Advertisement

ಸ್ವಾತಂತ್ರ್ಯ ಹೋರಾಟಗಾರರನ್ನು ನೀಡಿದ ಮುದ್ರಾಡಿ ಸರಕಾರಿ ಹಿ. ಪ್ರಾ. ಶಾಲೆ

11:45 PM Nov 14, 2019 | Sriram |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

ಹೆಬ್ರಿ:ಸ್ವಾತಂತ್ರ್ಯಹೋರಾಟಗಾರರನ್ನು ನೀಡಿದ ಕಳೆದ 117 ವರ್ಷಗಳಿಂದ ವಿದ್ಯಾದಾನ ಮಾಡುತ್ತಿರುವ ಹೆಬ್ರಿ ತಾಲೂಕಿನ ಮುದ್ರಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನ ಕಂಡು ಮುನ್ನಡೆಯುತ್ತಿದೆ. 1902ರಲ್ಲಿ ಭಕ್ರೆ ಸಮೀಪ ನಾಗಪ್ಪ ಹೆಗ್ಡೆ ಅವರ ಜಾಗದಲ್ಲಿ ಮುಳಿಹುಲ್ಲಿನ ಕಟ್ಟಡದಲ್ಲಿ ಆರಂಭವಾದ ಶಾಲೆ ಅನಂತರ ಮುದ್ರಾಡಿ ಬಸ್‌ ತಂಗುದಾಣ ಸಮೀಪ ಕೀರ್ತಿಶೇಷ ಮುದ್ರಾಡಿ ಬೀಡು ನಾಗರಾಜ ಅತಿಕಾರಿ ಅವರು ನೀಡಿದ 1.57 ಎಕ್ರೆ ಜಾಗ ಹಾಗೂ ಅವರು ಕಟ್ಟಿಕೊಟ್ಟ ಕಟ್ಟಡದಲ್ಲಿ ಶಾಲೆ ಆರಂಭಗೊಂಡು ದಾನಿಗಳ ನೆರವು ಹಾಗೂ ಸರಕಾರದ ಅನುದಾನದಿಂದ ಸ್ವಂತ ಕಟ್ಟಡವನ್ನು ಹೊಂದಿತ್ತು.

ಈ ಶಾಲೆಗೆ ಬಲ್ಲಾಡಿ , ಉಪ್ಪಳ , ನೆಲ್ಲಿಕಟ್ಟೆ , ಜರ್ವತ್ತು , ತುಂಡುಗುಡ್ಡೆ ಸುತ್ತಮುತ್ತಲಿನ ಗ್ರಾಮದ ವಿದ್ಯಾರ್ಥಿಗಳು ಬರುತ್ತಿದ್ದು ಇಂದು ಈ ಶಾಲೆಯ ವ್ಯಾಪ್ತಿಯಲ್ಲಿ
4 ಸರಕಾರಿ ಶಾಲೆಗಳು ಕಾರ್ಯನಿರ್ವಹಿಸುತ್ತವೆ. ಆದರೂ ಶಾಲೆಯಲ್ಲಿ ಪ್ರಸ್ತುತ 151 ವಿದ್ಯಾರ್ಥಿಗಳು ಕಲಿಯುತ್ತಿದಾರೆ. ಪ್ರಸ್ತುತ ಇಲ್ಲಿ ಮುಖ್ಯ ಶಿಕ್ಷಕ ಚಂದ್ರಕಾಂತ್‌ ಅವರ ಜತೆ 8 ಮಂದಿ ಪೂರ್ಣ ಕಾಲಿಕ ಹಾಗೂ 2 ಗೌರವ ಶಿಕ್ಷಕಿಯರು ಸೇರಿ ಒಟ್ಟು 10 ಮಂದಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾಗಿ ಸುಂದರ್‌ ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಶ್ರೀಧರ್‌ ನಾಯಕ್‌ ಅವರು ಸೇವೆ ಸಲ್ಲಿಸುತ್ತಿದ್ದಾರೆ.

