ಮೂಡಿಗೆರೆ: ಮಹಾ ಮಳೆಯಿಂದ ಹಾನಿಗೊಂಡ ಪ್ರದೇಶಗಳನ್ನು ವೀಕ್ಷಿಸಿ, ನಿರಾಶ್ರಿತರಿಗೆ ಸಾಂತ್ವನ ಹೇಳಲು ಭಾನುವಾರ ಮೂಡಿಗೆರೆ ತಾಲೂಕಿಗೆ ಆಗಮಿಸಬೇಕಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರವಾಸ ಮುಂದೂಡಿದ್ದು, ಆ.19ರಂದು ಭೇಟಿ ನೀಡಲಿದ್ದಾರೆ ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.18ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಹಾಗೂ ಉಡುಪಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಅಂದು ಉಡುಪಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಆ.19ರ ಬಳಗ್ಗೆ ಕುದುರೆಮುಖದ ಮೂಲಕ ಕಳಸ ಹೋಬಳಿಗೆ ಭೇಟಿ ನೀಡಲಿದ್ದಾರೆ. ಪ್ರವಾಹದಿಂದ ಹಾನಿಯಾದ ದುರ್ಗದಹಳ್ಳಿ, ಮದುಗುಂಡಿ, ಚನ್ನುಡ್ಲು, ಮಲೆಮನೆ, ಜಾವಳಿ, ಕೊಟ್ಟಿಗೆಹಾರ, ಬಣಕಲ್, ಬಂಕೇನಹಳ್ಳಿ ಸೇತುವೆ, ಬಿದಹರಳ್ಳಿ, ಗೋಣಿಬೀಡು ಮತ್ತು ಕಸ್ಕೆಬೈಲ್ಗೆ ಭೇಟಿ ನೀಡಿ, ಪ್ರವಾಹಕ್ಕೆ ತುತ್ತಾದ ಜಮೀನು, ಮನೆ ಹಾಗೂ ನಿರಾಶ್ರಿತರನ್ನು ಭೇಟಿ ಮಾಡಿ ಸಂತ್ವನ ಹೇಳಲಿದ್ದಾರೆಂದು ತಿಳಿಸಿದರು.
ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರಾಷ್ಟ್ರೀಯ ವಿಪತ್ತು ವಿಕೋಪ ಪರಿಹಾರ ನಿಧಿಗೆ 8 ಸಾವಿರ ಕೋಟಿ ರೂ. ಮೀಸಲಿರಿಸಿದ್ದರು. ಆ ಹಣವನ್ನು ಈಗಿನ ಸರಕಾರ ನಿರಾಶ್ರಿತರಿಗೆ ನೀಡಬೇಕು. ಹಾನಿಗೊಂಡ ಜಮೀನು ಹೆಕ್ಟೇರ್‌ಗೆ 12,500 ರೂ. ಪರಿಹಾರ ನೀಡಲು ಸರಕಾರ ಮುಂದಾಗಿದೆ. ಇದರಿಂದ ಪ್ರಯೋಜನವಿಲ್ಲ. ಎಕರೆಗೆ ಕನಿಷ್ಟ 1 ಲಕ್ಷ ರೂ. ಆದರೂ ನೀಡಬೇಕು. ನೂರಾರು ವರ್ಷದಿಂದ ಇಂತಹ ಮಹಾಮಳೆಯನ್ನೇ ಮಲೆನಾಡಿನ ಜನ ನೋಡಿಲ್ಲ. ಇಂತಹ ದುಸ್ಥಿತಿಯಲ್ಲಿ ಜನ ನೊಂದಿದ್ದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೈಚೆಲ್ಲಿ ಕುಳಿತುಕೊಳ್ಳದೇ ಪರಿಸ್ಥಿತಿಯನ್ನು ನಿಭಾಯಿಸಬೇಕು. ಈ ನಿಟ್ಟಿನಲ್ಲಿ ಸರಕಾರದೊಂದಿಗೆ ಎಚ್.ಡಿ.ಕುಮಾರಸ್ವಾಮಿ ಚರ್ಚಿಸಲಿದ್ದಾರೆ ಎಂದು ತಿಳಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಮಾತನಾಡಿ, ತಾಲೂಕಿನ ಊರುಬಗೆ ಗ್ರಾಪಂ ವ್ಯಾಪ್ತಿಯಲ್ಲಿ ಪ್ರತಿ ವರ್ಷ ನಿರೀಕ್ಷೆಗೂ ಮೀರಿದ ಮಳೆಯಾಗುತ್ತದೆ. ಪ್ರತಿ ವರ್ಷ ಅತಿವೃಷ್ಟಿಯಿಂದ ಅಲ್ಲಿನ ಜನ ರೋಸಿಹೋಗಿದ್ದಾರೆ. ಕಾಡಾನೆ ಹಾವಳಿಯಿಂದ ರೈತರು ತತ್ತರಿಸಿದ್ದಾರೆ. ಕೂಲಿ ಕಾರ್ಮಿಕರು ಕಲಸವಿಲ್ಲದೇ ತೊಂದರೆಗೆ ಸಿಲುಕಿದ್ದಾರೆ. ಹಾಗಾಗಿ, ಊರುಬಗೆ ಗ್ರಾಪಂ ವ್ಯಾಪ್ತಿಯ ಜನರನ್ನು ಸುರಕ್ಷಿತ ಸ್ಥಳಕ್ಕೆ ಸರಕಾರ ಸ್ಥಳಾಂತರಿಸಬೇಕೆಂದು ಒತ್ತಾಯಿಸಿದರು.
