Advertisement

ಮೂಡಿಗೆರೆ ಎಂಜಿಎಂ ಆಸ್ಪತ್ರೆಯಲ್ಲಿ ಕೊರೊನಾ ವಾರ್ಡ್‌

05:19 PM Mar 16, 2020 | Naveen |

ಮೂಡಿಗೆರೆ: ಕೊರೊನಾ ವೈರಸ್‌ ತಡೆಗಟ್ಟುವ ಹಾಗೂ ಮುಂಜಾಗ್ರತ ಕ್ರಮವಾಗಿ ಪಟ್ಟಣದ ಮಹಾತ್ಮ ಗಾಂಧಿ  ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗಾಗಿ ಪ್ರತ್ಯೇಕ ವಾರ್ಡ್‌ ಸಿದ್ಧಪಡಿಸಲಾಗಿದೆ.

Advertisement

ಪಟ್ಟಣದ ಮಹಾತ್ಮ ಗಾಂಧಿ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೈಂಗೊಡಿರುವ ಸಿದ್ಧತೆ ಕುರಿತು “ಉದಯವಾಣಿ’ಯೊಂದಿಗೆ ಮಾತನಾಡಿದ ತಾಲೂಕು ವೈದ್ಯಾಧಿಕಾರಿ ಡಾ|ಸುಂದ್ರೇಶ್‌ ಅವರು, ಸರ್ಕಾರದ ಆದೇಶಕ್ಕೆ ಅನುಗುಣವಾಗಿ ಆಸ್ಪತ್ರೆಯಲ್ಲಿ ಒಂದು ವಾರ್ಡ್‌ ಅನ್ನು ವಿಶೇಷವಾಗಿ ಸಿದ್ಧಪಡಿಸಿ ಮೀಸಲಿಡಲಾಗಿದೆ. ಕೊರೊನಾಗೆ ಸದ್ಯಕ್ಕೆ ಸೂಕ್ತ ಚಿಕಿತ್ಸೆ ಇಲ್ಲವಾದರೂ ಸಹ ಸಂಬಂಧಪಟ್ಟ ಔಷಧಿಗಳನ್ನು, ಚಿಕಿತ್ಸೆಗೆ ಬೇಕಾದ ಸರ್ವವ್ಯವಸ್ಥೆ ಮಾಡಿಟ್ಟುಕೊಳ್ಳಲಾಗಿದೆ. ಕೊರೊನಾ ಪೀಡಿತ ಎಂದು ಆರೋಪ ಮಾಡಲಾಗಿದ್ದ ವ್ಯಕ್ತಿಯ ಮನೆ ಹಾಗೂ ಸುತ್ತಮುತ್ತಿನವರನ್ನು ತಪಾಸಣೆ ಮಾಡಿ ನಿಗಾ ವಹಿಸಲಾಗಿದೆ.

ಆಸ್ಪತ್ರೆಯ ಎಲ್ಲ ಸಿಬ್ಬಂದಿಗಳಿಗೆ ರಜೆ ರದ್ದುಪಡಿಸಲಾಗಿದೆ. ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗಬಾರದು. ಎನೇ ಅನುಮಾನಗಳಿದ್ದರೂ ಕೂಡಲೇ ಆಸ್ಪತ್ರೆಯ ಆಡಳಿತ ಮಂಡಳಿಯನ್ನು ಸಂಪರ್ಕ ಮಾಡಬೇಕು. ಯಾವುದಾದರೂ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಅವರಿಂದ ಸಾಧ್ಯವಾದಷ್ಟು ಅಂತರ ಕಾಯ್ದುಕೊಂಡು ಆರೋಗ್ಯ ಅಧಿಕಾರಿಗಳಿಗೆ ಅಥವಾ ಪೊಲೀಸರಿಗೆ ಸುದ್ದಿ ಮುಟ್ಟಿಸಬೇಕು ಎಂದು ಮನವಿ ಮಾಡಿದರು.

ತಾಲೂಕಿನ ಬಹುತೇಕ ಸಭೆ ಸಮಾರಂಭಗಳು ಕಳೆಗುಂದಿವೆ. ಮದುವೆ, ನಾಮಕರಣ, ಗೃಹ ಪ್ರವೇಶಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಅಂಗಟಿ ಮುಂಗಟ್ಟುಗಳು ಗ್ರಾಹಕರಿಲ್ಲದೆ ಪರದಾಡುವ ಸ್ಥಿತಿ ತಲುಪಿವೆ. ಅಷ್ಟೇನು ಮಹತ್ವವಿಲ್ಲದ ಕಛೇರಿಗಳ ಅಂಗಡಿಗಳಿಗೆ ಬೀಗ ಹಾಕಲಾಗಿದೆ. ಯಾವುದೇ ಸಭೆ ಸಮಾರಂಭಗಳಿಗೆ ಜನರು ಕೊರೊನಾ ಭೀತಿಯ ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ.

