Advertisement

ಸಂಬಳಕ್ಕಾಗಿ ಡಿ ದರ್ಜೆ ನೌಕರರ ಧರಣಿ

12:01 PM Jun 26, 2019 | Naveen |

ಮೂಡಿಗೆರೆ: ಸರಕಾರ ಕಳೆದ 5 ತಿಂಗಳಿಂದ ತಮಗೆ ಸಂಬಳ ನೀಡದೇ ಸತಾಯಿಸಲಾಗುತ್ತಿದೆ. ಮನೆಗೆ ಅಕ್ಕಿ, ತರಕಾರಿ ಕೊಳ್ಳಲು ಹಣವಿಲ್ಲ. ಸಾಲಗಾರರು ಮನೆಗೆ ಎಡತಾಕುತ್ತಿದ್ದಾರೆ. ನಮಗೆ ಸಂಬಳ ನೀಡದಿದ್ದರೆ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಎಂಜಿಎಂ ಆಸ್ಪತ್ರೆಯ ಹೊರ ಗುತ್ತಿಗೆ ಡಿ ದರ್ಜೆ ನೌಕರರು ಆಸ್ಪತ್ರೆ ಎದುರು ಧರಣಿ ನಡೆಸಿದರು.

Advertisement

ಇಂಡಿಯನ್‌ ಎಂಪ್ಲಾಯಿಮೆಂಟ್ ಬ್ಯೂರೋ ಹಾಸನದ ಏಜೆನ್ಸಿಯಿಂದ 13 ಮಂದಿ ಹಾಗೂ ಮೈಸೂರಿನ ಏಜೆನ್ಸಿಯೊಬ್ಬರು ಒಟ್ಟು 14 ಮಂದಿ ಡಿ ದರ್ಜೆ ನೌಕರರು ಆಸ್ಪತ್ರೆ ಸ್ವಚ್ಛತೆ ಮತ್ತಿತರೆ ಕೆಲಸ ನಿರ್ವಹಿಸುತ್ತಿದ್ದು, ನಮಗೆ ಜನವರಿ ತಿಂಗಳ ವರೆಗೆ ಮಾತ್ರ ಸಂಬಳ ನೀಡಲಾಗಿದೆ. ಫೆಬ್ರವರಿಯಿಂದ ಇಲ್ಲಿಯವರೆಗೂ ಸಂಬಳವನ್ನೇ ನೀಡಿಲ್ಲ. ಹಲವು ಬಾರಿ ಹಿರಿಯ ಅಧಿಕಾರಿಗಳಿಗೆ ಸಂಬಳ ನೀಡುವಂತೆ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ನಮ್ಮನ್ನು ಚೆನ್ನಾಗಿ ದುಡಿಸಿಕೊಂಡು ಸಂಬಳಕ್ಕಾಗಿ ಪರದಾಡುವಂತೆ ಮಾಡುತ್ತಿದ್ದಾರೆ. ಅಧಿಕಾರಿಗಳು ಭರವಸೆ ನೀಡಿದರೆ ಸಾಲದು. ಸಂಬಳ ನೀಡಿದರೆ ಮಾತ್ರ ನಾವು ಕರ್ತವ್ಯಕ್ಕೆ ತೆರಳುತ್ತೇವೆ. ಇಲ್ಲವಾದರೆ ಧರಣಿ ಮುಂದುವರಿಸುತ್ತೇವೆ ಎಂದು ಧರಣಿನಿರತ ನೌಕರರು ಪಟ್ಟು ಹಿಡಿದರು.

ಮಂಗಳವಾರ ಆಸ್ಪತೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ ಇದ್ದದ್ದರಿಂದ ಸಭೆಗೆ ಹಾಜರಾಗಲು ಆಸ್ಪತ್ರೆಗೆ ಬಂದ ಶಾಸಕ ಎಂ.ಪಿ.ಕುಮಾರಸ್ವಾಮಿ ಧರಣಿ ನಡೆಸುತ್ತಿದ್ದ ನೌಕರರ ಬಳಿ ತೆರಳಿದರು. ಸ್ಥಳದಿಂದಲೇ ಆರೋಗ್ಯ ಇಲಾಖೆ ನಿರ್ದೇಶಕರಿಗೆ ದೂರವಾಣಿ ಕರೆ ಮಾಡಿ, ನೌಕರರಿಗೆ ಕೂಡಲೇ ಸಂಬಳ ನೀಡುವಂತೆ ತಿಳಿಸಿದರು. ಆಗ, ಜುಲೈ ಮೊದಲ ವಾರದಲ್ಲಿ ಸಂಬಳ ನೀಡುವುದಾಗಿ ನಿರ್ದೇಶಕರು ಭರವಸೆ ನೀಡಿದರು. ಅವರ ಭರವಸೆಗೆ ಧರಣಿ ನಿರತ ನೌಕರರು ಬಗ್ಗಲಿಲ್ಲ. ನಮಗೆ ಭರವಸೆ ಬೇಕಿಲ್ಲ. ಸಂಬಳ ನೀಡಿ ಎಂದು ಪಟ್ಟು ಹಿಡಿದರು.

