತಾಗಿದೆ.
ಸುಮಾರು 60 ಹಳ್ಳಿಗಳಿಗೆ ಕೇಂದ್ರವಾಗಿರುವ ಮುದಗಲ್ಲ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿಯೇ 498 ಕೃಷಿ ಹೊಂಡ ನಿರ್ಮಾಣವಾಗಿವೆ. ಇನ್ನು ಲಿಂಗಸುಗೂರು ತಾಲೂಕಿನ ವ್ಯಾಪ್ತಿಯಲ್ಲಿನ ಅಂಕಿ-ಸಂಖ್ಯೆ ದೊಡ್ಡದಿದೆ. 2018-19ನೇ ಸಾಲಿನ ಬೇಸಿಗೆ ಆರಂಭಕ್ಕೂ ಮುಂಚೆಯೇ ರೈತರು ನಿರ್ಮಿಸಿಕೊಂಡ ಕೇವಲ 82 ಕೃಷಿ ಹೊಂಡಗಳಿಗೆ ಮಾತ್ರ ಸುಮಾರು 55 ಲಕ್ಷ ರೂ.ಸಹಾಯಧನ ಬಂದಿದೆ. ಆ ನಂತರ ಇದೇ ಯೋಜನೆಯಡಿ 18, 21 ಹಾಗೂ 30 ಮೀಟರ್ ಉದ್ದ-ಅಗಲ ಅಳತೆಯಲ್ಲಿ ನಿರ್ಮಿಸಿದ ಒಟ್ಟು 416 ಕೃಷಿ ಹೊಂಡಗಳಿಗೆ ಇದುವರೆಗೂ ಒಂದು ಪೈಸೆಯೂ ಸಹಾಯಧನ ಬಿಡುಗಡೆಯಾಗಿಲ್ಲ. ನಿರ್ಮಿಸಿದ ಒಟ್ಟು 416 ವಿವಿಧ ಅಳತೆಯ ಕೃಷಿ ಹೊಂಡಗಳಿಗೆ 2.95 ಕೋಟಿ ರೂ.ಸಹಾಯಧನ ಬರಬೇಕಾಗಿದೆ ಎಂದು ಕೃಷಿ ಅಧಿಕಾರಿಗಳು ವಿವರಿಸುತ್ತಾರೆ. ರೈತರು ನಿರ್ಮಿಸಿಕೊಂಡ ಕೃಷಿಹೊಂಡಗಳನ್ನು ಕೃಷಿ ಅಧಿಕಾರಿಗಳು ಪರಿಶೀಲಿಸಿ ಭಾವಚಿತ್ರ ತೆಗೆದು, ಜಿಪಿಎಸ್ ಮಾಡಿದ್ದಾರೆ. ಕೃಷಿ ಇಲಾಖೆಗೆ ಕಂಪ್ಯೂಟರ್ ಮೂಲಕ ಅಪ್‌ಲೋಡ್ ಮಾಡಿದ್ದಾರೆ. ಆದರೆ ಕೃಷಿ ಹೊಂಡ ನಿರ್ಮಿಸಿಕೊಂಡು ಆರು ತಿಂಗಳಾದರೂ ಸಹಾಯಧನ ಬಾರದಿರುವುದಕ್ಕೆ ರೈತರು ನಿತ್ಯ ಕೃಷಿ ಇಲಾಖೆಗೆ ಅಲೆಯುವಂತಾಗಿದೆ. ಶಾಸಕರು ಮತ್ತು ಅಧಿಕಾರಿಗಳು ಇತ್ತ ಗಮನಹರಿಸಿ ಸರ್ಕಾರದಿಂದ ಸಹಾಯಧನ ಮಂಜೂರಿಗೆ ಮುಂದಾಗಬೇಕೆಂದು ರೈತರು ಆಗ್ರಹಿಸಿದ್ದಾರೆ.
ಸರಕಾರದ ಅನುದಾನ ನೆಚ್ಚಿಕೊಂಡು ಕೃಷಿ ಹೊಂಡ ನಿರ್ಮಿಸಿಕೊಂಡಿದ್ದೇವೆ. ವರ್ಷ ಗತಿಸಿದರೂ ಬಿಡಿಗಾಸು ಬಂದಿಲ್ಲ.
•
ಹನುಮಂತಪ್ಪ,
ಕೃಷಿ ಹೊಂಡ ನಿರ್ಮಿಸಿಕೊಂಡ ರೈತ.
ತಾಂತ್ರಿಕ ತೊಂದರೆಯಿಂದ ಕೃಷಿ ಹೊಂಡ ಅನುದಾನ ಬಂದಿರಲಿಲ್ಲ. ಈಗ 1 ಕೋಟಿಗೂ ಅಧಿಕ ಹಣ ಸರಕಾರ ಜಮೆ ಮಾಡಿದೆ. ಒಂದು ವಾರದಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡ ರೈತರ ಬ್ಯಾಂಕ್ ಖಾತೆಗೆ ಅನುದಾನ ಜಮಾ ಮಾಡುತ್ತೇವೆ.
•
ಮಹಾಂತೇಶ ಹವಾಲ್ದಾರ್,
ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಇಲಾಖೆ ಲಿಂಗಸುಗೂರು.