ಮೂಡಿಗೆರೆ: ತಾಲೂಕಿನ ಕೂವೆ ಗ್ರಾಮದ ಹೊಳೆಕುಡಿಗೆಯಲ್ಲಿ ಹರಿಯುವ ಭದ್ರಾನದಿಯನ್ನು ದಾಟಲು ಸಂಪರ್ಕ ವ್ಯವಸ್ಥೆ ಇಲ್ಲದಿರುವುದರಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಕುರ್ಚಿಯ ಮೇಲೆ ಕೂರಿಸಿ ಹೊತ್ತೂಯ್ದು ನಂತರ ತೆಪ್ಪದಲ್ಲಿ ಹೊಳೆ ದಾಟಿದ ಘಟನೆ ನಡೆದಿದೆ.
ಗ್ರಾಮದ ರುದ್ರಯ್ಯ ಎಂಬುವವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು ಅವರನ್ನು ಆಸ್ಪತ್ರಗೆ ಕರೆದುಕೊಂಡು ಹೋಗಲು ರಸ್ತೆಯಿಲ್ಲದ ಕಾರಣ ನದಿಯ ಮೂಲಕ ತೆಪ್ಪದಲ್ಲಿ ರೋಗಿಯನ್ನು ಕೂರಿಸಿ ನದಿ ದಾಟಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಹೊಳೆಕುಡಿಗೆ ಗ್ರಾಮದ ಒಂದು ಬದಿ ಭದ್ರಾ ನದಿಯಿಂದ ಮತ್ತೂಂದು ಬದಿ ಖಾಸಗಿಯವರ ತೋಟದಿಂದ ಸುತ್ತುವರಿದಿದ್ದು ಗ್ರಾಮ ದ್ವೀಪದಂತಿದೆ. ಈ ಗ್ರಾಮಕ್ಕೆ ಹೋಗಿ ಬರುವುದೆಂದರೆ ಜೀವದ ಜೊತೆ ಆಟವಾಡಿದಂತೆ. ನಿತ್ಯವೂ ಶಾಲೆಗೆ ತೆರಳುವ ಮಕ್ಕಳು ಕೂಡ ತೆಪ್ಪದ ಮೂಲಕವೇ ನದಿ ದಾಟಬೇಕಾದ ಪರಿಸ್ಥಿತಿಯಿದೆ.
ಕೆಲ ದಿನಗಳ ಹಿಂದೆ ಗ್ರಾಮದ ಹಿರಿಯರೊಬ್ಬರು ತೀರಿಕೊಂಡ ಸಂದರ್ಭದಲ್ಲಿ ತುಂಬಿ ಹರಿಯುವ ನದಿಯಲ್ಲಿ ತೆಪ್ಪದ ಮೂಲಕವೇ ಹೆಣ ಸಾಗಿಸಲಾಗಿತ್ತು. ಹಲವು ವರ್ಷಗಳಿಂದಲೂ ಈ ಸಮಸ್ಯೆ ಕಣ್ಣಿಗೆ ಕಾಣುತ್ತಿದ್ದರೂ ಯಾವುದೇ ಸರ್ಕಾರವೂ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡಿದ ವಿವಿಧ ಪಕ್ಷಗಳ ಮುಖಂಡರು ರಸ್ತೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ರಸ್ತೆ ಆಗದಿದ್ದರೆ ತೂಗು ಸೇತುವೆಯನ್ನಾದರೂ ನಿರ್ಮಿಸಿಕೊಡುವುದಾಗಿ ಹೇಳಿದ್ದರು. ಆದರೆ ಇದುವರೆಗೂ ಯಾವುದೇ ವ್ಯವಸ್ಥೆ ಈ ಗ್ರಾಮಕ್ಕೆ ಕಲ್ಪಿಸಿಕೊಡುವಲ್ಲಿ ನಿರ್ಲಕ್ಷ್ಯ ತಾಳುತ್ತಿದೆ. ಗ್ರಾಮಕ್ಕೆ ರಸ್ತೆ ನಿರ್ಮಿಸಲು ಅರಣ್ಯ ಇಲಾಖೆಯ ಅನುಮತಿ ಕೋರಲಾಗಿದೆ. ಆದರೆ ಅರಣ್ಯ ಇಲಾಖೆ ಅನುಮತಿ ದೊರೆತರೂ 3 ಕಿಮೀ ರಸ್ತೆ ನಿರ್ಮಿಸಬಹುದು. ಇನ್ನುಳಿದ 1 ಕಿ.ಮೀ. ರಸ್ತೆ ಖಾಸಗಿಯವರ ತೋಟದೊಳಗೆ ಹೋಗಬೇಕಾಗಿದ್ದು, ಖಾಸಗಿಯವರು ಮತ್ತು ಅರಣ್ಯ ಇಲಾಖೆಯ ವ್ಯಾಜ್ಯ ಉಚ್ಚ ನ್ಯಾಯಾಲಯದಲ್ಲಿದೆ. ಹಾಗಾಗಿ ಹೊಳೆಕುಡಿಗೆ ಗ್ರಾಮಕ್ಕೆ ತೂಗುಸೇತುವೆಯೇ ಸೂಕ್ತ ಎನ್ನುವುದು ಇಲ್ಲಿನ ಮತ್ತು ಸುತ್ತಮುತ್ತಲ ಗ್ರಾಮದವರ ಅಭಿಪ್ರಾಯವಾಗಿದೆ.
ಗಬ್ಗಲ್ ನಿಂದ ಹೊಳೆಕುಡಿಗೆ ಗ್ರಾಮಕ್ಕೆ ರಸ್ತೆ ನಿರ್ಮಾಣಮಮಾಡಲು ಸತತ ಪ್ರಯತ್ನ ಮಾಡುತ್ತಿದ್ದೇವೆ. ಸದ್ಯದಲ್ಲೇ ಈ 4 ಕಿಮೀ ರಸ್ತೆ ನಿರ್ಮಾಣ ಮಾಡಿ ಹೊಳೆಕುಡಿಗೆ ಗ್ರಾಮಸ್ಥರ ಬಹುದಿನಗಳ ಬೇಡಿಕೆಯನ್ನು ಈಡೇರಿಸುತ್ತೇನೆ.
•
ಎಂ.ಪಿ. ಕುಮಾರಸ್ವಾಮಿ, ಶಾಸಕ