ಮೂಲ ಸೌಕರ್ಯ
ದಾನಿ ದಿ| ನಾಗರಾಜ ಅತಿಕಾರಿ ನೀಡಿದ 1.57 ಎಕ್ರೆ ಜಾಗ ಸೇರಿದಂತೆ ಸುಮಾರು 2.10 ಎಕ್ರೆ ಜಾಗದಲ್ಲಿ ಶಾಲೆ ಕಾರ್ಯನಿರ್ವಹಿಸುತ್ತಿದ್ದು ವಿಶಾಲವಾದ ಆಟದ ಮೈದಾನ, ಆವರಣ ಗೋಡೆ , ಸುಸಜ್ಜಿತ ತರಗತಿ ಕೋಣೆ, ಕಂಪ್ಯೂಟರ್‌ ಕೊಠಡಿ, ಸ್ಮಾರ್ಟ್‌ ಕ್ಲಾಸ್‌, ಶೌಚಾಲಯ, ನಲಿಕಲಿ ಕೊಠಡಿ, ಬಾವಿ ,ಅಕ್ಷರ ದಾಸೋಹ ಮೊದಲಾದ ಮೂಲ ಸೌಕರ್ಯದೊಂದಿಗೆ ದಾನಿಗಳ ನೆರವಿನ ಮೂಲ ಕ ಪುನರುಜ್ಜೀವನ ಕಾರ್ಯ ನಡೆದಿವೆ. 2003ರಲ್ಲಿ ಶಾಲೆ ಶತಮಾನೋತ್ಸವ ಸಮಿತಿ ಅಧ್ಯಕ್ಷರಾಗಿ ಚಂದ್ರಶೇಖರ್‌ ಹೆಗ್ಡೆ ಅವರ ನೇತೃತ್ವದಲ್ಲಿ ಶತಮಾನೋತ್ಸವ ಆಚರಿಸಿದ್ದು ಬರ್ಬೆಟ್ಟು ಗಂಗಾಧರ ಹೆಗ್ಡೆ ಅವರು ರಂಗಮಂದಿರ ನಿರ್ಮಿಸಿ ಕೊಟ್ಟಿದ್ದು ದಾನಿಗಳ ನೆರವಿನಿಂದ ಹಲವಾರು ಅಭಿವೃದ್ಧಿ ಕಾಮಗಾರಿ ನಡೆದಿವೆ.

ಸಾಧಕ ಹಳೆವಿದ್ಯಾರ್ಥಿಗಳು
ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ, ನಿವೃತ್ತ ಸೈನಿಕರಾದ ಅಚ್ಚುತ ಕಾಮತ್‌, ಶ್ರೀಧರ್‌ ಶೆಟ್ಟಿ, ಉದ್ಯಮಿ ಡಜನ್‌ ನಾರಾಯಣ ಶೆಟ್ಟಿ , ದಿವಾಕರ ಶೆಟ್ಟಿ, ಡಾ| ಎಂ.ಎಸ್‌. ರಾವ್‌, ವಾದಿರಾಜ್‌ ರಾವ್‌, ಜಿ.ಪಂ. ಮಾಜಿ ಸದಸ್ಯ ಮಂಜುನಾಥ್‌ ಪೂಜಾರಿ, ಬರ್ಬೆಟ್ಟು ಗಂಗಾಧರ ಶೆಟ್ಟಿ, ಮುದ್ರಾಡಿ ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ ಡಿ. ಪೂಜಾರಿ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರು, ಯೋಧರು, ನೂರಾರು ಸಾಧಕರನ್ನು ನೀಡಿದ ಹೆಮ್ಮೆ ಈ ಶಾಲೆಗೆ ಇದೆ.

Advertisement

ಪ್ರಶಸ್ತಿಗಳು
ತರಕಾರಿ ಕೈತೋಟ ನಿರ್ಮಾಣ, ಶಿಸ್ತುಬದ್ಧ ಶಿಕ್ಷಣಕ್ಕೆ ಉತ್ತಮ ಕನ್ನಡ ಶಾಲೆ ಪ್ರಶಸ್ತಿ, ರಾಜ್ಯಮಟ್ಟದ ನಲಿಕಲಿ ಉತ್ತಮ ಶಾಲೆ ಪ್ರಶಸ್ತಿ, ಈ ಬಾರಿ ಈ ಶಾಲೆಯ ಮುಖ್ಯ ಶಿಕ್ಷಕ ಚಂದ್ರಕಾಂತ್‌ ಅವರಿಗೆ ತಾ| ಸಾಧಕ ಪ್ರಶಸ್ತಿ ಲಭಿಸಿದೆ.

