Advertisement

ಮೂಡುಬಿದಿರೆ: ಬಸವನ ಕಜೆ ಕೆರೆಗೆ ಕಾಯಕಲ್ಪ ಖುಷಿ

04:01 PM Jun 11, 2024 | Team Udayavani |

ಮೂಡುಬಿದಿರೆ: ಹದಿನೆಂಟು ಬಸದಿ, ದೇವಸ್ಥಾನ, ಕೆರೆಗಳ ಊರು ಮೂಡುಬಿದಿರೆ ಎನ್ನುತ್ತಾರೆ. ಈಗ ಕೆರೆಗಳ ಸಂಖ್ಯೆ 20ಕ್ಕೇರಿದೆ. ಕೆಲವು ಜೀವಂತವಾಗಿವೆ, ಇನ್ನು ಕೆಲವು ಅರೆ ಜೀವಂತ, ಕೆಲವು ಬರಡಾಗಿ ಹೋಗಿವೆ. ಆಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಕೆರೆಯನ್ನು ಆಡಳಿತೆದಾರ ಈಶ್ವರ ಭಟ್ಟರು “ಮಾನಸ ಗಂಗೋತ್ರಿ’ಯಾಗಿ ಮಾಡಿದರು. ಬಳಿಕ ರೋಟರಿ ಕ್ಲಬ್‌ನವರು ಕಡಲಕೆರೆಯ ಪುನರುತ್ಥಾನ ಮಾಡಿದರು. ಈಗ ಅದು ಹಲವು ಆಕರ್ಷಣೆಗಳ ತಾಣವಾಗಿದೆ. ಇದಿಷ್ಟೇ ಅಲ್ಲ, ರೋಟರಿ ಚಾರಿಟೆ ಬಲ್‌ ಟ್ರಸ್ಟ್‌ ಕಳೆದ ಏಳು ವರ್ಷಗಳಲ್ಲಿ ನಾಲ್ಕು ಕೆರೆಗಳನ್ನು ಅಭಿವೃದ್ಧಿ ಮಾಡಿದ್ದು, ಈಗ ಐದನೆಯದಾಗಿ ಬಸವನ ಕಜೆ ಕೆರೆಯನ್ನು ಜೀವಂತವಾಗಿಸಲು ಸಿದ್ಧವಾಗುತ್ತಿದೆ.

Advertisement

ರೋಟರಿ ಕ್ಲಬ್‌ ಕಡಲಕೆರೆಗೆ ಕಾಯಕಲ್ಪ ಮಾಡಿದ್ದು 25 ವರ್ಷ ಗಳ ಹಿಂದೆ. ಕಡ ಲ ಕೆರೆ ಜನಪ್ರಿಯಗೊಂಡ ರೀತಿಯನ್ನು ಕಂಡು ಬೆರ ಗಾದ ರೋಟರಿ ಕ್ಲಬ್‌ 2016ರಲ್ಲಿ ರೋಟರಿ ಚಾರಿಟೆಬಲ್‌ ಟ್ರಸ್ಟ್‌ ರೂಪಿಸಿ ರೋಟಾ ಲೇಕ್ಸ್‌ ಎಂಬ ಕೆರೆಗಳ ಪುನರುತ್ಥಾನ ಯೋಜನೆಯನ್ನೇ ಹಮ್ಮಿಕೊಂಡಿತು. ತೀರ್ಥ ಕೆರೆ, ಉಳಿಯ ಕೆರೆ, ಪುಚ್ಚೇರಿ ಕೆರೆ ಮತ್ತು ಬಂಟ್ವಾಳ ರಸ್ತೆ ಬದಿ ಇರುವ ಕೇಂಪ್ಲಾಜೆ ಕೆರೆಗಳಿಗೆ ಅದು ಮರುಜೀವ ನೀಡಿದೆ. ಇದೀಗ ಮೂಡುಬಿದಿರೆ ಸರಹದ್ದಿನಲ್ಲಿ ಬರುವ ಬಸವನ ಕಜೆ ಕೆರೆಯನ್ನು ಮತ್ತೆ ಜೀವಂತವಾಗಿಸಲು ಸಿದ್ಧವಾಗಿದೆ.

