Advertisement

ಸಾಹಿತಿ ರಮೇಶ್‌ಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಪುರಸ್ಕಾರ

05:57 PM Oct 06, 2019 | Naveen |

ಮೂಡಿಗೆರೆ: ತಾಲೂಕಿನ ಕಾಫಿ ಬೆಳೆಗಾರ ಹಾಗೂ ಹಿರಿಯ ಸಾಹಿತಿ ಹಳೆಕೋಟೆ ರಮೇಶ್‌ ಅವರಿಗೆ ಜೀವಮಾನ ಸಾಧನೆಗಾಗಿ ವಿಶ್ವೇಶ್ವರಯ್ಯ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನ ಭಾರತರತ್ನ ಸರ್‌ ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್‌ ಪ್ರತಿಷ್ಠಾನ ಟ್ರಸ್ಟ್‌ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ಮತ್ತು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಸಹಯೋಗದಲ್ಲಿ ಬೆಂಗಳೂರಿನ ಕನ್ನಡ ಭವನದ ನಯನ ಮಂದಿರದಲ್ಲಿ ನಡೆದ ಅಖೀಲ ಕರ್ನಾಟಕ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

Advertisement

ಜೀವಮಾನ ಸಾಧನೆಗಾಗಿ 100 ಪುಟಗಳನ್ನು ಮೀರಿದ ಕನಿಷ್ಟ 10 ಪುಸ್ತಕಗಳನ್ನು ರಚಿಸಿದ 50ವರ್ಷ ಮೇಲ್ಪಟ್ಟ ತಾಲೂಕಿನ ಹಿರಿಯ ಸಾಹಿತಿ ಹಳೆಕೋಟೆ ರಮೇಶ್‌ ಸೇರಿದಂತೆ ರಾಜ್ಯದ 17 ಮಂದಿ ಸಾಹಿತಿಗಳಿಗೆ ಈ ವರ್ಷದಲ್ಲಿ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ನೀಡಲಾಗಿದೆ. ಹಿರಿಯ ಸಾಹಿತಿ ಜಯದೇವಪ್ಪ ಜೈನಕೇರಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ವನಕಲ್ಲು ಸುಕ್ಷೇತ್ರದ ಡಾ| ಬಸವ ರಮಾನಂದ ಸ್ವಾಮಿಗಳು ಪ್ರಶಸ್ತಿ ಪ್ರದಾನ ಮಾಡಿದರು. ಮಾಜಿ ಸಚಿವ ಅಮರೇಗೌಡ, ಕಲಾವಿದ ಬ್ಯಾಂಕ್‌ ಜನಾರ್ದನ್‌, ಪಂಕಜಾ ರವಿಶಂಕರ್‌ ಮತ್ತು ಮುತ್ತುರಾಜು ಮುಂತಾದವರು ಉಪಸ್ಥಿತರಿದ್ದರು.

ತಾಲೂಕಿನ ನಿವೃತ್ತ ಶಿಕ್ಷಕ ಹಾಗೂ ಕೃಷಿಕರು ಆದ ದಿ| ನಂಜೇಗೌಡ ಹಾಗೂ ಸೀತಮ್ಮ ದಂಪತಿ ಪುತ್ರ ಸಾಹಿತಿ ಹಳೆಕೋಟೆ ರಮೇಶ್‌ ಅವರು, ಕಾಫಿ, ಮೆಣಸು,
ಏಲಕ್ಕಿ ಸೇರಿದಂತೆ ಬಹುವಿಧ ಬೆಳೆಗಳನ್ನು ಬೆಳೆಯುವ ಪ್ರಗತಿಪರ ಕೃಷಿಕರಾಗಿದ್ದಾರೆ. ಸಾಹಿತ್ಯ ರಚನೆ ಅವರ ಹವ್ಯಾಸವಾಗಿದ್ದು, ಈಗಾಗಲೇ 25 ಕೃತಿಗಳನ್ನು ರಚಿಸಿ, ಬಿಡುಗಡೆಗೊಳಿಸಿದ್ದಾರೆ. ಹಳೆಕೋಟೆ ರಮೇಶ್‌ ಅವರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಎರಡೂವರೆ ದಶಕ ಸೇವೆ ಸಲ್ಲಿಸಿದ್ದು, ಸಾಹಿತ್ಯ ಮತ್ತು ಕೃಷಿಯಲ್ಲಿನ ಸಾಧನೆಗಾಗಿ ವಿವಿಧ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಇವರ ಸಾಧನೆಗಾಗಿ ಪ್ರಸಕ್ತ ಸಾಲಿನ ರಾಷ್ಟ್ರೀಯ ಪುರಸ್ಕಾರ ಲಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next