ರಸ್ತೆ ಬದಿಯ ಅಂಗಡಿಗಳು ಬಹುತೇಕ ಕಾರ್ಯನಿರ್ವಹಿಸುತ್ತಿಲ್ಲ. ಹೋಟೇಲ್‌ಗ‌ಳು ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿವೆ. ಬೇಕರಿ, ಐಸ್‌ ಕ್ರೀಂ ವ್ಯಾಪಾರ ನೆಲಕಚ್ಚಿವೆ. ಸಂತೆ ದಿನವಾದ ಶುಕ್ರವಾರದಂದು ಸಂತೆ ಸಹಜವಾಗಿ ನಡೆಯುವಲ್ಲಿ ಯಶಸ್ವಿಯಾಯಿತು.

Advertisement

ರಾಜ್ಯ ಸರ್ಕಾರವು ಶಾಲಾ ಮಕ್ಕಳಿಗೆ ರಜೆ ಘೋಷಿಸಿ, ಯಾವುದೇ ಸಾರ್ವಜನಿಕ ಸಮಾರಂಭಗಳನ್ನು ನಡೆಸದಂತೆ ಕಟ್ಟುನಿಟ್ಟಿನ ಆದೇಶ ನೀಡಿದ ಸಂದರ್ಭದಲ್ಲಿ, ತಾಲೂಕಿನಾದ್ಯಂತ ಸರ್ಕಾರದ ನಿರ್ಧಾರಕ್ಕೆ ಪ್ರಶಂಸೆ ವ್ಯಕ್ತವಾಯಿತು. ಭಾನುವಾರದಂದು ಪಟ್ಟಣದ ತತ್ಕೊಳ ರಸ್ತೆಯಲ್ಲಿ ನಡೆಯಬೇಕಿದ್ದ ನೂತನ ಹಿಂದೂ ರುದ್ರಭೂಮಿಯ ಉದ್ಘಾಟನೆ ಹಾಗೂ ಪೂಜಾ ಕಾರ್ಯಗಳನ್ನು ಸಹ ಸರ್ಕಾರದ ಆದೇಶಕ್ಕೆ ಅನುಗುಣವಾಗಿ ಸಂಘಟಕರು ಕಾರ್ಯಕ್ರಮ ಸ್ಥಗಿತಗೊಳಿಸಿ ಮುಂದೂಡಿದರು.

ಸಾರ್ವಜನಿಕರ ಆರೋಗ್ರದ ಬಗ್ಗೆ ತೀವ್ರ ನಿಗಾ ವಹಿಸಿರುವ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಸಾರ್ವಜನಿಕರಿಗೆ ಸ್ವಚ್ಚತೆಯ ಮಹತ್ವವನ್ನು ಸಾರಿವೆ. ಕೊರೊನಾ ಸೋಂಕಿನ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಸುಳ್ಳು ಸುದ್ದಿ ಹರಡದಂತೆ ಮನವಿ ಮಾಡಿದೆ. ವಿದೇಶಗಳಿಂದ ಬಂದಿರುವ ವ್ಯಕ್ತಿಗಳ ಬಗ್ಗೆ ಸೂಕ್ತ ತಪಾಸಣೆ ಮಾಡುವುದರ ಜೊತೆಗೆ ಅವರ ಸಂಪರ್ಕದಲ್ಲಿರುವವರನ್ನೂ ಸಹ ತಪಾಸಣೆಗೆ ಒಳಪಡಿಸಿ ಜಾಗೃತಿ ವಹಿಸಲಾಗಿದೆ.

ಬಣಕಲ್‌ ಹಾಗೂ ಕೊಟ್ಟಿಗೆಹಾರದಲ್ಲಿ ಇಬ್ಬರು ಸ್ಥಳಿಯರು ವಿದೇಶದಿಂದ ಬಂದಿದ್ದು ಅವರು ಆರೋಗ್ಯವಾಗಿದ್ದಾರೆ. ಅವರಿಗೆ ಒಂದು ವಾರದವರೆಗೂ ಸಾರ್ವಜನಿಕ ಸಂಪರ್ಕ ಹೊಂದದಂತೆ ಸಲಹೆ ನೀಡಲಾಗಿದೆ. ಇತ್ತ ಪೊಲೀಸ್‌ ಇಲಾಖೆ ಕೂಡ ಆರೋಗ್ಯ ಇಲಾಖೆ ಜೊತೆ ಕೈಗೂಡಿಸಿದ್ದು, ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಮಾಡಿದೆ.

ಸಾರ್ವಜನಿಕವಾಗಿ ಗುಂಪು ಸೇರದಂತೆ ಎಚ್ಚರವಹಿಸಿರುವ ಪೊಲೀಸರು, ನಿಗದಿತ ಗಸ್ತು ತಿರುಗುವಿಕೆ ಹೆಚ್ಚಳಗೊಳಿಸಿ ಸಾರ್ವಜನಿಕರಲ್ಲಿ ಧೈರ್ಯ ತುಂಬುವ ಕಾರ್ಯ ಮಾಡುತ್ತಿದೆ. ಸದ್ಯಕ್ಕೆ ವಾಹನ ತಪಾಸಣೆಯನ್ನು ನಿಲ್ಲಿಸಿರುವ ಪೊಲೀಸ್‌ ಇಲಾಖೆ ಸಾರ್ವಜನಿಕರ ಆರೋಗ್ಯದ ಕಡೆ ಗಮನಹರಿಸಿರುವುದು ಸ್ಥಳೀಯರ ಪ್ರಶಂಸೆಗೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next