Advertisement

ಅಕಾಲಿಕ ಮಳೆ: ಅನ್ನದಾತರಲ್ಲಿ ಮತ್ತೆ ಆತಂಕ

03:21 PM Dec 28, 2019 | |

ಮೂಡಿಗೆರೆ: ಪಟ್ಟಣದ ಸುತ್ತಮುತ್ತ ಗುರುವಾರ ರಾತ್ರಿ ಸುರಿದ ಅಕಾಲಿಕ ಮಳೆಯಿಂದಾಗಿ ಕೃಷಿಕರು ಆತಂಕಕ್ಕೀಡಾಗುವಂತಹ ಸ್ಥಿತಿ ಉಂಟಾಗಿದೆ.

Advertisement

ಗುರುವಾರ ಸಂಜೆ 6.30ರ ಸುಮಾರಿಗೆ ಸಣ್ಣದಾಗಿ ಪ್ರಾರಂಭಗೊಂಡ ಮಳೆ, ಏಕಾಏಕಿ ಬಿರುಸು ಪಡೆದು ರಾತ್ರಿ 8 ಗಂಟೆ ವರೆಗೂ ಸುರಿಯಿತು. ಹಾಂದಿ, ಮಾಕೋನಹಳ್ಳಿ, ಬಿದಿರಹಳ್ಳಿ, ಹ್ಯಾಂಡ್‌ ಪೋಸ್ಟ್‌, ಗಂಗನಮಕ್ಕಿ, ಬಡವನ ದಿಣ್ಣೆ, ಮುಗ್ರಹಳ್ಳಿ ಭಾಗಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿತ್ತು. ಶುಕ್ರವಾರ ಸಂಜೆ ವೇಳೆಗೆ ಪುನಃ ಮೋಡ ಕವಿದ ವಾತಾವರಣ ಸೃಷ್ಟಿಯಾಗಿ ಮತ್ತೆ ಮಳೆ ಬೀಳಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ, ಮಳೆ ಬಾರದೆ ಸ್ವಲ್ಪ ಮಟ್ಟಿಗೆ ರೈತರ ಆತಂಕವನ್ನು ದೂರ ಮಾಡಿತು.

ಬೆಳೆಗಾರರು ಕಂಗಾಲು: ಏಕಾಏಕಿ ಮಳೆ ಸುರಿದ ಕಾರಣ ಕಣದಲ್ಲಿ ಒಣಗಲು ಹಾಕಿದ್ದ ಬಹುತೇಕ ಕಾಫಿ ಬೀಜಗಳು ನೆನೆದು ತೊಪ್ಪೆಯಾಗಿತ್ತು. ಮಳೆ ಬರುವ ಮುನ್ಸೂಚನೆ ಇಲ್ಲದೇ ಇದ್ದುದರಿಂದ ಬಹುತೇಕ ಕೃಷಿಕರು ಕಾಫಿ ಬೀಜಗಳನ್ನು ಕಣದಲ್ಲಿಯೇ ರಾಶಿ ಮಾಡಿದ್ದರು. ಆದರೆ, ಮಳೆಯಿಂದ ಬಹುತೇಕ ಒಣಗಿದ್ದ ಕಾಫಿ ಬೀಜಗಳು ನೆನೆದು ಬೆಳೆಗಾರರನ್ನು ಆತಂಕಕ್ಕೀಡು ಮಾಡಿತು. ಭತ್ತದ ಗದ್ದೆಗಳಲ್ಲಿ ಪೈರು ಕೊಯ್ಲು ಮಾಡಿ ಒಣಗಲು ಬಿಟ್ಟಿದ್ದ ಭತ್ತದ ತೆನೆಗಳು ಕೂಡ ಸಂಪೂರ್ಣವಾಗಿ ನೆನೆದಿದ್ದು, ಭತ್ತದ ಕಾಳುಗಳು ಗದ್ದೆಯಲ್ಲಿಯೇ ಉದುರುವ ಭೀತಿ ಎದುರಾಗಿದೆ.

ಡಿಸೆಂಬರ್‌ನಲ್ಲಿ ಬಹುತೇಕ ಭತ್ತದ ಗದ್ದೆಗಳು ಕೊಯ್ಲಿಗೆ ಬಂದಿರುತ್ತವೆ. ಹಲವರು ಭತ್ತದ ತೆನೆಯನ್ನು ಕೊಯ್ಲು ಮಾಡಿ ಒಣಗಲು ಗದ್ದೆಗಳಲ್ಲಿ ಬಿಟ್ಟಿದ್ದರೆ, ಇನ್ನು ಕೆಲವರು ಕಣಗಳಿಗೆ ಹೊತ್ತು ರಾಶಿ ಹಾಕಿ ಸಂಸ್ಕರಣೆ ಮಾಡಿದ್ದರು. ಆದರೆ, ವರ್ಷ ಪೂರ್ತಿ ಕಷ್ಟಪಟ್ಟ ರೈತನ ಶ್ರಮವನ್ನು ಒಂದೇ ಗಂಟೆಯಲ್ಲಿ ಮಳೆರಾಯ ಹಾಳುಗೆಡವಿದ್ದಾನೆ.

ಕಾಫಿ ತೋಟಗಳಲ್ಲಿ ಕಾಫಿ ಹಣ್ಣುಗಳು ಉದುರುವ ಭೀತಿಯಲ್ಲಿದ್ದು,
ಬೆಳೆಗಾರರು ಬೇಗನೆ ಕಟಾವು ಮಾಡುವ ಯೋಜನೆಯಲ್ಲಿದ್ದಾರೆ. ಈ ಬಾರಿಯ ಮಳೆಗಾಲದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಫಸಲು ನಾಶ ಮಾಡಿಕೊಂಡಿದ್ದ ರೈತರು ಇದೀಗ ಬೀಳುತ್ತಿರುವ ಅಕಾಲಿಕ ಮಳೆಯಿಂದ ಮತ್ತೆ ಚಿಂತೆಗೀಡಾಗಿದ್ದಾರೆ. ಒಂದು ಬಾರಿ ಬೆಳೆ ಕೊಯ್ಲು ಮಾಡಿ ಕೆಲಸ ಮುಗಿಸಿದರೆ ಸಾಕು ಎನ್ನುವ ಸ್ತಿತಿಗೆ ಬಂದು ತಲುಪಿದ್ದಾರೆ. ಅಡಕೆ ಬೆಳೆಗಾರರಿಗೂ ಇದೇ ಪರಿಸ್ಥಿತಿ ಎದುರಾಗಿದ್ದು, ಅಡಕೆ ಕೊಯ್ಲಿನ ಗುತ್ತಿಗೆ ಪಡೆದವರ ಪರಿಸ್ಥಿತಿ ಶೋಚನೀಯವಾಗಿದೆ ಎಂದು ಕಾಳೇಗೌಡ ಅವರು ಆತಂಕ ವ್ಯಕ್ತಪಡಿಸಿದರು.

Advertisement

ಈ ಬಾರಿ ಅರೇಬಿಕ ಕಾಫಿ ಹಾಗೂ ಭತ್ತದ ಗದ್ದೆಗಳಿಗೆ ಅಪಾರ ಪ್ರಮಾಣದ ಹಾನಿ ಉಂಟಾಗುವ ನಿರೀಕ್ಷೆ ಇದ್ದು, ಮಲೆನಾಡಿನ ರೈತರಿಗೆ ಅಗ್ನಿ ಪರೀಕ್ಷೆ ಎಂದೇ ಹೇಳಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next