ಮೂಡಿಗೆರೆ: ಬಣಕಲ್ ಹೋಬಳಿಯಲ್ಲಿರುವ ದೇವರಮನೆ ದೇಗುಲ ಕಲ್ಲಿನ ರಚನೆಯನ್ನು ಪ್ರಧಾನವಾಗಿ ಹೊಂದಿರುವ ಪ್ರಾಚೀನ ಕಾಲಘಟ್ಟದ ದೇಗುಲವನ್ನು ಹೊಂದಿದೆ. ಇಲ್ಲಿ ಕಾಲಭೈರವನ ಆರಾಧನೆಯನ್ನು ಹಲವಾರು ತಲೆಮಾರುಗಳಿಂದ ಮಾಡಿಕೊಂಡು ಬರಲಾಗುತ್ತಿದೆ. ಇಲ್ಲಿನ ದೇವಾಲಯವನ್ನು ಮೂಲತಃ ದ್ರಾವಿಡ ಶೈಲಿ ಅನುಸರಿಸಿ ವಿಶೇಷವಾಗಿ ನಿರ್ಮಾಣ ಮಾಡಲಾಗಿದೆ ಎಂದು ಲೇಖಕ ಡಾ| ಸಂಪತ್ ಬೆಟ್ಟಗೆರೆ ಅಭಿಪ್ರಾಯ ವ್ಯಕ್ತಪಡಿಸಿದರು.
ಇಳಿಸಂಜೆ ದೇವರಮನೆ ಪರಿಸರದಲ್ಲಿ ಹಾಸನ ಆಕಾಶವಾಣಿ ಕೇಂದ್ರ ಏರ್ಪಡಿಸಿದ್ದ “ವಾರಕ್ಕೊಂದು ತಾಣ’ ವಿಶೇಷ ನೇರಪ್ರಸಾರದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೊಯ್ಸಳರ ವಾಸ್ತು ಶಿಲ್ಪವು ದ್ರಾವಿಡ ಮತ್ತು ಆರ್ಯಶೈಲಿ ಎರಡನ್ನೂ ಅನುಸರಿಸಿದೆ. ಅದರಲ್ಲಿ ರಾಮಾಯಣ ಮತ್ತು ಮಹಾಭಾರತದ ದೃಶ್ಯಾವಳಿಗಳು, ನರ್ತಿಸುತ್ತಿರುವ ಶಿಲಾಬಾಲಿಕೆಯರ ಚಿತ್ರ ಇರುತ್ತದೆ. ಈ ವಾಸ್ತುಶಿಲ್ಪ ದೇವರ ಮನೆ ದೇವಾಲಯದ ಪ್ರವೇಶ ದ್ವಾರದ ಪ್ರಾಂಗಣದಲ್ಲಿದೆ. ಜೊತೆಗೆ ದೇವಾಲಯದ ಹಜಾರದ ಮೇಲಿನ ಚಪ್ಪಟೆಯಾದ ಚಾವಣಿ, ಗರ್ಭಗುಡಿಯ ಮೇಲೆ ಸಮತಟ್ಟಾದ ಅಂತಸ್ತುಗಳಿಂದ ಕೂಡಿದ ಶಿಖರ, ದ್ವಾರಪಾಲಕ ಶಿಲ್ಪಗಳು, ಪ್ರಧಾನ ಗುಡಿಯ ಸುತ್ತ ಪರಿವಾರ ದೇವತೆಗಳನ್ನು ಗಮನಿಸಿದಾಗ ಹೊಯ್ಸಳರ ಸಾಂಸ್ಕೃತಿಕ ಛಾಯೆ ಪ್ರಧಾನವಾಗಿ ಅರಿವಿಗೆ ಬರುತ್ತದೆ ಎಂದರು.
ಬಲ್ಲಾಳ ಎಂಬ ದೊರೆ ಶತ್ರುಗಳಿಂದ ರಕ್ಷಣೆ ಪಡೆಯುವ ಉದ್ದೇಶದಿಂದ ಇಲ್ಲಿಗೆ ಬಂದಿದ್ದನೆಂದು ಪೂರ್ವಿಕರಿಂದ ಕೇಳಿ ತಿಳಿದ ಸ್ಥಳ ಪುರಾಣವನ್ನು ಇಲ್ಲಿನ ಸ್ಥಳೀಯರು ಹೇಳುತ್ತಾರೆ. ಆದ್ದರಿಂದ ಇದು ಹೊಯ್ಸಳ ಕಾಲದ ದೇವಾಲಯ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ತಿಳಿಸಿದರು.
ದೇವರ ಮನೆ ಸಮೀಪದ ಕೊಟ್ರಕೆರೆ ಗ್ರಾಮದ ಸಾಂಸ್ಕೃತಿಕ ಪರಿಚಾರಕಿ ಶಾಂತಲಾ ನಾಗೇಶ್ ಅವರು ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ, ದೇವರ ಮನೆ ಪ್ರಾಕೃತಿಕವಾಗಿ ಬಹಳ ಮಹತ್ವ ಹೊಂದಿದೆ. ಇದು ಪಶ್ಚಿಮಘಟ್ಟದ ಪ್ರಮುಖ ಪ್ರದೇಶವಾಗಿದ್ದು, ಇಲ್ಲಿ ಹೆಚ್ಚು ಮಳೆ ಬೀಳುವುದರಿಂದ ಸುತ್ತಮುತ್ತಲಿನ ರೈತರು ಬೆಳೆ ಹಾನಿಯಂತಹ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ ಎಂದು ತಿಳಿಸಿದರು.
ದೇವಾಲಯದ ಧರ್ಮದರ್ಶಿ ಹೆಸಗೋಡು ಮದನ್ ಹೆಗ್ಗಡೆ ಅವರು ಮಾತನಾಡಿ, ಮೂಡಿಗೆರೆ ತಾಲೂಕಿನ ನಮ್ಮುಡುಗ್ರು ವಾಟ್ಸಪ್ ತಂಡದವರು ಇಲ್ಲಿನ ಪರಿಸರದಲ್ಲಿ ಪ್ರವಾಸಿಗರು ಎಸೆದು ಹೋಗಿದ್ದ ಘನತ್ಯಾಜ್ಯವನ್ನು ಸ್ವಯಂಪ್ರೇರಿತರಾಗಿ ಸ್ವತ್ಛ ಮಾಡಿದ್ದನ್ನು ತಿಳಿಸಿದಾಗ, ಆಕಾಶವಾಣಿ ಅ ಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದರು.
ಸತತ ಒಂದು ಗಂಟೆಯ ಈ ನೇರ ಪ್ರಸಾರವನ್ನು ರಾಜ್ಯಾದ್ಯಂತ ಶೋತೃಗಳು ಆಲಿಸಿದರು. ಹಾಸನ ಆಕಾಶವಾಣಿ ಕೇಂದ್ರದ ಎಂ.ಶಿವಕುಮಾರ್, ಜಿ.ಡಿ.ರಮೇಶ್, ಮೋಹನಾಕ್ಷಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಅರ್ಚಕ ನಾಗಭೂಷಣ ಭಟ್, ಹೆಸಗೋಡು ಅರುಣ್ ಕುಮಾರ್, ಸುನಿಲ್, ಹರ್ಷ, ಉಪೇಂದ್ರ ಮುಂತಾದವರಿದ್ದರು.