ಮೂಡಿಗೆರೆ: ನಿಯತ್ತಿನ ಪ್ರಾಣಿಯೊಂದಿದ್ದರೆ ಅದು ಶ್ವಾನ. ಮನೆಯಲ್ಲಿ ಶ್ವಾನಗಳಿದ್ದರೆ ಓರ್ವ ಕಾವಲುಗಾರನಿದ್ದಂತೆ ಎಂದು ಜೇನು ಪೋಷಕರ ಸಹಕಾರ ಸಂಘದ ಅಧ್ಯಕ್ಷ ದುಂಡುಗ ಪ್ರಮೋದ್ ಹೇಳಿದರು.
ಶುಕ್ರವಾರ ಪಟ್ಟಣದ ಹೊಯ್ಸಳ ಕ್ರೀಡಾಂಗಣದಲ್ಲಿ ಅಂಬಾರಿ ಜೇಸಿ ಸಪ್ತಾಹ 2019 ಕಾರ್ಯಕ್ರಮದ ಅಂಗವಾಗಿ ಜೇಸಿ ಸಂಸ್ಥೆ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಡಾಗ್ ಶೋ ಸ್ಪರ್ಧೆ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮಲೆನಾಡು ಭಾಗದಲ್ಲಿ ಒಂಟಿ ಮನೆಗಳೇ ಹೆಚ್ಚಾಗಿರುವುದರಿಂದ ಶ್ವಾನಗಳ ಅವಶ್ಯಕತೆಯಿದೆ. ಶ್ವಾನ ಹಾಗೂ ಮಾನವನ ನಡುವೆ ಅವಿನಾಭಾವ ಸಂಬಂಧ ಇರುವುದರಿಂದಲೇ ಜನರು ಶ್ವಾನ ಸಾಕುವುದು ರೂಢಿಯಾಗಿದೆ ಎಂದು ಹೇಳಿದರು.
ಶ್ವಾನ ಪ್ರದರ್ಶನದಲ್ಲಿ ಲ್ಯಾಬ್ರಡಾಲ್, ರಾಟ್ ವೀಲರ್, ಕ್ರಾಕರ್ ಸ್ಪೈಲ್, ಪಗ್, ಹಚ್, ಆರ್‌ಸಿಸಿಎನ್, ಡಾಬರ್, ಡಾಲ್ಮಿಶನ್, ಗ್ರೇಟ್ಡೇನ್ ಸೇರಿದಂತೆ ವಿವಿಧ ಜಾತಿಯ ಶ್ವಾನಗಳು ಜನರನ್ನು ಆಕರ್ಷಿಸಿದವು. ಸುಮಾರು 15ಕ್ಕೂ ಅಧಿಕ ಜಾತಿಯ ಶ್ವಾನಗಳು ಪ್ರದರ್ಶನದಲ್ಲಿ ಭಾಗಿಯಾಗಿ ಶ್ವಾನ ಪ್ರಿಯರಿಗೆ ಮನರಂಜನೆ ನೀಡಿದವು.
ಈ ವೇಳೆ ಪಶು ಇಲಾಖೆಯಿಂದ ಶ್ವಾನಗಳ ಆರೋಗ್ಯ ತಪಾಸಣೆ ನಡೆಸಲಾಯಿತು. ಡಾಗ್ ಶೋ ಸ್ಪರ್ಧೆಯ ತೀರ್ಪುಗಾರರಾಗಿ ರಾಜೇಶ್, ಅಭಿಜಿತ್ ಕಾರ್ಯ ನಿರ್ವಹಿಸಿದರು. ಬಳಿಕ ಸ್ಪರ್ಧೆಯಲ್ಲಿ ವಿಜೇತ ಶ್ವಾನಗಳಿಗೆ ಬಹುಮಾನ ವಿತರಿಸಲಾಯಿತು.
ಜೇಸಿ ಅಧ್ಯಕ್ಷ ಎಚ್.ಕೆ.ಯೋಗೇಶ್ ಅಧ್ಯಕ್ಷತೆ ವಹಿಸಿದ್ದರು. ಪಪಂ ಸದಸ್ಯ ಧರ್ಮಪಾಲ್, ಪಶುಪಾಲನ ಇಲಾಖೆ ಸಹ ನಿರ್ದೇಶಕ ಎಚ್.ಟಿ. ಮನು, ಪಶು ವೈದ್ಯ ಕೆ.ಆರ್. ರಮಿತ್, ಕ.ದಾ. ಕೃಷ್ಣರಾಜ್, ಜಿ.ಟಿ. ರಾಜೇಶ್, ಗೀತಾ ಯೋಗೇಶ್, ವಿದ್ಯಾರಾಜು, ಸುನೀಲ್, ಕೆ.ಎಚ್.ಚಂದ್ರಶೇಖರ್ ಮತ್ತಿತರರಿದ್ದರು.