ಧರಣಿ ನಿರತ ನೌಕರರ ಹಠದಿಂದ ಇರಿಸುಮುರಿಸಿಗೆ ಒಳಗಾದ ಶಾಸಕರು ಧರಣಿನಿರತರನ್ನು ಒಳಗೆ ಬನ್ನಿ ಮಾತನಾಡೋಣ. ಇದರ ಒಳ ಮರ್ಮಗಳು ನಿಮಗೆ ಅರ್ಥವಾಗಲ್ಲ. ಧರಣಿ ಮುಂದುವರಿಸಿದರೆ ಕೆಲಸ ಕಳೆದುಕೊಳ್ಳುತ್ತೀರಿ ಎನ್ನುತ್ತಾ ತರಾತುರಿಯಲ್ಲಿ ಒಳ ನಡೆದರು. ಶಾಸಕರ ಮಾತಿಗೆ ಅಸಮಧಾನಗೊಂಡ ಧರಣಿನಿರತರು ಕೆಲಹೊತ್ತು ಧರಣಿ ನಡೆಸಿ ಮತ್ತೆ ಕರ್ತವ್ಯಕ್ಕೆ ಹಾಜರಾದರು.

ಧರಣಿ ಸ್ಥಳಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ.ಸುಂದರೇಶ್‌, ಆಸ್ಪತ್ರೆ ಆಡಳಿತ ಅಧಿಕಾರಿ ಡಾ.ಅಶ್ವತ್ಥಬಾಬು, ಡಾ.ಸಂತೋಷ್‌, ಮಂಜುಳಾ ಮನವೊಲಿಸುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ.

Advertisement

ಧರಣಿಯಲ್ಲಿ ವಿನಯ್‌, ಸುರೇಶ್‌, ಮಂಜುನಾಥ್‌, ಶಾಮ್‌, ಪ್ರಭು, ತೀರ್ಥ, ಉಮಾ, ಶೈಲಾ, ಶರಣ್‌, ಲೋಕೇಶ್‌, ನಾಗೇಶ್‌, ನವೀನ್‌, ಭವ್ಯಾ ಉಪಸ್ಥಿತರಿದ್ದರು.

ಆಸ್ಪತ್ರೆಯಲ್ಲಿ ಶಾಸಕರ ಸಭೆ: ಮಂಗಳವಾರ ಎಂಜಿಎಂ ಸರಕಾರಿ ಆಸ್ಪತ್ರೆಯಲ್ಲಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ ಇದ್ದಿದ್ದರಿಂದ 7ಮಂದಿ ವೈದ್ಯಾಧಿಕಾರಿಗಳು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಆಸ್ಪತ್ರೆಯಲ್ಲಿ ಪ್ರತಿನಿತ್ಯ ಒಬ್ಬಿಬ್ಬರು ವೈದ್ಯಾಧಿಕಾರಿಗಳು ಕಾಟಾಚಾರಕ್ಕೆ ಎಂಬಂತೆ ಕರ್ತವ್ಯ ನಿರ್ವಹಿಸುತ್ತಾರೆ. ಉಳಿದ ವೈದ್ಯರು ಕಣ್ಣಿಗೆ ಕಾಣಸಿಗುವುದಿಲ್ಲ. ಆದರೆ, ಮಂಗಳವಾರ ಆಸ್ಪತ್ರೆಯ ಎಕ್ಸರೇ ವಿಭಾಗ, ಕಣ್ಣು ಪರೀಕ್ಷಾ ವಿಭಾಗ, ರಕ್ತ ಪರೀಕ್ಷೆ ಸೇರಿದಂತೆ ಬಹುತೇಕ ವಿಭಾಗಗಳಲ್ಲಿ ಸಿಬ್ಬಂದಿ ಮುತುವರ್ಜಿಯಿಂದ ಕೆಲಸದಲ್ಲಿ ಮಗ್ನರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next