ಮೂಡುಬಿದಿರೆ: ಸಾರ್ವಜನಿಕ ಶ್ರೀ ಗಣೇಶೋತ್ಸವದ ಶೋಭಾಯಾತ್ರೆ ಸಂದರ್ಭ ದೇವರ ವಿಗ್ರಹವಿರಿಸಿದ ವಾಹನ ಚಲಾಯಿಸುವ ಸೇವೆಯಲ್ಲಿ ನಿರತರಾಗಿದ್ದ ಸಮಿತಿ ಪ್ರಧಾನ ಕಾರ್ಯದರ್ಶಿ ನಾರಾಯಣ ಪಿ.ಎಂ. ಅವರ ಮನೆಗೆ ನುಗ್ಗಿದ ಕಳ್ಳರು ರೂ. ಒಂದೂವರೆ ಲಕ್ಷ ನಗದು ಎತ್ತಿಕೊಂಡೊಯ್ದ ಘಟನೆ ಶನಿವಾರ ರಾತ್ರಿ ಮಾಸ್ತಿಕಟ್ಟೆಯಲ್ಲಿ ನಡೆದಿದೆ.
ಕಳೆದ 20 ವರ್ಷಗಳಿಂದಲೂ ನಾರಾಯಣ ಪಿ.ಎಂ. ಅವರು ಹೊಸ ಚೇಸಿಸ್ ಖರೀದಿಸಿ ಅದರಲ್ಲಿ ಗಣೇಶ ವಿಗ್ರಹವನ್ನಿರಿಸಿ ಸ್ವತ: ತಾವೇ ಚಲಾಯಿಸುತ್ತ ಬರುತ್ತಿರುವಂತೆ ಅವರು ಶನಿವಾರವೂ ಗಣೇಶನ ವಿಗ್ರಹವನ್ನು ಹೊತ್ತ ವಾಹನವನ್ನು ಚಾಲನೆ ಮಾಡುತ್ತಿದ್ದರು.
ಉತ್ಸವದಲ್ಲಿ ತೊಡಗಿಸಿಕೊಂಡಿರುವ ನಾರಾಯಣ ಅವರ ಓಡಾಟ ಗಮನಿಸಿರಬಹುದಾದ ಕಳ್ಳರು ಪೇಟೆಯಲ್ಲಿ ಜನರೆಲ್ಲ ಮೆರವಣಿಗೆಯನ್ನು ವೀಕ್ಷಿಸಲು ಜಮಾಯಿಸಿದ ಹೊತ್ತಿನಲ್ಲಿ ಮನೆಯ ಬಾಲ್ಕನಿಯ ಬಾಗಿಲನ್ನು ಮುರಿದು ಒಳಹೊಕ್ಕಿರುವುದಾಗಿ ತಿಳಿದುಬಂದಿದ್ದು ಮನೆಯಲ್ಲಿ ಸಿಸಿ ಕೆಮರಾ ಇರುವುದನ್ನು ಗಮನಿಸಿ ಅದರ ಡಿವಿಆರ್‌ನ್ನು ಎತ್ತಿಕೊಂಡು ಹೋಗಿದ್ದಾರೆ. ರಾತ್ರಿ ಸುಮಾರು 12 ಗಂಟೆಯ ವೇಳೆಗೆ ಘಟನೆ ನಡೆದಿರಬಹುದು ಎಂದು ಪೊಲೀಸರು ಆಂದಾಜಿಸಿದ್ದಾರೆ.
ಮೆರವಣಿಗೆ ವೀಕ್ಷಣೆಗೆಂದು ತೆರಳಿದ್ದ ನಾರಾಯಣ ಪಿ.ಎಂ.ಅವರ ಪತ್ನಿ ಮನೆಗೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ.
ಈ ಪರಿಸರದ ಪರಿಚಯ ಇರುವ, ವಿಶೇಷವಾಗಿ ಅನ್ಯರಾಜ್ಯಗಳಿಂದ ಇಲ್ಲಿಗೆ ಬಂದಿರುವ ಕಾರ್ಮಿಕರ ಬಗ್ಗೆ ಸಾರ್ವಜನಿಕವಾಗಿ ಸಂಶಯ ವ್ಯಕ್ತವಾಗುತ್ತಿದೆ.
ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.ಹಿರಿಯ ಪೊಲೀಸ್ ಅಧಿಕಾರಿಗಳು, ಶ್ವಾನದಳದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.