Advertisement

ಯತಿಗಳ ಬದಲು ಗೃಹಸ್ಥರಿಂದ ಮುದ್ರಾಂಕನ

12:39 PM Jul 24, 2018 | Karthik A |

ಕಡಬ: ಪ್ರತಿ ವರ್ಷ ಪ್ರಥಮೈಕಾದಶೀ ದಿನದಂದು ನಡೆಯುವ ತಪ್ತ ಮುದ್ರಾಧಾರಣೆ ಸೋಮವಾರ ರಾಮಕುಂಜದ ಈರಕೀ ಮಠದಲ್ಲಿ ಜರಗಿತು. ವೇ|ಮೂ| ವೆಂಕಟರಮಣ ಉಪಾಧ್ಯಾಯರು ತಪ್ತ ಮುದ್ರಾಧಾರಣೆ ನೆರವೇರಿಸಿದರು. ನೂರಾರು ಮಂದಿ ಭಕ್ತರು ಮಠಕ್ಕೆ ಆಗಮಿಸಿ ಮುದ್ರಾಂಕನ ಮಾಡಿಸಿಕೊಂಡರು.

Advertisement

ಈರಕೀ ಮಠದ ವೈಶಿಷ್ಟ್ಯ
ತಪ್ತ ಮುದ್ರಾಧಾರಣೆ ಎನ್ನುವುದು ಎಲ್ಲೆಡೆ ನಡೆಯುತ್ತದೆ. ಆದರೆ, ಈರಕೀ ಮಠದ ಮುದ್ರಾಧಾರಣೆಗೆ ವೈಶಿಷ್ಟ್ಯವಿದೆ. ಬೇರೆಡೆಗಳಲ್ಲಿ ಯತಿಗಳು ಮಾತ್ರ ಮುದ್ರಾಧಾರಣೆ ನಡೆಸುವುದು ಸಂಪ್ರದಾಯ. ಆದರೆ ಈರಕೀ ಮಠದಲ್ಲಿ ಯತಿಗಳ ಬದಲು ಗೃಹಸ್ಥಾಶ್ರಮಿಗಳು ಮುದ್ರಾಂಕನ ಮಾಡುತ್ತಾರೆ.

ಗ್ರಾಮೀಣ ಪ್ರದೇಶವೆನ್ನುವ ಕಾರಣಕ್ಕಾಗಿ ಭಕ್ತರ ಅನುಕೂಲಕ್ಕೆ ಸುಮಾರು 800 ವರ್ಷಗಳ ಹಿಂದೆ ಶ್ರೀ ಮನ್ಮಧ್ವಾಚಾರ್ಯರು ತನ್ನ ಭಕ್ತನಿಗೆ ಮುದ್ರಾಂಕನ ಮಾಡುವ ವಿಶೇಷ ಅಧಿಕಾರ ನೀಡಿದ್ದರು. ನೂರಿತ್ತಾಯ ವಂಶಸ್ಥ ಬ್ರಹ್ಮಶ್ರೀ ವೆಂಕಟರಮಣ ಉಪಾಧ್ಯಾಯರು ಈ ಕಾರ್ಯವನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಿಕೊಂಡು ಬರುತ್ತಿದ್ದಾರೆ.

ರೋಗ ನಿರೋಧಕ ಶಕ್ತಿ ವೃದ್ಧಿ
ಶಂಖ, ಚಕ್ರ ಇತ್ಯಾದಿ ರಚನೆಗಳುಳ್ಳ ಮುದ್ರೆಯನ್ನು ಹೋಮ ಕುಂಡದಲ್ಲಿ ಹಾಕಿ ಬಿಸಿ ಮಾಡಿ ತೋಳು, ಹೊಟ್ಟೆ ಮೊದಲಾದ ಭಾಗಗಳಿಗೆ ಮುದ್ರೆ ಹಾಕಿಸಿಕೊಳ್ಳುವುದೇ ತಪ್ತ ಮುದ್ರಾಧಾರಣೆ. ಇದರಿಂದ ದೇಹದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಎನ್ನುವುದು ನಂಬಿಕೆ. ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ರೋಗ ರುಜಿನಗಳು ಬರಬಾರದೆಂದು ಹೆಚ್ಚಿನ ಜನರು ಈ ರೀತಿ ಮುದ್ರೆ (ತುಳುವಿನಲ್ಲಿ ಸುಡಿ ಇಡುವುದು) ಹಾಕಿಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು.

ಅಷ್ಟಮಠಗಳಿಗೂ ಸಂಬಂಧ
ಶ್ರೀಮನ್ಮಧ್ವಾಚಾರ್ಯರು ಶ್ರೀಕೃಷ್ಣಾಮೃತ ಮಹಾರ್ಣವ ಎನ್ನುವ ದಿವ್ಯ ಗ್ರಂಥದ ಮಂಗಲ ಶ್ಲೋಕವನ್ನು ಇದೇ ಈರಕೀ ಮಠದಲ್ಲಿ ರಚಿಸಿದ್ದರು ಎನ್ನುವ ಉಲ್ಲೇಖವಿದೆ. ಉಡುಪಿಯ ಅಷ್ಟಮಠಗಳ ಯತಿಗಳು ಪರ್ಯಾಯಕ್ಕೆ ಮೊದಲು ಈರಕೀ ಮಠದಲ್ಲಿ ಶ್ರೀ ಕೇಶವ ದೇವರಿಗೆ ಅರ್ಚನೆ ಸಲ್ಲಿಸಲು ಆಗಮಿಸುವುದು ಸಂಪ್ರದಾಯ.

Advertisement

— ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next