ಮೂಡಿಗೆರೆ: ನೆರೆ ನಿರಾಶ್ರಿತರ ಪುನರ್ವಸತಿಗೆ ತಾಲೂಕಿನಲ್ಲಿ 374 ಜಾಗ ಗುರುತಿಸಲಾಗಿದೆ. ನಿರಾಶ್ರಿತರ ಸ್ಥಳಾಂತರ ಅನಿವಾರ್ಯವಾದರೆ ಈ ಜಾಗ ಬಳಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಗುರುವಾರ ತಾಲೂಕಿನ ಬಿದರಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ, ನಿರಾಶ್ರಿತರ ಅಹವಾಲು ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಪರಿಹಾರ ಒದಗಿಸಲು ತಕ್ಷಣವೇ 10 ರಿಂದ 15 ಕೋಟಿ ರೂ. ಬಿಡುಗಡೆ ಮಾಡಲಾಗುವುದು. ಕೇಂದ್ರದಿಂದ 4-5 ದಿನದಲ್ಲಿ ಹಣ ಬಿಡುಗಡೆಯಾಗುವ ಭರವಸೆಯಿದ್ದು, ಹಣ ಬಂದ ಕೂಡಲೇ ಬೆಳೆ ಪರಿಹಾರ ನೀಡಲಾಗುವುದು ಎಂದರು.
ನಿರಾಶ್ರಿತರ ಕೇಂದ್ರದಲ್ಲಿರುವ ಮಕ್ಕಳ ಚಿಕಿತ್ಸೆಗೆ ಶುಕ್ರವಾರದಿಂದ ಖಾಸಗಿ ಮಕ್ಕಳ ತಜ್ಞ ವೈದ್ಯರನ್ನು ನಿಯೋಜಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳಲಾಗುವುದು. ಮಕ್ಕಳ ಶಾಲಾ ಪುಸ್ತಕ, ಬ್ಯಾಗ್, ಸಮವಸ್ತ್ರ ಸಹಿತ ಅಗತ್ಯ ಪರಿಕರಗಳನ್ನು ಸರಕಾರದಿಂದಲೇ ನಿರಾಶ್ರಿತರ ಮಕ್ಕಳಿಗೆ ಕಲ್ಪಿಸಲಾಗುವುದು. ನಿರಾಶ್ರಿತರ ಮಕ್ಕಳು ಶಾಲೆಗೆ ಹೋಗದಿರುವುದರಿಂದ ಈ ಸಾಲಿನ ಪರೀಕ್ಷೆಯಲ್ಲಿ ಅನುತ್ತೀರ್ಣ ಮಾಡದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಸಚಿವರನ್ನು ಕಂಡ ಕೂಡಲೇ ನಿರಾಶ್ರಿತರು ಒಬ್ಬೊಬ್ಬರಾಗಿ ತಮ್ಮ ಅಹವಾಲು ಹೇಳಿಕೊಂಡರು. ಬಳಿಕ ಸಚಿವರು ಮಲೆಮನೆ ಮತ್ತು ಮದುಗುಂಡಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವೇಳೆ ಶಾಸಕ ಎಂ.ಪಿ.ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಮಾಜಿ ಸಚಿವ ಡಿ.ಎನ್.ಜೀವರಾಜ್, ತಾಪಂ ಕೆ.ಸಿ.ರತನ್, ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್, ಜಿಪಂ ಸಿಇಒ ಅಶ್ವತಿ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‌ಕುಮಾರ್, ಕಾಂಗ್ರೆಸ್ ಮುಖಂಡ ಬಿ.ಎಸ್.ಜಯರಾಂ, ಜಿಪಂ ಸದಸ್ಯೆ ಸುಧಾ ಯೋಗೇಶ್, ತಾಪಂ ಸದಸ್ಯೆ ಭಾರತೀ ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.