Advertisement

ನೆರೆ ಸಂತ್ರಸ್ತರಿಗೆ ನೆರವಿನ ಮಹಾಪೂರ

12:14 PM Aug 14, 2019 | Naveen |

ಮೂಡಿಗೆರೆ: ಕಳೆದ ಹತ್ತು ದಿನಗಳಿಂದ ತಾಲೂಕಿನಾದ್ಯಂತ ಸುರಿದ ಮಹಾಮಳೆಗೆ ಮನೆ, ತೋಟ, ಜಾನುವಾರು ಒಳಗೊಂಡಂತೆ ಸರ್ವಸ್ವವನ್ನೂ ಕಳೆದುಕೊಂಡು ಪುನರ್ವಸತಿ ಕೇಂದ್ರಗಳಲ್ಲಿ ತಲೆ ಮೇಲೆ ಕೈಹೊತ್ತು ಕುಳಿತ ಸಂತ್ರಸ್ತರಿಗೆ ನಾಡಿನ ನಾನಾ ಭಾಗಗಳಿಂದ ನೆರವಿನ ಮಹಾಪೂರವೇ ಹರಿಸುಬರುತ್ತಿದೆ.

Advertisement

ತಾಲೂಕಿನ ಜಾವಳಿ, ಆಲೆಖಾನ್‌ ಹೊರಟ್ಟಿ, ಮಧುಗುಂಡಿ, ದುರ್ಗದಹಳ್ಳಿ, ಮಲೆಮನೆ, ಚೆನ್ನಹಡ್ಲು ಸೇರಿದಂತೆ ಅನೇಕ ಗ್ರಾಮಗಳ ಜನರು ತಮ್ಮ ಸರ್ವಸ್ವವನ್ನೂ ಕಳೆದುಕೊಂಡು ಪುನರ್ವಸತಿ ಕೇಂದ್ರಗಳಲ್ಲಿ ಕಂಗಾಲಾಗಿ ಕುಳಿತಿದ್ದಾರೆ.

ಕಳೆದ ಎರಡು ದಿನಗಳಿಂದ ವರುಣನ ರೌದ್ರಾವತಾ ಸ್ವಲ್ಪಮಟ್ಟಿಗೆ ಶಮನಗೊಂಡಿದ್ದು, ಎಲ್ಲರೂ ಈಗ ಆಗಿರುವ ದುರಂತ ಮರುಕಳಿಸದಂತೆ ದೇವರಲ್ಲಿ ಮೊರೆಯಿಡುತ್ತಿದ್ದಾರೆ. ವರುಣನ ಆರ್ಭಟಕ್ಕೆ ರೈತರು ಮತ್ತು ಕಾರ್ಮಿಕರು ಸೇರಿದಂತೆ ಎಲ್ಲರೂ ಎಲ್ಲವನ್ನೂ ಕಳೆದುಕೊಂಡು ಅಕ್ಷರಶಃ ಅನಾಥರಾಗಿದ್ದಾರೆ.

ಮನೆ-ಮಠಗಳನ್ನು ಕಳೆದುಕೊಂಡ ಮತ್ತು ತಮ್ಮ ವಾಸಸ್ಥಳಕ್ಕೆ ಸದ್ಯಕ್ಕೆ ಹೋಗಲಾರದೇ ಪರಿಹಾರ ಕೇಂದ್ರಗಳಲ್ಲಿರುವ ಸಂತ್ರಸ್ತರ ದೈನಂದಿನ ಅಗತ್ಯಗಳಿಗಾಗಿ ಈಗಾಗಲೇ ರಾಜ್ಯದ ನಾನಾ ಭಾಗಗಳಿಂದ ತಾತ್ಕಾಲಿಕವಾಗಿ ಆಹಾರ, ಬಟ್ಟೆಗಳು, ನೀರು, ಬಿಸ್ಕತ್‌ ಪ್ಯಾಕ್‌, ಚಪ್ಪಲಿಗಳು, ಚಾಪೆ, ಬೆಡ್‌ಶೀಟ್, ಟೂತ್‌ಬ್ರಷ್‌, ಪೇಸ್ಟ್‌, ಔಷಧ ಮೊದಲಾದ ಎಲ್ಲಾ ಅಗತ್ಯ ಸಾಮಗ್ರಿಗಳು ಭರಪೂರಾಗಿ ಮೂಡಿಗೆರೆ ಕೇಂದ್ರಕ್ಕೆ ಕ್ಯಾಂಟರ್‌ ಮತ್ತು ಟೆಂಪೋಗಳಲ್ಲಿ ಹರಿದುಬರುತ್ತಿವೆ.

ಈ ಸಾಮಗ್ರಿಗಳ ವಿಲೇವಾರಿಯ ಉಸ್ತುವಾರಿಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ವಿವಿಧ ಕ್ಷೇತ್ರಗಳ ಕಾರ್ಯುಕರ್ತರು ತಾಲೂಕಿನಾದ್ಯಂತವಿರುವ 6 ಪುನರ್ವಸತಿ ಕೇಂದ್ರಗಳಿಗೆ ಬೇಡಿಕೆಗೆ ಅನುಸಾರವಾಗಿ ವ್ಯವಸ್ಥಿತ ರೀತಿಯಲ್ಲಿ ವಿತರಣೆ ಮಾಡುತ್ತಿದ್ದಾರೆ.

Advertisement

ಸಂತ್ರಸ್ತರಿಗೆ ಸಹಕರಿಸಿದ ಎಲ್ಲರಿಗೂ ಶಾಸಕ ಎಂ.ಪಿ.ಕುಮಾರಸ್ವಾಮಿ ಧನ್ಯವಾದಗಳನ್ನು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next