ಮುದಗಲ್ಲ: ಕೃಷಿ ಮತ್ತು ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ಕೃಷಿ ಮಾಹಿತಿ ರಥದ ಮೂಲಕ ಗ್ರಾಮೀಣ ಭಾಗದ ರೈತರಿಗೆ ಸ್ಥಳದಲ್ಲಿಯೇ ಮಾಹಿತಿ ನೀಡುವ ಯೋಜನೆ ಸರಕಾರ ಹಮ್ಮಿಕೊಂಡಿದೆ ಎಂದು ಲಿಂಗಸುಗೂರ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾಂತೇಶ ಹವಾಲ್ದಾರ ಹೇಳಿದರು.
ಜಿಲ್ಲಾ ಪಂಚಾಯತಿ ರಾಯಚೂರು ಮತ್ತು ಕೃಷಿ ಇಲಾಖೆಯ ಸಹಭಾಗಿತ್ವದಲ್ಲಿ ಹಮ್ಮಿಕೊಂಡ ಸಮಗ್ರ ಕೃಷಿ ಅಭಿಯಾನ 2019 ಮಾಹಿತಿ ರಥಕ್ಕೆ ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಚಾಲನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೃಷಿ ಅಭಿಯಾನ ಮಾಹಿತಿ ರಥ ನಿತ್ಯ 5 ಗ್ರಾಮ ಪಂಚಾಯತಿಗಳ ಹಳ್ಳಿಗಳಲ್ಲಿ ಸಂಚರಿಸಿ ರೈತರಿಗೆ ಮಾಹಿತಿ ನೀಡಲಿದೆ. ಕೃಷಿ ಜೊತೆಗೆ ರೇಷ್ಮೆ, ಆರಣ್ಯ, ಮೀನುಗಾರಿಕೆ, ಪಶುಸಂಗೋಪನೆ ಹಾಗೂ ತೋಟಗಾರಿಕೆ ಇಲಾಖೆ ಯೋಜನೆ, ಸೌಲಭ್ಯಗಳ ಬಗ್ಗೆಯೂ ರೈತರಿಗೆ ಮಾಹಿತಿ ನೀಡಲಾಗುವುದು ಎಂದರು.
ಕೃಷಿ ಮಾಹಿತಿ ರಥಕ್ಕೆ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ನಾಗನಗೌಡ ತುರಡಗಿ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.
28ಕ್ಕೆ ಆಭಿಯಾನ: ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಆ.28ರಂದು ಕೃಷಿ ಅಭಿಯಾನ ಬಹಿರಂಗ ಕಾರ್ಯಕ್ರಮ ನಡೆಯಲಿದೆ. ಕೃಷಿ ವಿಜ್ಞಾನಿಗಳು ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರುಪಾಲ್ಗೊಂಡು ಕೃಷಿ ಅಭಿಯಾನ ಯಶಸ್ವಿಗೊಳಿಸಬೇಕೆಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾಂತೇಶ ಹವಾಲ್ದಾರ ವಿನಂತಿಸಿದರು.
ಎಪಿಎಂಸಿ ನಿರ್ದೇಶಕ ಗ್ಯಾನನಗೌಡ ಪೊಲೀಸ್ ಪಾಟೀಲ, ಪುರಸಭೆ ಸದಸ್ಯ ಶರಣಪ್ಪ ವಡ್ಡರ್, ಎಸ್.ಆರ್. ರಸೂಲ, ದುರಗಪ್ಪ ಕಟ್ಟಿಮನಿ, ಮುಖಂಡರಾದ ನಾಗರಾಜ ತಳವಾರ, ಚಂದಾವಲಿಸಾಬ, ಶರಣಪ್ಪ, ಅಮರಪ್ಪ, ಕೃಷಿ ಅಧಿಕಾರಿ ಆಕಾಶ ದಾನಿ ಇತರರಿದ್ದರು.