ಮೂಡಿಗೆರೆ: ಚಂಪಾ ಷಷ್ಠಿಯ ದಿನ ತಾಲೂಕಿನ ಗೋಣಿಬೀಡು ಅಗ್ರಹಾರದ ಸುಬ್ರಹ್ಮಣ್ಯ ದೇವಾಲಯದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ.
ಸುಬ್ರಹ್ಮಣ್ಯ ಷಷ್ಠಿಯ ದಿನ ಸಾವಿರಾರು ಭಕ್ತರಿರುವಾಗಲೇ ನಾಗರಹಾವೊಂದು ದೇವಾಲಯಕ್ಕೆ ಆಗಮಿಸಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೋಮವಾರ ದೇವಾಲಯದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಸಾರ್ವಜನಿಕರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಆದರೆ, ಜನಸಾಗರದ ಮಧ್ಯೆ ನಾಗರಹಾವೊಂದು ತನ್ನ ನೆಚ್ಚಿನ ದೈವ ಆದಿ ಸುಬ್ರಹ್ಮಣ್ಯೇಶ್ವರನ ದರ್ಶನಕ್ಕಾಗಿ ಆಗಮಿಸಿದಾಗ ಭಕ್ತರು ದಂಗಾದರು. ನಂತರ ಸುಬ್ರಹ್ಮಣ್ಯ ಸ್ವಾಮಿ ಹಾಗೂ ನಾಗದೇವನಿಗೂ ಉಘೇ ಉಘೇ ಎನ್ನುತ್ತ ಕೈಮುಗಿದು ನಿಂತರು.
ಪ್ರತಿ ವರ್ಷ ಸುಬ್ರಹ್ಮಣ್ಯ ಷಷ್ಠಿಯ ದಿನ ನಾಗರಹಾವು ದೇವಾಲಯಕ್ಕೆ ಆಗಮಿಸುವ ಸಂಪ್ರದಾಯವಿದೆ. ಅದೇ ರೀತಿ ಈ ವರ್ಷವೂ ಕೂಡ ನಾಗರಹಾವು ಬಂದಿತ್ತು ಎನ್ನಲಾಗಿದೆ. ಆದರೆ, ಈ ಬಾರಿ ಆಗಮಿಸಿದ ಹಾವಿನ ಹೆಡೆಯ ಭಾಗದಲ್ಲಿ ವಿಭೂತಿ ಪಟ್ಟೆ ಕಂಡು ಎಲ್ಲರಿಗೂ ಅಚ್ಚರಿಯಾಗಿದೆ.
ಸರಸರನೆ ಹರಿದಾಡಿಕೊಂಡು ಬಂದ ನಾಗರ ಕೆಲವೇ ಕ್ಷಣಗಳಲ್ಲಿ ವಾಪಸ್ ಹೊರಟುಹೋಗಿದೆ. ವಿಷಯ ತಿಳಿಯುತ್ತಿದ್ದಂತೆ ಈ ವಿಶೇಷವನ್ನು ಕಾಣಲು ಸಾರ್ವಜನಿಕರು ಆಗಮಿಸಿದರಾದರೂ ನಂತರ ಆಗಮಿಸಿದ ಭಕ್ತಾದಿಗಳಿಗೆ ನಾಗರ ದರ್ಶನ ವಾಗಿಲ್ಲ. ಈ ಅಚ್ಚರಿಯ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಾವು ಸಾಧಾರಣ ಅಳತೆಯುಳ್ಳದ್ದಾಗಿದ್ದು, ತುಂಬಾ ಚಟುವಟಿಕೆಯದ್ದಾಗಿತ್ತು. ಇದು ದೈವಕ್ಕೆ ಸಂಬಂಧಿಸಿದ ಹಾವು ಎನ್ನುತ್ತ, ಇದನ್ನು ಬೇರೆ ಯಾರಾದರೂ ಮಾಡಿದ್ದಾರೆ ಎನ್ನಲು, ಇಂತಹ ಚುರುಕಾದ ಹಾವಿಗೆ ವಿಭೂತಿ ಹಚ್ಚಿ ದೇವಸ್ಥಾನಕ್ಕೆ ಬರುವಂತೆ ಹೇಳುವ ಪರಿಣಿತರು ಸ್ಥಳೀಯವಾಗಿ ಯಾರೂ ಇಲ್ಲ ಎನ್ನುವುದು ಭಕ್ತರ ವಾದ. ಹಾವಿನ ಹೆಡೆಯ ಮೇಲ್ಭಾಗದಲ್ಲಿ ಮೂರು ಬೆರಳಿನಲ್ಲಿ ಹಚ್ಚಿದ ವಿಭೂತಿ ಪಟ್ಟೆಯಂತೆ ಇರುವ ಚಿತ್ರ ಚರ್ಮದ ಒಳಭಾಗದಲ್ಲಿ ಇರುವುದು ಕಂಡುಬಂದಿದೆ ಎನ್ನಲಾಗಿದೆ.