Advertisement

ವೇದಾಧ್ಯಯನಕ್ಕೆ ಜಾತಿ ಸೋಂಕಿಲ್ಲ

05:18 PM Jun 12, 2019 | Naveen |

ಮೂಡಿಗೆರೆ: ಭಾರತೀಯ ಶಿಕ್ಷಣದ ಮೌಲ್ಯ ಉಳಿಯಬೇಕೆಂದರೆ ವಿದ್ಯೆಯನ್ನು ಮಾರಾಟ ಮಾಡಬಾರದು ಎಂಬ ದೃಷ್ಟಿಯಿಂದ ಆರಂಭಿಸಲಾದ ಗುರುಕುಲ ಶಿಕ್ಷಣ ಪದ್ಧತಿ ಇಂದು ವಿಶ್ವಮಾನ್ಯವಾಗುತ್ತಿದೆ ಎಂದು ಅಖೀಲ ಭಾರತ ಕುಟುಂಬ ಪ್ರಬೋಧನ ಪ್ರಮುಖ್‌ ಕಜಂಪಾಡಿ ಸುಬ್ರಹ್ಮಣ್ಯ ಭಟ್ ತಿಳಿಸಿದರು.

Advertisement

ಪಟ್ಟಣದ ರೈತ ಭವನದಲ್ಲಿ ಮಂಗಳವಾರ ಪ್ರಬೋಧಿ ಗುರುಕುಲದ ಅರ್ಧ ಮಂಡಲ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ಭಾರತೀಯ ಶಿಕ್ಷಣ ದರ್ಶನ ಮತ್ತು ಗುರುಕುಲದ ಪ್ರಸ್ತುತತೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವೇದ ಕಲಿಯಲು ಜಾತಿ ಬೇಕಿಲ್ಲ: ವೇದ ಮತ್ತು ಸಂಸ್ಕೃತ ಕಲಿಯಲು ಜಾತಿ ಬೇಕಿಲ್ಲ. ಕಲಿತವರು ಜಾತೀಯತೆ ಮಾಡಬಾರದು. ಸತ್ಯ, ನಿಷ್ಠೆ, ಬ್ರಹ್ಮಚರ್ಯೆ, ವ್ಯಾಯಾಮ, ವಿದ್ಯೆ, ದೇಶಭಕ್ತಿ ಇವು ರಾಷ್ಟ್ರಕ್ಕೆ ಅರ್ಪಿತವಾಗಿರಬೇಕು. ಭಾರತೀಯತೆ ‘ಸರ್ವೇಜನಃ ಸುಖೀನೋಭವಂತು, ಶತ್ರು ಬುದ್ಧಿ ವಿನಾಶಯಃ’ ಎಂದು ಹೇಳಿದೆಯೇ ಹೊರತು, ಶತ್ರು ನಾಶವಾಗಲಿ ಎಂದು ಹೇಳಿಲ್ಲವೆಂದು ತಿಳಿಸಿದರು.

ಮಾತೃಭಾಷೆ ಮಾಧ್ಯಮ ಶ್ರೇಷ್ಠ: ನಮ್ಮ ಸ್ಥಳೀಯ ಪ್ರಾಕೃತ ಭಾಷೆ ವೈಜ್ಞಾನಿಕವಾಗಿದ್ದು, ಇಂಗ್ಲಿಷ್‌ ಶಿಕ್ಷಣವನ್ನು ಮೀರಿದೆ. ರಾಮನು ರಾವಣನನ್ನು ಕೊಂದನು ಎಂಬ ಮೂರು ಪದಗಳನ್ನು ನಮಗೆ ಬೇಕಾದ ರೀತಿ ಬಳಸಿ ವಾಕ್ಯ ರಚಿಸಬಹುದು. ಅದರ ಅರ್ಥ ಒಂದೇ ಬರುತ್ತದೆ. ಅದೇ, ಇಂಗ್ಲಿಷ್‌ನಲ್ಲಿ ಉಲಾr ಬರೆದರೆ ಹೊಸ ರಾಮಾಯಣವನ್ನೇ ರಚಿಸಬೇಕಾಗುತ್ತದೆ. ಹಾಗಾಗಿ, ಮಾತೃಭಾಷೆ ಮಾಧ್ಯಮವಾಗಿರಬೇಕು ಎಂದು ಹೇಳಿದರು.