ಗಣ್ಯರ ಭೇಟಿ
ಮಾಜಿ ಮಖ್ಯಮಂತ್ರಿ ಡಾ| ಎಂ. ವೀರಪ್ಪ ಮೊಲಿ , ಶ್ರೀಕಂಠಪ್ಪ, ಮೂಡಬಿದಿರೆ ಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಸ್ವಾಮೀಜಿ, ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತಿತರ ಗಣ್ಯರು ಭೇಟಿ ನೀಡಿದ್ದರು. ಸ್ವಾತಂತ್ರ್ಯ ಹೋರಾಟಗಾರರು 1947ರ ಸ್ವಾತಂತ್ರ ಸಂಗ್ರಾಮದಲ್ಲಿ ಹೋರಾಡಿ 6 ತಿಂಗಳು ಜೈಲುವಾಸ ಅನುಭವಿಸಿದ್ದ ಈ ಶಾಲೆಯ ಹಳೆ ವಿದ್ಯಾರ್ಥಿ ಮುದ್ರಾಡಿ ಮುಟ್ಟಿಕಲ್ಲು ಮನೆ ನಾರಾಯಣ ಶೆಟ್ಟಿ
ಎನ್ನುವುದು ಹೆಮ್ಮೆಯ ಸಂಗತಿ. ಅಲ್ಲದೆ 1940ರಲ್ಲಿ ಸ್ವಾತಂತ್ರ್ಯಹೋರಾಟಗಾರ ಅಮ್ಮೆಂಬಳ ಬಾಳಪ್ಪನವರು ಇಲ್ಲಿ ಹಿಂದಿ ಶಿಕ್ಷಕರಾಗಿ ಸೇವೆ ಸಲ್ಲಿಸಿರುವುದು ವಿಶೇಷ.

ಗುಣಮಟ್ಟದ ಶಿಕ್ಷಕವೃಂದ ಹಾಗೂ ಸಾಧಕ ವಿದ್ಯಾರ್ಥಿಗಳನ್ನು ನೀಡಿದ ಈ ಶಾಲೆಗೆ ಉತ್ತಮ ಪ್ರಶಸ್ತಿ ಬಂದಿದ್ದು ಆಂಗ್ಲ ಮಾಧ್ಯಮ ಶಾಲೆಗಳ ಪ್ರಭಾವವಿದ್ದರೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗದೆ ಶಿಕ್ಷಕರ ಸಹಕಾರ ದಾನಿಗಳ ನೆರವಿನಿಂದ ಶಾಲೆ ಶತಮಾನ ಕಂಡು ಮುನ್ನಡೆಯುತ್ತಿದೆ.
-ಕೆ.ಚಂದ್ರಕಾಂತ , ಮುಖ್ಯ ಶಿಕ್ಷಕರು

1948ರಲ್ಲಿ ನಾನು ಈ ಶಾಲೆಯಲ್ಲಿ ವಿದ್ಯಾರ್ಥಿ ಯಾಗಿದ್ದು ಸ್ವಾತಂತ್ರ್ಯಹೋರಾಟಗಾರರು ಕಲಿತ ಹಾಗೂ ಕಲಿಸಿದ ಶಾಲೆಯಲ್ಲಿ ಓದಿದ್ದಕ್ಕೆ ಹೆಮ್ಮೆ ಅನಿಸುತ್ತಿದೆ. ಸುಮಾರು 40 ವರ್ಷಗಳ ಕಾಲ ವೈದ್ಯನಾಗಿ ಸೇವೆ ಸಲ್ಲಿಸಿ ಜನಸೇವೆ ಮಾಡಲು ನನಗೆ ಈ ಶಾಲೆ ಮೂಲಕಾರಣವಾಗಿದ್ದು ಕನ್ನಡ ಶಾಲೆ ಉಳಿಸಿ ಬೆಳೆಸುವಲ್ಲಿ ಎಲ್ಲರ ಸಹಕಾರ ಅಗತ್ಯ.
– ಡಾ| ಎಂ.ಎಸ್‌. ರಾವ್‌
ಮುದ್ರಾಡಿ

- ಹೆಬ್ರಿ ಉದಯಕುಮಾರ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next