Advertisement
ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸಮಿತಿಯ ಅಧ್ಯಕ್ಷ ಮುದ್ರಾಡಿ ಸಿರಿಬೀಡು ದಿವಾಕರ ಶೆಟ್ಟಿ ಮಾತನಾಡಿ, ಈ ದೇವಸ್ಥಾನದ ಅದಮಾರು ಮಠದ ಅಧೀನದಲ್ಲಿದ್ದು, ಕರ್ನಾಟಕ ಸರಕಾರದ ಮುಜರಾಯಿ ಇಲಾಖೆಯ ಆಡಳಿತಕ್ಕೊಳಪಟ್ಟಿದೆ. ಕಾರಣಿಕ ಕ್ಷೇತ್ರವಾದ ಇದರ ಜೀರ್ಣೋದ್ಧಾರ ನಡೆಯಬೇಕೆಂಬುದು ಭಕ್ತರು ಅಭಿಲಾಷೆ. ಶ್ರೀ ದೇವರ ಆಣತಿಯಂತೆ, ಜೀರ್ಣೋದ್ಧಾರದ ಹೊಣೆಯನ್ನು ನನಗೆ ವಹಿಸಲಾಗಿದೆ. ಈ ಹಿಂದೆ ಕ್ಷೇತ್ರದ ಜೀರ್ಣೋದ್ಧಾರ ನನ್ನ ತಂದೆಯವರ ಮುತುವರ್ಜಿಯಲ್ಲಿ ನಡೆಸಲಾಗಿತ್ತು. ಇದೀಗ ಬಹುಕಾಲದ ಬಳಿಕ ಈ ಸೇವೆ ನನಗೆ ಒದಗಿದೆ. ಹಳ್ಳಿಯಲ್ಲಿ ದೇವಸ್ಥಾನವನ್ನು ನಡೆಸುವುದು ಕಷ್ಟ. ಜೀರ್ಣೋದ್ಧಾರ ಕಾರ್ಯದಲ್ಲಿ ಯಾರಿದ್ದಾರೆ. ಯಾರಿಲ್ಲ ಎನ್ನುವುದು ಮುಖ್ಯವಲ್ಲ. ದೇವರ ಕೆಲಸ ಮಾಡಿಸುವುದು ದೇವರ ಕೈಯಲ್ಲಿದೆ. ಗ್ರಾಮದೇವರನ್ನು ಭಯ-ಭಕ್ತಿಯಿಂದ ಪೂಜಿಸಿದರೆ ಎಲ್ಲರಿಗೂ ಒಳ್ಳೆಯದು. ದೇವಸ್ಥಾನ ಶಿಥಿಲಗೊಂಡಿದ್ದು, ಇದರ ಜೀರ್ಣೋದ್ಧಾರ ಸಮಿತಿಯ ಗೌರವ ಅಧ್ಯಕ್ಷರಾಗಿ ಅದಮಾರು ಮಠದ ಶ್ರೀಗಳು ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ದೇವಸ್ಥಾನ ಜೀರ್ಣೋದ್ಧಾರಗೊಂಡಾಗ ಊರು ಅಭಿವೃದ್ಧಿಯಾಗಿ, ಧರ್ಮ ಜಾಗೃತಿ ಉಂಟಾಗುತ್ತದೆ. ಊರಿನ ಜನತೆಗೆ ದೇವರ ಅನುಗ್ರಹದಿಂದ ಸುಖ, ಶಾಂತಿ ಲಭಿಸುತ್ತದೆ. ಈ ಪುಣ್ಯಕಾರ್ಯಕ್ಕೆ ಜಾತಿ,ಮತ ಮರೆತು ಎಲ್ಲರೂ ಶ್ರಮಿಸೋಣ ಎಂದರು.ಆಶೀರ್ವಚನದ ನುಡಿಯನ್ನಾಡಿದ ಮುದ್ರಾಡಿಯ ಬಕ್ರೆ ಮಠದ ಪುರೋಹಿತರಾದ ಸಂತೋಷ್ ಭಟ್ ಅವರು, ಊರಿನ ಜನರೆಲ್ಲ ಒಟ್ಟಾಗಿ ಸೇರುವುದು ದೇವಸ್ಥಾನದಲ್ಲಿ ಮಾತ್ರ. ದೇವಸ್ಥಾನದಲ್ಲಿ ಪ್ರತಿ ಜಾತಿಯವರಿಗೂ ಸೇವೆ ನೀಡಲು ಅವಕಾಶವಿದೆ. ದೇವಸ್ಥಾನ ಶಿಥಿಲಗೊಂಡು ಬೀಳಬಾರದು. ತಲೆಮಾರುಗಳ ವರೆಗೆ ಉಳಿಯಬೇಕು. ದೇವಸ್ಥಾನ ಜೀರ್ಣೋದ್ಧಾರಗೊಂಡ ಬಳಿಕ 12 ವರ್ಷಗಳಿಗೊಮ್ಮೆ ಬ್ರಹ್ಮಕಲಶ ನಡೆಯುತ್ತಿರಬೇಕು. ಬೆಳಗುಂಡಿಯ ದೇವಸ್ಥಾನ ಸುಮಾರು 300 ವರ್ಷಗಳಷ್ಟು ಪುರಾತನವಾದದ್ದು. ಹಿಂದಿನ ತಲೆಮಾರು ನಡೆಸಿಕೊಂಡು ಬಂದ ಪ್ರವೃತ್ತಿಯನ್ನು ನಾವು ಮುಂದುವರಿಸಬೇಕು. ಪ್ರತಿಯೊಂದು ಊರಿಗೆ ದೇವಸ್ಥಾನದ ಆವಶ್ಯಕತೆಯಿದೆ. ಭಕ್ತರು ಧಾರ್ಮಿಕ ನೆಲೆಯಲ್ಲಿ ಮಾಡಬಹುದಾದ ಕರ್ತವ್ಯವನ್ನು ತಿಳಿಸಿದರು.
Related Articles
Advertisement