ಗುರುಕುಲ ಪದ್ಧತಿ ಶಿಕ್ಷಣ: ಶಿಕ್ಷಣ ಕಲಿಯುವಾಗ ಪಶುತ್ವ, ಮನುಷ್ಯತ್ವ, ಮಹಾ ಮಾನವತ್ವ ಮತ್ತು ದೇವ ಮಾನವತ್ವ ಪಡೆಯಲು ಸಾಧ್ಯ. ಮಹಾ ಮಾನವತ್ವದ ಶಿಕ್ಷಣದಿಂದ ವಿವೇಕಾನಂದರು ಸೃಷ್ಟಿಯಾದರು. ದೇವ ಮಾನವತ್ವ ಶಿಕ್ಷಣದಿಂದ ಗುರು ರಾಮಕೃಷ್ಣ ಪರಮಹಂಸರು ನರೇಂದ್ರನನ್ನು ವಿವೇಕಾನಂದನನ್ನಾಗಿ ಸೃಷ್ಟಿಸಿದರು. ಅಬ್ದುಲ್ ಕಲಾಂ ಅವರು ಇನ್ನೊಬ್ಬರಿಗೆ ಸಹಾಯ ಮಾಡುವುದೇ ಆನಂದ ಎಂಬಂತೆ ಬೆಳೆದವರು. ಅವರು, ವಿಕಲಚೇತನರ ಶಾಲೆಗೆ ತೆರಳಿದ್ದಾಗ ಅಲ್ಲಿನ ಕಾಲಿಲ್ಲದ ಮಕ್ಕಳು 3ಕೆ.ಜಿ. ತೂಕದ ಕಬ್ಬಿಣದ ಕ್ಯಾಲಿಬರ್‌ಗಳನ್ನು ಅಳವಡಿಸಿಕೊಂಡು ಕಷ್ಟಪಡುವುದನ್ನು ತಿಳಿದು ಕೇವಲ 300 ಗ್ರಾಂ ತೂಕದ ಕಾರ್ಬನ್‌ ಕ್ಯಾಲಿಬರ್‌ ನೀಡಿದರು. ಇದು ಭಾರತೀಯ ಗುರುಕುಲ ಪದ್ಧತಿ ಶಿಕ್ಷಣದ ಮಹತ್ವವನ್ನು ಸಾರುತ್ತದೆ ಎಂದು ಹೇಳಿದರು.

Advertisement

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಅನಂತ ಪದ್ಮನಾಭ ಮಾತನಾಡಿ, ಗುರುಕುಲ ಕಳೆದ 24 ವರ್ಷಗಳಿಂದ ಪರೀಕ್ಷಾ ಒತ್ತಡ ರಹಿತ, ಸ್ವಾರ್ಥ ರಹಿತ ಉತ್ಕೃಷ್ಠ ಭಾರತೀಯ ಶಿಕ್ಷಣವನ್ನು ನೀಡುತ್ತಿದೆ. ಹರಿಹರಪುರದ ಗುರುಕುಲ ಕಾಶಿಯನ್ನು ನೆನಪಿಸುವಂತಹ ವಾತಾವರಣದಲ್ಲಿದೆ. ವ್ಯಕ್ತಿತ್ವ ವಿಕಸನ ನಡೆಯುತ್ತಿದೆ. ಅಲ್ಲಿ ಕಲಿತ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಹೆಸ‌ರು ಮಾಡಿ, ದೇಶ ವಿದೇಶಗಳಲ್ಲಿ ಸಂಸ್ಕೃತ ಸೇರಿದಂತೆ ಭಾರತೀಯ ಶಿಕ್ಷಣವನ್ನು ಬೆಳಗುತ್ತಿದ್ದಾರೆ ಎಂದು ತಿಳಿಸಿದರು.

ಅರ್ಧ ಮಂಡಲೋತ್ಸವ ಸಮಿತಿ ಕಾರ್ಯಾಧ್ಯಕ್ಷ ಎಚ್.ಪಿ.ರಾಜಗೋಪಾಲ್ ಮಾತನಾಡಿ, ಕಳೆದ ಒಂದು ವರ್ಷದಿಂದ ಗುರುಕುಲ ಶಿಕ್ಷಣದ ಮಹತ್ವವನ್ನು ಸಾರ್ವಜನಿಕರಿಗೆ ಮುಟ್ಟಿಸುವ ದೃಷ್ಟಿಯಿಂದ ತಾಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ಹೇಳಿದರು.

ಈ ವೇಳೆ ಗುರುಕುಲದ ಹಿರಿಯ ವಿದ್ಯಾರ್ಥಿಗಳು ಮತ್ತು ಪೋಷಕರು ತಮ್ಮ ಅನಿಸಿಕೆಗಳನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಗುರುಕುಲ ವ್ಯವಸ್ಥಾಪಕ ಉಮೇಶ್‌, ಶಾಸಕ ಎಂ.ಪಿ.ಕುಮಾರಸ್ವಾಮಿ, ಎಂಎಲ್ಸಿ, ಪ್ರಾಣೇಶ್‌, ದಿನೇಶ್‌ ದೇವವೃಂದ, ಜಯಂತ್‌ ಬಿದರಹಳ್ಳಿ, ಡಿ.ಬಿ.ಸುಬ್ಬೇಗೌಡ, ಪ್ರಮೋದ್‌ ದುಂಡುಗ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next