ಮುಡಿಪು: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಾರು ಢಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಮುಡಿಪು ಜಂಕ್ಷನ್ ನಲ್ಲಿ ಶುಕ್ರವಾರ ಮಧ್ಯಾಹ್ನ ವೇಳೆ ಸಂಭವಿಸಿದೆ.
ಬಂಟ್ವಾಳ ಕರೋಪಾಡಿ ನಿವಾಸಿ ಸಿದ್ದಿಖ್ (48 ವ) ಮೃತಪಟ್ಟವರು. ಗಲ್ಫ್ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದ ಅವರು ಎರಡು ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದರು.
ಸದ್ಯ ದೇರಳಕಟ್ಟೆ ಫ್ಲ್ಯಾಟ್ ನಲ್ಲಿ ನೆಲೆಸಿರುವ ಸಿದ್ದಿಖ್ ಶುಕ್ರವಾರದ ಜುಮಾ ನಮಾಝ್ ಅನ್ನು ಕರೋಪಾಡಿ ಮಸೀದಿಯಲ್ಲಿ ನಡೆಸಿದ್ದರು. ಅಲ್ಲಿಂದ ವಾಪಸ್ಸು ದೇರಳಕಟ್ಟೆಗೆ ಬರುವ ದಾರಿಮಧ್ಯೆ ಮುಡಿಪು ಜಂಕ್ಷನ್ ನಲ್ಲಿ ಇಳಿದು, ಎಟಿಎಂ ಹಣ ಡ್ರಾ ಮಾಡಿದ್ದಾರೆ. ಅಲ್ಲಿಂದ ವಾಪಸ್ಸು ರಸ್ತೆ ದಾಟಿ ಬಸ್ಸನ್ನೇರಲು ಹೊರಟಾಗ ಮಂಗಳೂರು ಕಡೆಗೆ ಚಲಿಸುತ್ತಿದ್ದ ಸೂರಜ್ ನಾಥ್ ಎಂಬವರು ಚಲಾಯಿಸುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಪರಿಣಾಮ ತಲೆ ಭಾಗಕ್ಕೆ ಗಂಭೀರ ಗಾಯಗೊಂಡ ಸಿದ್ದಿಖ್ ಅವರನ್ನು ನಾಟೆಕಲ್ ಕಣಚೂರು ಆಸ್ಪತ್ರೆಗೆ ದಾಖಲಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಸಿದ್ದಿಖ್ ಮುಂದಿನ ವಾರದಲ್ಲಿ ಮತ್ತೆ ಉದ್ಯೋಗ ನಿಮಿತ್ತ ಗಲ್ಫ್ ರಾಷ್ಟ್ರಕ್ಕೆ ಮರಳುವವರಿದ್ದರು. ಮೃತರು ತಂದೆ, ತಾಯಿ, ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2022ರ ಡಿ.27 ರಂದು ಪಜೀರು ಸೇನೆರೆಬೈಲು ನಿವಾಸಿ ಕಾರ್ತಿಕ್ (12) ಎಂಬ ಬಾಲಕ ಮೃತಪಟ್ಟಿದ್ದ. ಮುಡಿಪು ಜ್ಯೂನಿಯರ್ ಕಾಲೇಜು ಎದುರುಗಡೆ ರಸ್ತೆ ದಾಟುವ ಸಂದರ್ಭ ಅಪಘಾತ ಸಂಭವಿಸಿತ್ತು. ಇದೀಗ ಮತ್ತೆ ಅದೇ ಸ್ಥಳದಲ್ಲಿ ಅಪಘಾತ ಸಂಭವಿಸಿದೆ. ಮುಡಿಪು ಭಾಗದಲ್ಲಿ ಫುಟ್‍ಪಾತನ್ನು ಅಂಗಡಿ ಮಾಲೀಕರು ಅಕ್ರಮಿಸಿದ್ದು, ಹೀಗಾಗಿ ಪಾದಚಾರಿಗಳು ರಸ್ತೆ ಮಧ್ಯೆ ನಡೆದುಕೊಂಡು ಹೋಗುವಂತಹ ಸ್ಥಿತಿಯಿದ್ದು, ಇದರಿಂದಾಗಿ ಅಪಘಾತಗಳು ನಿರಂತರವಾಗಿ ಸಂಭವಿಸುತ್ತಿವೆ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.