ಬಾಗಲಕೋಟೆ : ಪಕ್ಕದ ಬೆಳಗಾವಿ ಹಾಗೂ ಮಹಾರಾಷ್ಟ್ರದಲ್ಲಿ ಮಳೆಯಾಟ ನಿರಂತರವಾಗಿದ್ದು, ಇತ್ತ ಮುಳುಗಡೆ ಜಿಲ್ಲೆ ಬಾಗಲಕೋಟೆಯಲ್ಲಿ ಪ್ರವಾಹದ ಆತಂಕ ಹೆಚ್ಚುತ್ತಲೇ ಇದೆ. ಬೆಳಗಾವಿ-ಮುಧೋಳಕ್ಕೆ ಸಂಪರ್ಕ ಕಲ್ಪಿಸುವ ಮುಧೋಳ-ಯಾದವಾಡ ಸೇತುವೆ ಮಂಗಳವಾರ ಜಲಾವೃತಗೊಂಡಿದೆ.
ಮುಧೋಳ- ಯಾದವಾಡ ರಾಜ್ಯ ಹೆದ್ದಾರಿ ಸೇತುವೆ ಮೇಲೆ ಸುಮಾರು ಮೂರು ಅಡಿಯಷ್ಟು ನೀರು ಹರಿಯುತ್ತಿದ್ದು, ಸಂಚಾರ ಸ್ಥಗಿತಗೊಂಡಿದೆ. ಅಲ್ಲದೇ ಕೂಡಲ ಸಂಗಮದ ಸಂಗಮನಾಥ ದೇವಾಲಯದೊಳಗೆ ನಿನ್ನೆ ಎರಡಡಿಯಷ್ಟಿದ್ದ ನೀರು, ಮಂಗಳವಾರ ಮತ್ತಷ್ಟು ಹೆಚ್ಚಾಗಿದೆ.
ಕೂಡಲಸಂಗಮಕ್ಕೆ ಕೃಷ್ಣಾ, ಮಲಪ್ರಭಾ ನದಿಗಳ ನೀರಿನ ಹರಿಯುವ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಕೂಡಲಸಂಗಮಕ್ಕೆ ಪ್ರವಾಸಿಗರು ಹಾಗೂ ಭಕ್ತರ ಪ್ರವೇಶವನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ಪ್ರವಾಸಿಗರು, ಭಕ್ತರು ಪ್ರವಾಹ ಇಳಿಯುವವರೆಗೂ ಇತ್ತಕಡೆ ಬರಬೇಡಿ ಎಂದು ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಕೃಷ್ಣಾ ನದಿಗೆ ಇಳಿಕೆ ಕೃಷ್ಣಾ ನದಿಗೆ ಸೋಮವಾರ 2.30 ಲಕ್ಷ ಕ್ಕೂಸೆಕ್ ಇದ್ದ ನೀರಿನ ಹರಿವು, ಮಂಗಳವಾರ 1,75,378 ಕ್ಯೂಸೆಕ್‌ಗೆ ಇಳಿದಿದೆ. ಆದರೂ, ಕೃಷ್ಣಾ ನದಿ ಪಾತ್ರದ ಜಮಖಂಡಿ ತಾಲೂಕಿನಲ್ಲಿ ಪ್ರವಾಹ ಆತಂಕ ದೂರಾಗಿಲ್ಲ. ಕಂಕಣವಾಡಿ, ಮುತ್ತೂರ, ಮೈಗೂರ, ಶೂರ್ಪಾಲಿ ಗ್ರಾಮಗಳ ಜನರು, ತಾತ್ಕಾಲಿಕ ಪರಿಹಾರ ಕೇಂದ್ರಗಳಲ್ಲೇ ಆಶ್ರಯ ಪಡೆದಿದ್ದಾರೆ.
ಇನ್ನು 2ನೇ ಬಾರಿ ಮೂರು ದಿನಗಳ ನದಿ ಪಾತ್ರ ತುಂಬಿ ಹರಿಯುತ್ತಿದ್ದ ಮಲಪ್ರಭಾ ನದಿಯಲ್ಲೂ ಮಂಗಳವಾರ ಕೊಂಚ ನೀರು ಕಡಿಮೆಯಾಗಿದೆ. ಆದರೆ, ಮಲಪ್ರಭಾ ನದಿ ಉಗಮ ಸ್ಥಾನ ಹಾಗೂ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದ ಯಾವುದೇ ಸಂದರ್ಭದಲ್ಲಿ ನದಿ ಪಾತ್ರದಲ್ಲಿ ನೀರಿನ ಹರಿವು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಒಟ್ಟಾರೆ, ಜಿಲ್ಲೆಯ ಮೂರು ನದಿಗಳು ಈ ವರ್ಷ ಪಂಚಮಿ, ಶ್ರಾವಣ, ಗಣೇಶ ಉತ್ಸವ ಹಾಗೂ ಮೋಹರಂ ಯಾವ ಸಂಭ್ರಮಕ್ಕೂ ಬಿಟ್ಟಿಲ್ಲ. ನದಿ ಪಾತ್ರದ ಜನರು ನಿತ್ಯವೂ ಆತಂಕದಲ್ಲೇ ಜೀವನ ನಡೆಸುವಂತೆ ಮಾಡಿವೆ.