Advertisement

ಪುಲ್ವಾಮಾ ವೀರಯೋಧರಿಗೆ ನುಡಿ ನಮನ

12:54 PM Feb 15, 2020 | Naveen |

ಮೂಡಿಗೆರೆ: ಕಳೆದ ವರ್ಷ ಫೆ.14ರಂದು ನಡೆದ ಪುಲ್ವಾಮಾ ದಾಳಿಯಲ್ಲಿ ವೀರಮರಣ ಹೊಂದಿದ 40 ಸೈನಿಕರಿಗೆ ಪಟ್ಟಣದಲ್ಲಿ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶುಕ್ರವಾರ ಪಟ್ಟಣದ ಚೈತನ್ಯ ಮಿನಿ ಹಾಲ್‌ನಲ್ಲಿ ಹರಿ ಓಂ ಸೇವಾ ಸಂಘದ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Advertisement

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಯೋಧರ ಸಂಘದ ಅಧ್ಯಕ್ಷ ಮಗ್ಗಲಮಕ್ಕಿ ಸುಂದ್ರೇಶ್‌, ಯಾವುದೇ ಯೋಧ ತನ್ನ ಜೀವನದ ಎಲ್ಲಾ ಆಸೆಗಳನ್ನು ಬಿಟ್ಟು ಸೇನೆಗೆ ಸೇರುತ್ತಾನೆ. ಹೊರಗಿನ ಪ್ರಪಂಚದ ಅರಿವು ಆತನಿಗೆ ಇರುವುದಿಲ್ಲ. ಸರಿಯಾದ ಸಮಯಕ್ಕೆ ಊಟ-ಉಪಚಾರದ ಮಾತುಗಳು ಕೇಳಲು ಸಾಧ್ಯವಿಲ್ಲ. ಆದರೆ ಪ್ರತಿಯೊಬ್ಬ ಯೋಧನ ಮನಸ್ಸಿನಲ್ಲಿ ದೇಶ ಕಾಯುವ ಯೋಚನೆ ಮಾತ್ರ ಸುಳಿದಾಡುತ್ತಿರುತ್ತದೆ ಎಂದರು.

ಗಡಿಯಲ್ಲಿ ಗುಂಡಿನ ದಾಳಿ ಇಲ್ಲದ ದಿನಗಳನ್ನು ಕಾಣಲು ಸಾಧ್ಯವಿಲ್ಲ. ಯಾವುದಾದರೂ ಯೋಧನಿಗೆ ಅನಾಹುತಗಳಾದಲ್ಲಿ ಮಾತ್ರ ಹೊರಗಿನ ಪ್ರಪಂಚಕ್ಕೆ ತಿಳಿಯುತ್ತದೆಯೇ ಹೊರತು ಬೇರೆ ಯಾವ ಮಾಹಿತಿಗಳೂ ಹೊರಗಿನ ಪ್ರಪಂಚಕ್ಕೆ ತಿಳಿಯುವುದಿಲ್ಲ. ಸೈನಿಕರಿಗೆ ಜನರು ನೀಡುವ ಗೌರವ ಯುವಕರಿಗೆ ಸೇನೆಗೆ ಸೇರಲು ಹುಮ್ಮಸ್ಸು ನೀಡುತ್ತದೆ. ಇದು ಹೀಗೆಯೇ ಮುಂದುವರೆಯಲಿ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಣಚೂರ್‌ ವಿನೋದ್‌ ಅವರು, ಹಲವು ರಾಜಕೀಯ ಪಕ್ಷಗಳು ವೀರಯೋಧರ ಸಾವಿನ ವಿಚಾರಗಳನ್ನು ರಾಜಕೀಯ ಚಟುವಟಿಕೆಗಳಿಗೆ ವಸ್ತುಗಳನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಯಾವುದೇ ಕುಟುಂಬ ತಮ್ಮ ಮನೆಯ ಸದಸ್ಯನೊಬ್ಬನನ್ನು ಕಾಣದ ಊರಿಗೆ ಅದರಲ್ಲೂ ಸೇನೆಗೆ ಕಳುಹಿಸಿಕೊಡುವಾಗ ಅನುಭವಿಸುವ ನೋವಿನ ಬೆಲೆ ಇಂತಹವರಿಗೆ ಅರ್ಥವಾಗುವುದಿಲ್ಲ. ಅದರಲ್ಲೂ ತಮ್ಮ ಮನೆಯ ಸದಸ್ಯ ವೀರ ಮರಣ ಹೊಂದಿದ ವಿಚಾರ ತಿಳಿದಾಗ ನೋವಿನ ಪ್ರಮಾಣ ಹೆಚ್ಚಾಗಿ ಇರುತ್ತದೆ. ದಯವಿಟ್ಟು ಸಾವಿನಲ್ಲಿ ರಾಜಕಾರಣ ಮಾಡುವುದನ್ನು ನಿಲ್ಲಿಸಿ, ಸೈನಿಕರ ಕುಟುಂಬಕ್ಕೆ ಬೆಲೆ ನೀಡುವ ಅಭ್ಯಾಸವನ್ನು ರಾಜಕೀಯ ನಾಯಕರು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪುಲ್ವಾಮಾ ದಾಳಿಯಲ್ಲಿ ವೀರಮರಣ ಹೊಂದಿದ 40 ಜನ ಯೋಧರ ಹೆಸರುಗಳನ್ನು ಹೇಳಿ ಅವರ ಸೇವೆಯನ್ನು ಸ್ಮರಿಸಲಾಯಿತು. ನಿಧನರಾದ ಯೋಧರ ಕುಟುಂಬಗಳ ಇಂದಿನ ಪರಿಸ್ಥಿತಿ ಅವಲೋಕಿಸಲಾಯಿತು. ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಕೋರಿ ನಮನ ಸಲ್ಲಿಸಿ, ಮೌನಾಚರಣೆ ಆಚರಿಸಲಾಯಿತು. ನಿವೃತ್ತ ಯೋಧರಾದ ಮಗ್ಗಲಮಕ್ಕಿಯ ಎಂ.ಡಿ.ಉಮೇಶ್‌, ಕೆಲ್ಲೂರು ರಾಜಶೇಖರ್‌ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಕಣಚೂರು ಆನಂದ್‌ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next