ರೋಟರಿ ಚಾರಿಟೆಬಲ್‌ ಟ್ರಸ್ಟ್‌ ಗೆ ಮೊದಲ ಎರಡು ಅವಧಿ ಅಂದರೆ 6 ವರ್ಷ ಗಳಲ್ಲಿ ಡಾ| ಮುರಳಿಕೃಷ್ಣ ಅವರು ಅಧ್ಯಕ್ಷರಾಗಿದ್ದರೆ, ಈಗ 2 ವರ್ಷಗಳಿಂದ ಪಿ.ಕೆ. ಥಾಮಸ್‌ ಟ್ರಸ್ಟ್‌ ಚುಕ್ಕಾಣಿ ಹಿಡಿದು ಕೆರೆ ಅಭಿವೃದ್ಧಿಯನ್ನು ಮುಂದುವರಿ ಸುತ್ತಿದ್ದಾರೆ. ಬಸವನ ಕಜೆ ಕೆರೆಯ ವಿಶೇಷ ಮೂಡುಬಿದಿರೆ ಪುರಸಭೆಯ ಮಾರ್ಪಾಡಿ ಗ್ರಾಮದ ಈಶಾನ್ಯ ಮೂಲೆಯಲ್ಲಿದೆ ಬಸವನಕಜೆ ಕೆರೆ. 6.25 ಎಕ್ರೆ ಪ್ರದೇಶದಲ್ಲಿ ಹರಡಿರುವ ಬಸವನಕಜೆ ಕೆರೆಗೆ ಬೇರೆ ಮೂಲಗಳಿಂದ ನೀರ ಹರಿವು ಇಲ್ಲ. ನೀರು ಹೊರಗೆ ಹೋಗುವ ದ್ವಾರವೂ ಇಲ್ಲ. ಮಳೆಗಾಲದಲ್ಲಿ ನೀರು ತುಂಬಿ ನಿಲ್ಲುತ್ತದೆ.

ಮೂರು ಹಂತಗಳಲ್ಲಿರುವ ಬಸವನಕಜೆ ಕೆರೆಯಲ್ಲಿ ಎತ್ತರದ ಒಂದು ಹಂತ, ಸ್ವಲ್ಪ ತಗ್ಗಿನಲ್ಲಿರುವ ನೀರಿನ ಪ್ರದೇಶ ಮತ್ತು ಮೂರನೇ ಸ್ತರದಲ್ಲಿ ಬಯಲ ಭಾಗ. ಸದ್ಯ ಸುಮಾರು 70 ಶೇ.ದಷ್ಟು ಜಾಗದಲ್ಲಿ ಹಸಿರಿದೆ. 15 ಶೇ. ಬರಡು, ಅಷ್ಟೇ ಜಾಗದಲ್ಲಿ ಕೆಲವಂಶ ನಿರ್ಮಾಣ  ಕಾಮಗಾರಿಗಳಾಗಿವೆ. ರಾಷ್ಟ್ರೀಯ ಹೆದ್ದಾರಿ ಈ ಕೆರೆಯ ಹತ್ತಿರವೇ ಸಾಗುವ ಕಾರಣ, ನಗರೀಕರಣ
ವೇಗ ಪಡೆದುಕೊಳ್ಳುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಇಲ್ಲಿನ ಸಸ್ಯರಾಶಿ ಕಡಿಮೆಯಾಗುತ್ತ ಬಂದು, ನಿರ್ಮಾಣ ಕಾಮಗಾರಿಗಳು ನಡೆದಂತೆಲ್ಲ ಬಸವನಕಜೆಯ ಸಹಜ ಪ್ರಾಕೃತಿಕ ಚೆಲುವು, ಸಂಪತ್ತಿಗೆ ಕುತ್ತಾಗುವ ಎಲ್ಲ ಸಾಧ್ಯತೆಗಳೂ ಇವೆ.

ಏನೆಲ್ಲ ಇದೆ ಈ ಕೆರೆಯಲ್ಲಿ?
ಬಸವನ ಕಜೆ  ಕೆರೆ ಒಂದು ಹಸುರು ಪ್ರದೇಶ. ಬಹಳ ಕುತೂಹಲಕಾರಿ ಸಂಗತಿ ಎಂದರೆ 2015ರಲ್ಲಿ ತೆಗೆದ ಚಿತ್ರದಲ್ಲಿ ತೋರುವ
ಸಸ್ಯರಾಶಿಗಿಂತ 2023ರಲ್ಲಿ ಕಂಡ ಸಸ್ಯಸಂಕುಲ ಸಮೃದ್ಧವಾಗಿದೆ, ವೈವಿಧ್ಯಮಯವೂ ಆಗಿದೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಬೆಳೆಯುವ ಅನೇಕ ಸಸ್ಯಗಳು ಇಲ್ಲಿವೆ. ಕುಂಟ ನೇರಳೆ, ಕಾಡು ಆರ್ಕಿಡ್‌, ಮುಳ್ಳಿನ ಡಲ್‌ಬರ್ಜಿಯಾ, ಲಿಯಾನಾ ಎಂಬ ಮರವನ್ನು ಸುತ್ತಿಕೊಳ್ಳುವ ಕಾಡುಬಳ್ಳಿ ಮೊದಲಾದ ಬಹುವಿಧ ಸಸ್ಯಗಳಿಲ್ಲಿವೆ.

