ಮುಧೋಳ: 2007, ಜ.23ರಂದು ಸಿಎಂ ಕುಮಾರಸ್ವಾಮಿ, ತಾಲೂಕಿನ ಇಂಗಳಗಿಯ ಕುಟುಂಬವೊಂದರ ಮನೆಯಲ್ಲಿ ವಾಸ್ತವ್ಯ ಮಾಡಿದ್ದರು. ಮದ್ದಿಲ್ಲದ ರೋಗ ಹೊಂದಿದ್ದ ಆ ಕುಟುಂಬಕ್ಕೆ ಬದುಕಿಗೆ ಜೀವನಾಧಾರದ ಜತೆಗೆ ಇಡೀ ಗ್ರಾಮದ ಅಭಿವೃದ್ಧಿಗೆ ಅನುದಾನ ಹರಿದು ಬರುತ್ತದೆ ಎಂದು ನಂಬಿದ್ದರು. ಆದರೆ, ಅದೆಲ್ಲ ಆಗಲಿಲ್ಲ. ಮದ್ದಿಲ್ಲದ ರೋಗದ ಕುರಿತು ಊರ ಜನರಿಗೆ ಗೊತ್ತಿರಲಿಲ್ಲ. ಸಿಎಂ ಗ್ರಾಮ ವಾಸ್ತವ್ಯದಿಂದ ಅದು ಜಗತ್ತಿಗೇ ಗೊತ್ತಾಯಿತು. ಹೀಗಾಗಿ ಆ ಕುಟುಂಬ ಮಾನಸಿಕ ಹಿಂಸೆ ಅನುಭವಿಸಿ ಗ್ರಾಮವನ್ನೇ ತೊರೆದು, ಪಕ್ಕದ ಊರಿಗೆ ಹೋಗಿ ನೆಲೆ ಕಂಡುಕೊಂಡಿತು.
Advertisement
ಇಂಗಳಗಿಯ ವಾಸ್ತವ್ಯದ ವೇಳೆ ಮನೆಯ ಮುಖ್ಯಸ್ಥನಿಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಹಾಗೂ ಕುಟುಂಬಕ್ಕೆ ಧನಸಹಾಯ ಮಾಡುವುದಾಗಿ ಹೇಳಿ ಹೋದ ಸಿಎಂ, ಆನಂತರ ಈ ಬಗ್ಗೆ ಕ್ಯಾರೇ ಎನ್ನಲಿಲ್ಲ. ಇದಕ್ಕಾಗಿ ಆ ಕುಟುಂಬ ಬೆಂಗಳೂರಿನ ಮುಖ್ಯಮಂತ್ರಿಗಳ ಕಚೇರಿ, ಮನೆಗೆ ಎಡತಾಕಿದರೂ ಆ ಕುಟುಂಬಕ್ಕೇನೂ ನೆರವು ದೊರೆಯಲಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
Related Articles
Advertisement
ಬಿಎಸ್‌ವೈ ಕೂಡ ವಾಸ್ತವ್ಯ ಮಾಡಿದ್ದರು!ಇನ್ನು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ತಾಲೂಕಿನ ಶಿರೋಳ ಗ್ರಾಮದ ಸಾವಯವ ಕೃಷಿಕ ಗಣಾಚಾರಿ ಅವರ ತೋಟದಲ್ಲಿ ಒಂದು ಇಡೀ ದಿನ ವಾಸ್ತವ್ಯ ಇದ್ದರು. ಅಂದು ಸಾವಯಕ ಕೃಷಿಕರೊಂದಿಗೆ ಸಂವಾದ, ರೈತ ಬಜೆಟ್‌ಗೆ ಸಲಹೆ ಪಡೆದಿದ್ದರು. ಆಗ ಶಿರೋಳ ಗ್ರಾಮಸ್ಥರು ಸಲ್ಲಿಸಿದ್ದ ಮನವಿಗಳ ಪೈಕಿ ಸರ್ಕಾರಿ ಆಸ್ಪತ್ರೆ, ಗ್ರಾಮದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಾಗಿತ್ತು.