ಮೂಡಿಗೆರೆ: ಕೊರೊನಾ ವೈರಸ್ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಕಳಸ ಹಾಗೂ ಹೊರನಾಡು ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ತೀವ್ರ ಇಳಿಮುಖವಾಗಿದೆ.
ಸದಾ ಪ್ರವಾಸಿಗರು, ಭಕ್ತರಿಂದ ತುಂಬಿರುತ್ತಿದ್ದ ದೇವಾಲಯದ ಆವರಣ ಈಗ ಬಿಕೋ ಎನ್ನುತ್ತಿದೆ. ಕೊರೊನಾ ಸೋಂಕು ಕುರಿತು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಬರಲಾರಂಭಿಸುತ್ತಿದ್ದಂತೆ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು. ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರ ಪ್ರವಾಸಿ ತಾಣಗಳ ಭೇಟಿಗೆ ತಡೆ ನೀಡಿ ಆದೇಶ ಹೊರಡಿಸಿದ ನಂತರ ಕೇವಲ ಬೆರಳೆಣಿಕೆಯ ಜನ ಇಲ್ಲಿಗೆ ಆಗಮಿಸುತ್ತಿದ್ದಾರೆ.
ರಾಜ್ಯದ ಹಲವು ಭಾಗ ಸೇರಿದಂತೆ ಪಕ್ಕದ ರಾಜ್ಯಗಳಾದ ಆಂಧ್ರಪ್ರದೇಶ, ಕೇರಳ, ತಮಿಳುನಾಡುಗಳಿಂದ ಆಗಮಿಸುತ್ತಿದ್ದ ಯಾತ್ರಾರ್ಥಿಗಳು ಇತ್ತ ಬರುತ್ತಿಲ್ಲ. ಇದರಿಂದ ಪ್ರವಾಸಿಗರನ್ನೇ ನಂಬಿಕೊಂಡಿದ್ದ ಈ ಭಾಗದ ಲಾಡ್ಜ್ ಗಳು, ಹೋಟೆಲ್‌ಗಳು, ಕಾಫೀ, ಟೀ ಶಾಪ್ ಗಳು, ಸಾಂಬಾರು ಪದಾರ್ಥ ಸೇರಿ ವಿವಿಧ ವಸ್ತು ಮಾರುವ ಅಂಗಡಿಗಳೆಲ್ಲ ವ್ಯಾಪಾರ ಇಲ್ಲದೆ ನಷ್ಟ ಅನುಭವಿಸುವಂತಾಗಿದೆ.
ಹಸಿವು ನೀಗಿಸಿ ಬಲ ತುಂಬುವ ಆದಿಶಕ್ತಾÂತ್ಮಕ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಪ್ರತಿನಿತ್ಯ ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಅನ್ನಪ್ರವಾದ ಸೀÌಕರಿಸುತ್ತಿದ್ದರು. ಆದರೆ, ಈಗ ಕೇವಲ 900 ರಿಂದ 1200 ಜನರಿಗೆ ಮಾತ್ರ ಅನ್ನಸಂತರ್ಪಣೆ ಕಾರ್ಯ ನಡೆಯುತ್ತಿದೆ. ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವ ಭಕ್ತಾದಿಗಳಲ್ಲಿ ಬಹುತೇಕರು ಸ್ಥಳೀಯರೇ ಆಗಿದ್ದು, ಹೊರಭಾಗದಿಂದ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ತೀವ್ರ ಇಳಿಮುಖವಾಗಿದೆ.
ಬಹುತೇಕ ಸರ್ಕಾರಿ ಬಸ್‌ಗಳ ಸಂಚಾರವನ್ನು ನಿಲ್ಲಿಸಲಾಗಿದ್ದು, ಕೆಲವೇ ಬಸ್‌ಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಖಾಸಗಿ ವಾಹನವೇ ಪ್ರಮುಖ ಸಾರಿಗೆಯಾಗಿರುವುದರಿಂದ ಕ್ಷೇತ್ರದ ಭೇಟಿಗೆ ಯಾರೂ ಮುಂದಾಗುತ್ತಿಲ್ಲ. ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತಾದಿಗಳ ಬಗ್ಗೆ ತೀವ್ರ ನಿಗಾ ವಹಿಸಿರುವ ದೇವಸ್ಥಾನ ಆಡಳಿತ ಮಂಡಳಿ, ಆರೋಗ್ಯ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಭಕ್ತಾದಿಗಳಿಗೆ ಶುದ್ಧ ಕುಡಿಯುವ ನೀರಿನ ಜೊತೆಗೆ ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.
ಊಟೋಪಚಾರಗಳಲ್ಲಿ ಶುದ್ಧತೆ ಕಾಪಾಡಿಕೊಳ್ಳುವ ಜೊತೆಗೆ ಭಕ್ತಾದಿಗಳಿಗೆ ಸ್ವತ್ಛತೆ ಬಗ್ಗೆ ತಿಳಿಹೇಳಲಾಗುತ್ತಿದೆ. ಕ್ಷೇತ್ರಕ್ಕೆ ಬರುವ ಭಕ್ತಾದಿಗಳಲ್ಲಿ ಕೊರೊನಾ ವೈರಸ್‌ನ ಯಾವುದೇ ಲಕ್ಷಣಗಳು ಕಂಡು ಬಂದಲ್ಲಿ ಆರೋಗ್ಯ ಇಲಾಖೆಗೆ ಸುದ್ದಿ ಮುಟ್ಟಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸರ್ಕಾರದ ಆದೇಶಗಳಿಗೆ ಬೆಲೆ ಕೊಟ್ಟಿರುವ ಆಡಳಿತ ಮಂಡಳಿ ಅನಿವಾರ್ಯ ಸಂದರ್ಭಗಳ ಹೊರತಾಗಿ ಕ್ಷೇತ್ರ ದರ್ಶನ ಹಾಗೂ ಸಾರ್ವಜನಿಕ ಸಭೆ- ಸಮಾರಂಭಗಳಿಗೆ ನಿಷೇಧ ಹೇರಿದೆ.
ಮೂಡಿಗೆರೆ ತಾಲೂಕಿನಲ್ಲಿ ಸದ್ಯಕ್ಕೆ ಕೊರೊನಾ ಪ್ರಕರಣಗಳು ದಾಖಲಾಗಿಲ್ಲ. ಮೂಡಿಗೆರೆಯಲ್ಲಿರುವ ಸಹೋದರಿ ಮನೆಗೆ ಆಗಮಿಸಿದ್ದ ಮಂಗಳೂರಿನ ವ್ಯಕ್ತಿಯೊಬ್ಬರು ಕೊರೊನಾ ಸೋಂಕು ಶಂಕೆಯಡಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ವೈದ್ಯಕೀಯ ವರದಿಯಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಇಲ್ಲ ಎಂಬ ಸುದ್ದಿ ಬಂದ ನಂತರ ತಾಲೂಕಿನ ಜನ ನಿರಾಳರಾಗಿದ್ದರು. ಸಮಸ್ಯೆ ಬಂದ ಮೇಲೆ ಪರಿಹಾರ ಕಂಡುಕೊಳ್ಳುವ ಮೊದಲು ಸಮಸ್ಯೆಯೇ ಬಾರದಂತೆ ತಾಲೂಕಿನಾದ್ಯಂತ ಹೆಚ್ಚಿನ ಎಚ್ಚರ ವಹಿಸಲಾಗಿದೆ.
ಸುಧೀರ್ ಮೊದಲಮನೆ