Advertisement

ಗಿಡಮೂಲಿಕೆಗಳ ನೆಲೆಯೂ ಇದಾಗಿದೆ;
ಮುಂದೆ ಅವುಗಳನ್ನು ಸೂಕ್ತವಾಗಿ ಬೆಳೆಸುವ ಅವಕಾಶವೂ ಇದೆ. ನೀರಿರುವ ಭಾಗದಲ್ಲಿ ಸರೀಸೃಪಗಳು, ಪಶ್ಚಿಮ ಘಟ್ಟದಲ್ಲಿರುವಂತೆ ಅರಿಶಿನ ಬುರುಡೆಯ ಗುಬ್ಬಚ್ಚಿಯಂತಹ ಹಕ್ಕಿಗಳು, ವರ್ಣರಂಜಿತ ಚಿಟ್ಟೆ, ಪಾತರಗಿತ್ತಿಗಳು ಇವೆ. ಕೆಲವೊಂದು ಸೀಸನ್‌ ನಲ್ಲಿ ದೂರದೂರುಗಳ ಪಕ್ಷಿ ಸಂಕುಲವೂ ಬರುವುದುಂಟು.

ಅಭಿವೃದ್ಧಿ ಪ್ಲ್ರಾನ್‌ ಏನು?
ಸಿಡಿಡಿ ಇಂಡಿಯಾ, ರೋಟರಿ ಚಾರಿಟೆಬಲ್‌ ಟ್ರಸ್ಟ್‌, ಪುರಸಭೆ, ಅರಣ್ಯ ಇಲಾಖೆ ಇವೆಲ್ಲ ಸೇರಿಕೊಂಡು ಬಸವನ ಕಜೆ ಕೆರೆಯನ್ನು ಪುನರುಜ್ಜೀವನಗೊಳಿಸಲು ಯೋಜನೆ ಹಾಕಿಕೊಂಡಿವೆ. ಈಗಾಗಲೇ ಡಿಪಿಆರ್‌ ತಯಾರಾಗಿದೆ. ಸುಮಾರು ಎರಡು ಕೋಟಿ ರೂ. ವೆಚ್ಚದ ಯೋಜನೆ ಇದು. ಮೇಲಿನ ಹಂತವನ್ನು ಸುಮಾರು 25 ಅಡಿ ತಗ್ಗಿಸಿ ಜಲಾಶಯವನ್ನು ವಿಸ್ತಾರಗೊಳಿಸುವುದು, ಸುತ್ತಲೂ
ನಡೆದಾಡುವ ಪಥ, ಉದ್ಯಾನವನ, ಆಟದ ಬಯಲು ಇವನ್ನೆಲ್ಲ ನಿರ್ಮಿಸಲು ಯೋಜಿಸಲಾಗಿದೆ. ಉಪಾಹಾರ ಗೃಹಗಳೂ ತೆರೆದುಕೊಳ್ಳಲಿವೆ. ಇವೆಲ್ಲವೂ ಸಮರ್ಪಕವಾಗಿ ನಡೆದಾಗ ಬಸವನಕಜೆ ಪ್ರದೇಶವೂ ಪ್ರವಾಸಿ ಆಕರ್ಷಣೆಯ ತಾಣವಾಗಲಿದೆ.

ಮೂಡುಬಿದಿರೆಯಲ್ಲಿರುವ ಕೆರೆಗಳು
ಕಡಲಕೆರೆ, ತೀರ್ಥಕೆರೆ (ಮೊಹಲ್ಲ ಕೆರೆ), ಗೌರಿ ಕೆರೆ, ಅಂಕಸಾಲೆ ಕೆರೆ, ಬಸದಿ ಕೆರೆ, ಪೊಟ್ಟು ಕೆರೆ, ಚಂದ್ರಶೇಖರ ದೇವಸ್ಥಾನ ಕೆರೆ, ಮಹಾಲಿಂಗೇಶ್ವರ ಕೆರೆ, ಕೇಂಪ್ಲಾಜೆ ಕೆರೆ, ಉಳಿಯ ಕೆರೆ, ಪುಚ್ಚೇರಿ ಕೆರೆ (ಸುಭಾಸ್‌ನಗರ) ವೆಂಕಟರಮಣ ದೇಗುಲ ಕೆರೆ, ಬಸವನ ಕಜೆ ಕೆರೆ, ಕಲ್ಯಾಣಿ ಕೆರೆ, ಉಮಿಗುಂಡಿ ಕೆರೆ, ವಿದ್ಯಾಗಿರಿ ಕೆರೆ, ಕಡದಬೆಟ್ಟು ಕೆರೆ, ಒಂಟಿಕಟ್ಟೆ ಕೆರೆ

*ಧನಂಜಯ ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next