ಗೋಣಿಬೀಡು ಗ್ರಾಮಲೆಕ್ಕಿಗ ಲಕ್ಷ ್ಮಣ್ ಅವರು ನೈಜ ನಿರಾಶ್ರಿತರಿಗೆ ಪರಿಹಾರದ ಚೆಕ್ ನೀಡದೇ ಬೇರೆಡೆ ವಾಸವಾಗಿರುವವರಿಗೆ ಹಾಗೂ ತಮಗೆ ಬೇಕಾದವರಿಗೆ ಸುಳ್ಳು ದಾಖಲೆ ಸೃಷ್ಟಿಸಿ ಪ್ರಾಥಮಿಕ ಪರಿಹಾರದ 3,800 ರೂ. ಚೆಕ್ ನೀಡುವ ಮೂಲಕ ನೈಜ ನಿರಾಶ್ರಿತರಿಗೆ ವಂಚನೆ ಮಾಡುತ್ತಿದ್ದಾರೆ. ಇಂತಹ ವಂಚಕ ಗ್ರಾಮಲೆಕ್ಕಿಗ ಲಕ್ಷ್ಮಣ್ ಅವರನ್ನು ಜಿಲ್ಲಾಧಿಕಾರಿಗಳು ಅಮಾನತು ಮಾಡಬೇಕೆಂದು ಒತ್ತಾಯಿಸಿದರು.
ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ವಿಠಲ್ ಮಾತನಾಡಿ, ಆದಿವಾಸಿಗಳ ಅಭಿವೃದ್ಧಿಗೆಂದು ಹಿಂದಿನ ಸರಕಾರ 10.ಕೋಟಿ ರೂ. ಅನ್ನು ಜಿಲ್ಲೆಗೆಂದು ಮೀಸಲಿಟ್ಟಿದೆ. ಆ ಹಣ ಖರ್ಚಾಗದೇ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಕೊಳೆಯುತ್ತಿದೆ. ಅದನ್ನು ಅತಿವೃಷ್ಟಿಯಿಂದ ಧ್ವಂಸಗೊಂಡಿರುವ ಜಮೀನುಗಳ ಮಾಲೀಕರಿಗೆ ಮತ್ತು ಮನೆ ಕಳೆದುಕೊಂಡವರಿಗೆ ವಿನಿಯೋಗಿಸಬೇಕೆಂದು ಒತ್ತಾಯಿಸಿದರು.
ಮುಖಂಡರಾದ ಬಿ.ಎಂ.ಬೈರೇಗೌಡ, ಲಕ್ಷ ್ಮಣ್ ಗೌಡ, ನಿಡವಾಳೆ ಚಂದ್ರು, ಉಣಸೇಮಕ್ಕಿ ಲಕ್ಷ ್ಮಣ್,ಎಸ್.ಎ.ವಿಜೇಂದ್ರ, ಗಬ್ಬಳ್ಳಿ ಚಂದ್ರೇಗೌಡ, ಮಗ್ಗಲಮಕ್ಕಿ ರವಿ, ರಾಜೇಂದ್ರ ಕಣಚೂರು ಉಪಸ್ಥಿತರಿದ್ದರು.